ಕಾವೇರಿ ನಿಸರ್ಗಧಾಮದಲ್ಲಿ ಉಚಿತ ಪ್ರವಾಸದೊಂದಿಗೆ ‘ಪ್ರಕೃತಿಯಲ್ಲಿ ಪುಸ್ತಕ ಓದು’

KannadaprabhaNewsNetwork |  
Published : Jan 23, 2025, 12:48 AM IST
ವೀಕೇರ್ ಸಂಸ್ಥೆ ವತಿಯಿಂದ ಕಾವೇರಿ‌ ನಿಸರ್ಗಧಾಮದಲ್ಲಿ ನಡೆದ ಕಾರ್ಯಕ್ರಮ | Kannada Prabha

ಸಾರಾಂಶ

ಸತತ ಪುಸ್ತಕ ಓದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದ ಮಕ್ಕಳನ್ನು ಉತ್ತೇಜಿಸಲು ಮೈಸೂರಿನ ವಿಕೇರ್ ಸಂಸ್ಥೆಯಿಂದ ಕುಶಾಲನಗರದ ಕಾವೇರಿ ನಿಸರ್ಗಧಾಮಕ್ಕೆ ಉಚಿತ ಪ್ರವಾಸದೊಂದಿಗೆ ‘ಪ್ರಕೃತಿಯಲ್ಲಿ ಪುಸ್ತಕ ಓದು’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಶ್ರದ್ಧೆ, ಪರಿಶ್ರಮ ಹಾಗೂ ಸತತವಾಗಿ ಗುರಿಯ ಬೆನ್ನು ಹತ್ತುವ ಮಹತ್ವದ ಬಗ್ಗೆ ಕಥೆಗಳ ಮೂಲಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದು ಹಿರಿಯ ಸಾಹಿತಿ ಕಣಿವೆ ಭಾರದ್ವಾಜ್ ಕೆ.ಆನಂದತೀರ್ಥ ಹೇಳಿದ್ದಾರೆ.

ಸತತ ಪುಸ್ತಕ ಓದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದ ಮಕ್ಕಳನ್ನು ಉತ್ತೇಜಿಸಲು ಮೈಸೂರಿನ ವಿಕೇರ್ ಸಂಸ್ಥೆಯಿಂದ ಕುಶಾಲನಗರದ ಕಾವೇರಿ ನಿಸರ್ಗಧಾಮಕ್ಕೆ ಉಚಿತ ಪ್ರವಾಸದೊಂದಿಗೆ ಆಯೋಜಿಸಲಾಗಿದ್ದ ‘ಪ್ರಕೃತಿಯಲ್ಲಿ ಪುಸ್ತಕ ಓದು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾಂತ್ರಿಕ ಯುಗದಲ್ಲಿ ಪುಸ್ತಕ ಓದು ಅತ್ಯಂತ ದುಸ್ತರವಾಗಿರುವ ಹೊತ್ತಿನಲ್ಲಿ ಎಳೆಯ ತಲೆಮಾರಿನ ನಡುವೆ ಅದನ್ನು ಹವ್ಯಾಸವನ್ನಾಗಿಸುವ ಪ್ರಯತ್ನ ನಿಜಕ್ಕೂ ಆಶಾದಾಯಕ. ಈ ಕಾರ್ಯದ ಮೂಲಕ ಮುಂದೆ ಸ್ವಸ್ಥ ಸಮಾಜ ಕಟ್ಟಬಹುದಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ವೀ ಕೇರ್‌ ಸಂಸ್ಥೆಯ ಸಂಸ್ಥಾಪಕಿ ಡಾ.ಕುಮುದಿನಿ, ಸಂಸ್ಥೆ ಕಳೆದ 12 ವರ್ಷಗಳಿಂದ ಸಮಾಜ ಕಾರ್ಯ ಅಧ್ಯಯನಗಳ ಮೂಲಕ ಮಕ್ಕಳ ಮತ್ತು ಮಹಿಳೆಯರ ಅಗತ್ಯತೆಗಳನ್ನು ಕಂಡುಕೊಳ್ಳುತ್ತಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವವರ ಬೆಳವಣಿಗೆಗೆ ಅನುಕೂಲಕರವಾದಂತಹ, ಬೌದ್ಧಿಕ ಹಾಗೂ ಸಾಂಸ್ಕೃತಿಕ ವಾತಾವರಣ ಒದಗಿಸಲು ಅವರಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ತುಂಬಲು ಅನುಕೂಲಕರವಾದ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದೆ ಎಂದರು.

ಇಂದು ಯುವ ಸಮಾಜ ಎಲ್ಲದಕ್ಕೂ ಮೊಬೈಲ್ ಮತ್ತು ಟಿವಿಗಳನ್ನು ಆಶ್ರಯಿಸಿ, ಸುಲಭ ಮಾರ್ಗದಲ್ಲಿ ಬದುಕಲು ಹೊರಟು, ಮೌಲ್ಯರಹಿತ ಜೀವನ ನಡೆಸುವಂತಾಗಿದೆ. ಇದರಿಂದಾಗಿ ಮಾನಸಿಕ, ಸಾಮಾಜಿಕ ದೈಹಿಕ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಅನೇಕ ಯುವಕರು ತಮ್ಮ ವೈಯಕ್ತಿಕ ಹಾಗೂ ಸಾಂಸಾರಿಕ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಪಿರಿಯಾಪಟ್ಟಣ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ದೇವರಾಜ್ ಭಾಷೆಯ ಮಹತ್ವ, ಓದಿನ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ, ವ್ಯಕ್ತಿಗಳು ಸ್ಥಳಗಳು ಹಾಗೂ ಪುಸ್ತಕಗಳು ನಮ್ಮ ಬದುಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿವೆ ಎಂದರು.

ವೀ ಕೇರ್ ಸಂಸ್ಥೆಯ ಧರ್ಮದರ್ಶಿ ರವಿ ಬಳೆ ಮಾತನಾಡಿದರು.

ಪುಸ್ತಕ ಓದು ಕಾರ್ಯಕ್ರಮದ ಭಾಗವಾಗಿ ತೇಜಸ್ವಿಯವರ ‘ಪಾಕಕ್ರಾಂತಿ’ ಪುಸ್ತಕದ ಆಯ್ದ ಭಾಗವನ್ನು ಒಡನಾಡಿಯ ಸ್ಟ್ಯಾನ್ಲಿ ವಾಚಿಸಿದರು.

ಕುವೆಂಪು ಅವರ ಮಕ್ಕಳ ನಾಟಕ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ಯನ್ನು ಮಕ್ಕಳು ನೃತ್ಯ ರೂಪಕದ ರೀತಿ ಡಿಸಿದರು.

ಯುವ ಮುಖಂಡರಾದ ಸೋಮವಾರಪೇಟೆಯ ಲಾರೆನ್ಸ್, ಮಾಜಿ ಸೈನಿಕ ಅಶೋಕ್ , ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗಪ್ಪ, ಪಿರಿಯಾಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಆಶಾ ಮಹಾದೇವ್, ಮಹೇಶ್ ಕಣಿವೆ, ಪಿರಿಯಾಪಟ್ಟಣ ‌ಕಸಾಪ ಪ್ರಮುಖ ನವೀನ್ ಕುಮಾರ್, ವಿ ಕೇರ್ ಕಾರ್ಯಕರ್ತೆ ಸಿಂಚನ, ಶಿವರಂಜಿನಿ ಮತ್ತಿತರರು ಸಹಭಾಗಿಗಳಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!