ಕನ್ನಡಪ್ರಭ ವಾರ್ತೆ ಸಕಲೇಶಪುರ ಹಲವು ವರ್ಷಗಳಿಂದ ನಡೆಯುತ್ತಿದ್ದ ಮೂರ್ಕಣ್ಣು ಗುಡ್ಡ ವ್ಯಾಪ್ತಿಯ ಸೆಕ್ಷನ್ 4ರ ಹೋರಾಟ ಇದೀಗ ತನ್ನ ಆಯಾಮವನ್ನೇ ಬದಲಿಸಿದೆ. 100 ವರ್ಷಗಳ ಹಿಂದಿನ ದಾಖಲೆಗಳ ಹುಡುಕಾಟದಲ್ಲಿ ತೊಡಗಿದ್ದ ಈ ಭಾಗದ ಜನರೀಗ ನೀರಿನಲ್ಲಿ ಹುಣಸೆಹಣ್ಣು ತೊಳೆಯುವ ಪ್ರಯತ್ನ ಕೈಬಿಟ್ಟು ಸಂಘಟಿತ ಹೋರಾಟದಿಂದ ನ್ಯಾಯ ಪಡೆಯುವ ಪ್ರಯತ್ನದಲ್ಲಿದ್ದಾರೆ. ತಾಲೂಕಿನ ಹಾನುಬಾಳು ಹೋಬಳಿಯ ಕಾಡುಮನೆ, ನಡಹಳ್ಳಿ, ಅಚ್ಚನಹಳ್ಳಿ, ಅಗ್ನಿ, ದೇವಾಲದಕೆರೆ, ಮಂಚೇನಹಳ್ಳಿ ಸೇರಿದಂತೆ ನಾಲ್ಕು ಗ್ರಾಪಂಗಳ ಸುಮಾರು 11 ಗ್ರಾಮಗಳನ್ನೊಳಗೊಂಡ 7900 ಎಕರೆ ಪ್ರದೇಶವನ್ನು 1920ರ ಆಸುಪಾಸಿನಲ್ಲಿ ಅಂದಿನ ಮೈಸೂರು ರಾಜಾಡಳಿತ ರಕ್ಷಿತಾರಣ್ಯ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸೆಕ್ಷನ್ 4 ನ್ನು ಜಾರಿಗೊಳಿಸಿತ್ತು. ಆದರೆ, ರಕ್ಷಿತಾರಣ್ಯ ಮಾಡುವ ಹಂತದಲ್ಲಿ ಜಾರಿಗೊಳಿಸಬೇಕಿದ್ದ ಸೆಕ್ಷನ್ 5ರಿಂದ 17ರವರೆಗೆ ಯಾವುದೇ ಹಂತವನ್ನು ಜಾರಿಗೊಳಿಸದೆ ಇಡಿ ಯೋಜನೆಯನ್ನು ಅಮಾನತ್ತಿನಲ್ಲಿಟ್ಟಿತ್ತು. ಆದರೆ, ಈ ಯೋಜನೆ ಆರಂಭಗೊಂಡು ಶತಮಾನ ಕಳೆದ ನಂತರ 2020ರ ಹೊಸ್ತಿಲಿನಲ್ಲಿ ಮತ್ತೆ ಮೂರ್ಕಣ್ಣು ಗುಡ್ಡ ವ್ಯಾಪ್ತಿಯನ್ನು ಮತ್ತೆ ರಕ್ಷಿತಾರಣ್ಯ ಮಾಡುವ ವಿಚಾರ ಮನ್ನೆಲೆಗೆ ಬಂದಿದ್ದು, ಈ ವ್ಯಾಪ್ತಿಯ ಸುಮಾರು ಐದುನೂರ ಆರಕ್ಕೂ ಅಧಿಕ ಕುಟುಂಬಗಳಿಗೆ ನೋಟಿಸ್ ನೀಡುವುದರೊಂದಿಗೆ ಆರಂಭವಾದ ಅರಣ್ಯ ಇಲಾಖೆಯ ರಕ್ಷಿತಾರಣ್ಯ ಮಾಡುವ ಕಾರ್ಯಾಚರಣೆ ಕಳೆದ ಅರ್ಧ ದಶಕದಿಂದ ತೀವ್ರಗತಿಯಲ್ಲಿ ಸಾಗಿದೆ.
