‘ಕೃಷಿಗೆ ರಸಗೊಬ್ಬರ ಬಳಕೆ ಕಡಿಮೆ ಮಾಡಿ’

KannadaprabhaNewsNetwork | Published : Apr 24, 2024 2:26 AM

ಸಾರಾಂಶ

ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು. ಆ ಮೂಲಕ ಪ್ರಾಕೃತಿಕ ಸಮತೋಲನ ಕಾಪಾಡಬೇಕು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಅಧಿಕ ಇಳುವರಿಯನ್ನು ಪಡೆಯುವ ಉದ್ದೇಶದಿಂದ ರಾಸಾಯನಿಕ ಗೊಬ್ಬರ, ಔಷಧಿಗಳ ಬಳಕೆ ಹೆಚ್ಚಾಗುತ್ತಿದ್ದು, ಅದರಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೆ.ಎಂ. ಹರೀಶ್ ತಿಳಿಸಿದರು.

ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ, ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ಲಂಚ ನಿಷೇಧ ಕಾಯ್ದೆ ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ರಸಗೊಬ್ಬರ ಬಳಕೆ ಕಡಿಮೆ ಮಾಡಿ

ಪರಿಸರ ನಮ್ಮ ಆಸ್ತಿ. ಪರಿಸರ ಸುಂದರವಾಗಿದ್ದರೆ ನಮ್ಮ ಬದುಕು ಸುಂದರ, ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಜೀವನ ಸ್ವಚ್ಛ. ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ನಾವು ನಮ್ಮ ಸುಂದರ ಪರಿಸರದ ಮೇಲೆ ಪ್ರಹಾರ ಮಾಡುತ್ತಿದ್ದೇವೆ. ಆದ್ದರಿಂದ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು. ಆ ಮೂಲಕ ಪ್ರಾಕೃತಿಕ ಸಮತೋಲನ ಕಾಪಾಡಬೇಕು ಎಂದರು.

ಲಂಚ ನೀಡುವುದೂ ಅಪರಾಧ

ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದು ಎಷ್ಟು ಅಪರಾಧವೋ, ಅವರಿಗೆ ಲಂಚ ನೀಡುವುದು ಸಹ ಅಷ್ಟೇ ಅಪರಾಧವಾಗಿದೆ. ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನಿನಡಿ ಶಿಕ್ಷೆ ನೀಡಬಹುದು. ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಸಾರ್ವಜನಿಕರೂ ಸಹ ಮುಂದಾಗಬೇಕೆಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ, ಉಪಾಧ್ಯಕ್ಷ ನಂದೀಶ್ವರರೆಡ್ಡಿ, ವಕೀಲರಾದ ಅಮರೇಶ್, ಅಭಿಷೇಕ್, ಪವಿತ್ರ, ಶ್ರಾವಣಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.

23ಜಿಯುಡಿ1: ಗುಡಿಬಂಡೆ ಪಟ್ಟಣ ನ್ಯಾಯಾಲಯದ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆಯಲ್ಲಿ ನ್ಯಾ.ಹರೀಶ್ ಮಾತನಾಡಿದರು.

Share this article