ಕನ್ನಡಪ್ರಭ ವಾರ್ತೆ ಸೊರಬ
ಧಾರ್ಮಿಕ ಆಚರಣೆಗಳನ್ನು ಸೇವಾ ಮನೋಭಾವ ಮೈಗೂಡಿಸಿಕೊಂಡು ಶ್ರದ್ಧಾ ಭಕ್ತಿಯಿಂದ ಆಚರಿಸಿದರೆ ಸುಖಕರ ಜೀವನ ನಡೆಸಬಹುದಾಗಿದೆ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ ಹೇಳಿದರು.ಮಂಗಳವಾರ ಗ್ರಾಮದ ರೇಣುಕಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ, ರೇಣುಕಾಂಬ ದೇವಿ ದಸರಾ ಉತ್ಸವ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 9ನೇ ವರ್ಷದ ರೇಣುಕಾಂಬ ದೇವಿಯ ದಸರಾ ಉತ್ಸವದ 5ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇವರನ್ನು ಪ್ರತಿನಿತ್ಯ ಆರಾಧಿಸುವುದರಿಂದ ಮನಸ್ಸು ಮತ್ತು ಆತ್ಮವನ್ನು ಶುದ್ಧಿ ಮಾಡಿಕೊಳ್ಳಬಹುದು. ದೇವಿಯ ಉತ್ಸವ ಆಚರಣೆಗಳನ್ನು ನಡೆಸುವುದರಿಂದ ಮನುಷ್ಯ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಚಂದ್ರಗುತ್ತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಸಮಾಜದಲ್ಲಿ ನಡೆಯುವ ಸಮಾಜಮುಖಿ ಕಾರ್ಯ ವೈಖರಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಚಂದ್ರಗುತ್ತಿಯಲ್ಲಿ ಪೊಲೀಸ್ ಠಾಣಾ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಠಾಣೆ ನಿರ್ಮಾಣವಾಗಲಿದೆ ಎಂದರು. ಮಲೆನಾಡಿನ ಶಕ್ತಿ ದೇವತೆ ರೇಣುಕಾಂಬೆಗೆ ನಾಡಿನಾದ್ಯಂತ ಅಪಾರ ಭಕ್ತರಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಸಾಗರ ಉಪ ವಿಭಾಗಾಧಿಕಾರಿ ಆರ್.ಯತೀಶ್ ಮಾತನಾಡಿ, ಕ್ಷೇತ್ರದಲ್ಲಿ 10 ಎಕರೆ ಪ್ರದೇಶವನ್ನು ಅಭಿವೃದ್ಧಿಗೆ ಗುರುತಿಸಲಾಗಿದ್ದು, ಶೀಘ್ರದಲ್ಲೇ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿದೆ. ಪ್ರತಿ ವರ್ಷ ನಡೆಯುವ ದಸರಾ ಉತ್ಸವವನ್ನು ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ನಡೆಸಲು ಚಿಂತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ವೇಳೆ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಧರ್ಮದರ್ಶಿ ಡಾ.ರಾಮಪ್ಪ, ಸಾಗರ ಎಸಿ ಆರ್.ಯತೀಶ್ ಅವರನ್ನು ಶ್ರೀ ರೇಣುಕಾಂಬ ದಸರಾ ಉತ್ಸವ ಆಚರಣೆ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಆರ್.ಶ್ರೀಧರ್ ಹುಲ್ತಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಸ್ಕಾಂ ನಿವೃತ್ತ ಹಣಕಾಸು ನಿರ್ದೇಶಕ ಬಿ.ಮಂಜುನಾಥ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಂಜಯ್ ಚಾಟೆ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಜಯಶೀಲಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯರಾದ ಸುನೀಲ್‌ಗೌಡ, ಎನ್.ಜಿ.ನಾಗರಾಜ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾಕುಮಾರಿ, ಸಮಿತಿಯ ಕಾರ್ಯದರ್ಶಿ ಪ್ರಜ್ವಲ್ ಚಂದ್ರಗುತ್ತಿ, ವಸಂತ ಶೇಟ್, ಷಣ್ಮುಖಪ್ಪ ಚನ್ನಪಟ್ಟಣ, ವಿನಾಯಕ ಹೆಗಡೆ, ದರ್ಶನ್ ಚಿಕ್ಕಮಾಕೊಪ್ಪ, ಪ್ರದೀಪ್ ಬಾಡದಬೈಲು, ಗುರು ಬರದವಳ್ಳಿ, ಗಣೇಶ್ ಮರಡಿ, ಪ್ರಶಾಂತ್ ಮೊದಲಾದವರು ಹಾಜರಿದ್ದರು.