ಹಲವು ಬೆಳೆಗಾರರ ತೋಟಗಳನ್ನು ತೆರವುಗೊಳಿಸುವುದು ಹಾಗೂ ಹೊಸ ಕಾಮಗಾರಿಗೆ ಅಡ್ಡಿಪಡಿಸುವ ಹಂತಕ್ಕೂ ಹೋಗಿದ್ದು, ರಸ್ತೆ ಕಾಮಗಾರಿಯನ್ನು ನಡೆಸದಂತೆ ತಡೆದ ಅರಣ್ಯ ಇಲಾಖೆಯ ನೌಕರರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಹಲವರ ಇಡೀ ತೋಟಗಳು ಸೆಕ್ಷನ್ 4 ವ್ಯಾಪ್ತಿಗೆ ಬರಲಿವೆ ಎಂದು ಅರಣ್ಯ ಇಲಾಖೆ ಸರ್ವೇ ನಡೆಸಿ ಗುರುತಿನ ಗಡಿಯನ್ನು ನಿರ್ಮಿಸಿದ್ದರೆ ಇನ್ನೂ ಸಾಕಷ್ಟು ಜನರ ಭಾಗಶಃ ತೋಟಗಳು ಸೆಕ್ಷನ್ 4 ವ್ಯಾಪ್ತಿಗೆ ಬರಲಿವೆ ಎಂದು ಗಡಿ ಗುರುತಿಸಿದ ಇಲಾಖೆ ಸೆಕ್ಷನ್ 4 ವ್ಯಾಪ್ತಿಗೆ ಬರುವ ತೋಟಗಳಲ್ಲಿ ಯಾವುದೇ ಕೆಲಸಗಳನ್ನು ಮಾಡದಂತೆ ನಿರ್ಬಂಧ ವಿಧಿಸಿದ್ದಲ್ಲದೆ ಪರಭಾರೆಗೂ ನಿಷೇಧ ಹೇರಿದೆ. ಈ ಯೋಜನೆ ಜಾರಿಯಾದರೆ ಅಕ್ಷರಶಃ ಇವರೆಲ್ಲ ಬೀದಿಗೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.ದಾಖಲೆಗಳು ಸಿಗುತ್ತಿಲ್ಲ: ಅರಣ್ಯ ಇಲಾಖೆಯ ಈ ನಡೆಯನ್ನು ವಿರೋಧಿಸಿ ಹಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತೋಟಗಳನ್ನು ನಿರ್ವಹಿಸುತ್ತಿದ್ದರೆ ಕೆಲವರು ಕಟ್ಟಡ ಕಾಮಗಾರಿ ಮುಂದುವರೆಸಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆ ಕಿರುಕುಳ ನಿರಂತರವಾಗಿ ಮುಂದುವರಿದ ಹಿನ್ನೆಲೆಯಲ್ಲಿ ಹೋರಾಟಕ್ಕಿಳಿದ ಈ ಭಾಗದ ಜನರು ಸೆಕ್ಷನ್ 4 ನ್ನು 1924ರಲ್ಲೆ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಅಂದಿನ ರಾಜಾಡಳಿತ ಹಿಂದೆ ಪಡೆದಿದೆ ಎಂಬ ವಾದ ಮುಂದಿಟ್ಟು ದಾಖಲೆ ಸಂಗ್ರಹಕ್ಕೆ ಮುಂದಾಗಿತ್ತು. ಹೀಗೆ ದಾಖಲೆ ಸಂಗ್ರಹದ ಪ್ರಯತ್ನದಲ್ಲಿದ್ದ ವೇಳೆ ಈ ಭಾಗದ ಸುಮಾರ 7 ಕುಟುಂಬಗಳ 2800 ಎಕರೆ ಭೂಮಿಯನ್ನು ಸೆಕ್ಷನ್ 4ರಿಂದ ಕೈ ಬಿಟ್ಟಿರುವುದನ್ನು ಹೊರತುಪಡಿಸಿ ಉಳಿದ ಜಮೀನನ್ನು ಸೆಕ್ಷನ್ 4ರಿಂದ ಕೈ ಬಿಟ್ಟಿರುವ ಯಾವುದೇ ದಾಖಲೆಗಳು ದೊರಕದಾಗಿತ್ತು. ಅದರಲ್ಲೂ ಹಿಂದಿನ ಉಪವಿಭಾಗಾಧಿಕಾರಿಯಾಗಿದ್ದ ಪ್ರತೀಕ್ ಬಯಾಲ್ ಹಾಗೂ ಹಿಂದೆ ಕ್ಷೇತ್ರಕ್ಕೆ ರಾಜಕೀಯ ಸ್ಪರ್ಧಿಯಾಗಿ ಆಗಮಿಸಿದ್ದ ನಾರ್ವೇ ಸೋಮಶೇಖರ್ ಸೆಕ್ಷನ್ 4ನಿಂದ ಈ ಭಾಗದ ಜಮೀನನ್ನು ಕೈ ಬಿಟ್ಟಿರುವ ದಾಖಲೆಗಳ ಶೋಧಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದು, ವಿಧಾನಸೌಧದ ದಾಖಲೆ ಸಂಗ್ರಹಗಾರವನ್ನು ಜಾಲಾಡಿಸಿದರಾದರೂ ಯಾವುದೇ ಪ್ರಯೋಜವಾಗಿರಲಿಲ್ಲ.
