ರೇಣುಕಾಸ್ವಾಮಿ ಕೊಲೆ: ಮುಗಿಲು ಮುಟ್ಟಿದ ಆಕ್ರಂದನ

KannadaprabhaNewsNetwork | Published : Jun 12, 2024 12:37 AM

ಸಾರಾಂಶ

ಜೋಗಿಮಟ್ಟಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ । ಇಂದು ಚಿತ್ರದುರ್ಗದಲ್ಲಿ ಬೃಹತ್‌ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗಬೆಂಗಳೂರಿನಲ್ಲಿ ಹತ್ಯೆಯಾದ ರೇಣುಕಾಸ್ವಾಮಿಯ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ಚಿತ್ರದುರ್ಗಕ್ಕೆ ತರಲಾಯಿತು. ಪಾರ್ಥಿವ ಶರೀರ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ ಈತನ ಸಾವಿಗೆ ಚಿತ್ರದುರ್ಗದ ಜನತೆಯೂ ಕಂಬನಿ ಮಿಡಿದಿದ್ದು ಕೊಲೆಗಾರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾತ್ರಿಯೇ ಅಂತ್ಯ ಸಂಸ್ಕಾರ: ಮಂಗಳವಾರ ರಾತ್ರಿ ಚಿತ್ರದುರ್ಗಕ್ಕೆ ತರಲಾದ ಮೃತ ದೇಹವನ್ನು ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು. ನಮಗೆ ನ್ಯಾಯ ಕೊಡಿಸಿ: ಕೊಲೆಯಾದ ರೇಣುಕಾಸ್ವಾಮಿಯ ಪತ್ನಿ ಸಹನಾ ಮಾದ್ಯಮಗಳ ಮುಂದೆ ಕಣ್ಣೀರಿಡುತ್ತಾ ನನ್ನ ಮನೆಯವರಿಗೆ ನ್ಯಾಯ ಕೊಡಿಸಿ, ನಾನು ಗರ್ಭೀಣಿ ಇದ್ದೀನಿ ಇವಾಗ ಹಿಂಗ್‌ ಆದರೆ ಏನು ಮಾಡಲಿ, ಶನಿವಾರ ಕರೆ ಮಾಡಿ ಮಾತನಾಡಿದ್ದೇ ಕೊನೆ, ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದಳು.

ನಂತರ ಮೃತ ರೇಣುಕಾಸ್ವಾಮಿಯ ಮನೆಗೆ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌, ಭಾವನಾ ಬೆಳಗೆರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾವನ ಬೆಳಗೆರೆ, ರೇಣುಕಾಸ್ವಾಮಿಯ ಕುಟುಂಬಸ್ಥರು ತುಂಬಾ ಮುಗ್ದರು ಅವರನ್ನು ನೋಡಿದರೆ ವೇದನೆಯಾಗುತ್ತದೆ. ಆತನ ಹೆಂಡತಿ ಅಮಾಯಕಳಿದ್ದಾಳೆ. ಫೇಸ್‌ ಬುಕ್‌ ಜೊತೆಗಿನ ಸಂಬಂದದ ಬಗ್ಗೆ ಮನೆಯವರಿಗೆ ಏನೂ ಗೊತ್ತಿಲ್ಲ, ಒಂದು ವೇಳೆ ಆತ ವೈಯಕ್ತಿಕ ಕಾಮೆಂಟ್‌ ಮಾಡಿದ್ದರೆ ಅದಕ್ಕೆ ಸೈಬರ್‌ ಕ್ರೈಮ್‌ ಇಲಾಖೆ ಇದೆ, ಪ್ರಾಣ ತೆಗೆಯುವ ಮಟ್ಟಕ್ಕೆ ಸೋಶಿಯಲ್‌ ಮೀಡಿಯಾ ಹೊಗುತ್ತಿರುವುದು ಆತಂಕ. ದರ್ಶನ ಈ ಕೊಲೆಯಲ್ಲಿ ಭಾಗಿಯಾಗಿದ್ದರೆ ಆವರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಮಾತನಾಡಿ, ರೇಣುಕಾಸ್ವಾಮಿಯದು ಮಾನವೀಯ ಕೊಲೆ, ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಕಾನೂನು ಕೈಗೆತ್ತಿಕೊಂಡವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಕೊಲೆ ಖಂಡಿಸಿ ಇಂದು ಚಿತ್ರದುರ್ಗದಲ್ಲಿ ಪ್ರತಿಭಟನೆ

ರೇಣುಕಾಸ್ವಾಮಿಯ ಕೊಲೆ ಖಂಡಿಸಿ ಚಿತ್ರದುರ್ಗದಲ್ಲಿ ಬುಧವಾರ ವೀರಶೈವ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನಾ ಮೇರವಣಿಗೆ ನೀಲಕಂಠೇಶ್ವರ ದೇವಾಯದಿಂದ ಡಿಸಿ ಕಛೇರಿಯವರೆಗೆ ಸಾಗಲಿದ್ದು ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕಲ್ಲೇಶಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share this article