ನ್ಯಾಯಾಲಯಕ್ಕೆ ದೂರು: ಈ ಮಧ್ಯೆ ಅರಣ್ಯ ಇಲಾಖೆ ಸೇಕ್ಷನ್ ೪ ಅನ್ನು ಉಲ್ಲಂಘಿಸಿದರೆಂಬ ಕಾರಣಕ್ಕೆ ಸುಮಾರು 40 ಜನರ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದು, ಇತ್ತೀಚೆಗೆ ವಿಚಾರಣೆ ಮುಗಿಯುವ ಹಂತಕ್ಕೆ ತಲುಪಿದೆ. ಸೆಕ್ಷನ್ 4 ರ ಹಂತ ಸೆಕ್ಷನ್ 7 ಕ್ಕೆ ತಲುಪಿದೆ. ಇದರಿಂದ ಎಚ್ಚೆತ್ತಿರುವ ಜನರು ಹೋರಾಟದ ಮನೋಬಲವನ್ನೆ ಬದಲಿಸಿಕೊಂಡಿದ್ದು ಸೆಕ್ಷನ್ 4 ದಾಖಲೆ ಕೈ ಬಿಟ್ಟಿರುವುದರ ಬದಲಾಗಿ ಶತಮಾನದ ಹಿಂದಿನ ಯೋಜನೆ ಜಾರಿಯ ಹಕೀಕತ್ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಶತಮಾನದ ಹಿಂದಿನ ಜನಜೀವನಕ್ಕೂ ಇಂದಿನ ಜೀವನಕ್ಕೂ ಇರುವ ವ್ಯತ್ಯಾಸದ ಬಗ್ಗೆ ಮಾತನಾಡುತ್ತಿದ್ದು ರಕ್ಷಿತಾರಣ್ಯವಾಗದ ಮೂರ್ಕಣ್ಣು ಗುಡ್ಡವ್ಯಾಪ್ತಿಯ ಹಲವೆಡೆ ರಕ್ಷಿತಾರಣ್ಯದ ನಾಮಫಲಕ ಆಳವಡಿಸಿರುವ ಬಗ್ಗೆ ಅರಣ್ಯ ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಜಾಗೃತಗೊಂಡಿರುವ ಜನರು ಈಗ ರಕ್ಷಿತಾರಣ್ಯ ಎಂದು ಘೋಷಿಸುವ ಮುನ್ನ ಜಾರಿಗೊಳಿಸಬೇಕಾಗಿರುವ ಸೆಕ್ಷನ್‌ಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗೆಳೊಂದಿಗೆ ಚರ್ಚೆ ನಡೆಸಲಾರಂಭಿಸಿದ್ದಾರೆ. ಇದರಿಂದ ಹತಾಶೆಗೊಂಡಿರುವ ಸ್ಥಳೀಯ ಅಧಿಕಾರಿಗಳು ಉತ್ತರ ನೀಡಲಾಗದೆ ತಡಬಡಾಯಿಸುತಿದ್ದಾರೆ. ಅದರಲ್ಲೂ ಕಾಡುಮನೆ ಗ್ರಾಮದಲ್ಲಿ ಇತ್ತೀಚೆಗೆ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ಸಂತ್ರಸ್ತ ಗ್ರಾಮಸ್ಥರು ನಡೆಸಿದ ಸಭೆ ಅಕ್ಷರಶಃ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದುವರೆಗೆ ಸೆಕ್ಷನ್ 4 ಕೈ ಬಿಟ್ಟಿರುವ ದಾಖಲೆಗಳ ಸಂಗ್ರಹಕ್ಕೆ ಚಿಂತಿಸುತ್ತಿದ್ದ ಗ್ರಾಮಸ್ಥರು ಈಗ ಯೋಜನೆ ಜಾರಿಯಲ್ಲಿ ಅರಣ್ಯ ಇಲಾಖೆ ವೈಫಲ್ಯವನ್ನು ಎತ್ತಿಹಿಡಿದು ರಕ್ಷಿತಾರಣ್ಯ ಮಾಡುವ ಯೋಜನೆಯನ್ನೇ ಕೈಬಿಡುವಂತೆ ಮಾಡುವ ಪ್ರಯತ್ನ ಸದ್ಯ ಆರಂಭವಾಗಿದೆ. ಮೊದಲ ಹಂತವಾಗಿ ಸಮಾಲೋಚನಾ ಸಭೆ ನಡೆಸಿದ ನಂತರ ಇತರೆ ಹೋರಾಟಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಸಂತ್ರಸ್ತರೆಲ್ಲ ಒಂದಾಗಿ ಹೋರಾಟಕ್ಕೆ ಅನುದಾನ ಕ್ರೋಢೀಕರಿಸಲಾರಂಭಿಸಿದ್ದು ಶಾಸಕರ ನೇತೃತ್ವದಲ್ಲಿ ವಿಧಾನಸೌಧದ ಮೆಟ್ಟಿಲಿನವರೆಗೂ ಈ ಹೋರಾಟ ಕೊಂಡೊಯ್ಯಲು ಚಿಂತನೆ ನಡೆದಿದೆ. ಇದರಿಂದಾಗಿ ಇನ್ನೇನು ತಮ್ಮ ಜಮೀನು ಕೈ ಬಿಟ್ಟು ಹೋಗಲಿದೆ ಎಂದು ಹತಾಶೆಗೊಂಡಿದ್ದ ಜನರಿಗೆ ಬದಲಾದ ಹೋರಾಟದ ದಿಕ್ಕು ಅಲ್ಪ ನೆಮ್ಮದಿಯ ಉಸಿರು ಚೆಲ್ಲುವಂತೆ ಮಾಡಿದೆ.
----------------------------------------------------------------ಹೇಳಿಕೆ2ನೂರು ವರ್ಷಗಳಲ್ಲಿ ಹತ್ತಾರು ತಲೆಮಾರುಗಳೇ ಬದಲಾಗುವುದರೊಂದಿಗೆ ಜೀವನಶೈಲಿಯು ಬದಲಾಗಿದೆ. ಇಂತಹ ಸಂದರ್ಭದಲ್ಲಿ ನೂರು ವರ್ಷಗಳ ಹಿಂದಿನ ಯೋಜನೆಯನ್ನು ಇಂದು ಜಾರಿಗೊಳಿಸುವುದು ಯಾವ ನ್ಯಾಯ.
ಸುಭಾಷ್, ಅಚ್ಚನಹಳ್ಳಿ ಗ್ರಾಮಸ್ಥ ಹೇಳಿಕೆ2- ಯೋಜನಾ ವ್ಯಾಪ್ತಿಯ ಎಲ್ಲರೂ ಒಂದಾಗಿ ಹೋರಾಟ ಮಾಡುವುದರಿಂದ ನ್ಯಾಯ ದೊರೆಯಲಿದೆ. ಈ ಭಾಗದ ಜನರಿಗೆ ನ್ಯಾಯ ದೊರಕಿಸಲು ಸಂತ್ರಸ್ತರು ರೂಪಿಸುವ ಎಲ್ಲ ತರಹದ ಹೋರಾಟಕ್ಕೂ ನಾನು ಧುಮಕಲಿದ್ದೇನೆ.
ಸಿಮೆಂಟ್ ಮಂಜು, ಶಾಸಕ