ಮಂಡ್ಯ ಮಂಜುನಾಥ
ಭೀಕರ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರು ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಹಾಗೂ ಮುಂದಿನ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಕೊಳವೆ ಬಾವಿಗಳ ನಿರ್ಮಾಣಕ್ಕೆ ದುಂಬಾಲು ಬಿದ್ದಿದ್ದಾರೆ. ಅಂತರ್ಜಲ ಪಾತಾಳ ಸೇರಿರುವ ಹೊತ್ತಿನಲ್ಲಿ ೭೦೦-೮೦೦ ಅಡಿವರೆಗೆ ಕೊರೆದರೂ ಗಂಗೆ ಉಕ್ಕಿ ಬರುತ್ತಿಲ್ಲ. ಪರಿಣಾಮ ಅನ್ನದಾತರು ಸಾಲದ ಕೂಪಕ್ಕೆ ಸಿಲುಕುತ್ತಿದ್ದಾರೆ.
ಕಳೆದ ವರ್ಷ ಮಳೆ ಅಭಾವ, ನೀರಿನ ಕೊರತೆ, ರಣಬಿಸಿಲಿನ ಪರಿಣಾಮ ರೈತರ ಜಮೀನುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ. ಬೋರ್‌ವೆಲ್‌ಗಳಲ್ಲಿ ನೀರು ಸ್ಥಗಿತಗೊಂಡಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ರೈತರು ಹೊಸ ಬೋರ್‌ವೆಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ದುರದೃಷ್ಟವೋ ಏನೋ ಬಹುತೇಕ ಹೊಸ ಕೊಳವೆ ಬಾವಿಗಳಲ್ಲಿ ನೀರು ಬರುತ್ತಲೇ ಇಲ್ಲ. ಲಕ್ಷಗಟ್ಟಲೆ ಹಣ ವ್ಯಯಿಸಿ ಕೊರೆಸಿದ ಬೋರ್‌ವೆಲ್‌ಗಳಲ್ಲಿ ನೀರು ಬಾರದಿರುವುದರಿಂದ ರೈತರು ತೀವ್ರ ಹತಾಶರಾಗಿದ್ದಾರೆ.ಮನೆಯಲ್ಲಿದ್ದ ಚಿನ್ನ, ಜಮೀನು, ಓಡಾಟಕ್ಕಿದ್ದ ವಾಹನಗಳನ್ನು ಅಡವಿಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಕೂಡಿಟ್ಟ ಹಣವನ್ನು ತೆಗೆದು ಕೊಳವೆಬಾವಿ ನಿರ್ಮಿಸುತ್ತಿದ್ದಾರೆ. ಕೆಲವರು ಕೊರೆಸಿದ ಬೋರ್‌ವೆಲ್‌ಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿದ್ದು ಅದು ಕೃಷಿ ಚಟುವಟಿಕೆಗೆ ಸಾಲದಂತಾಗಿದೆ. ಆದರೂ ಹಠ ಬಿಡದೆ ಕೊಳವೆ ಬಾವಿ ನಿರ್ಮಿಸಲು ರೈತರು ಮುಂದಾಗುತ್ತಾ ಸಾಲದ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್‌ತಿದ್ದಾರೆ.
ಗ್ರಾಮೀಣ ಭಾಗದ ಬಹುತೇಕ ಜನರು ಬರಗಾಲದ ಹೊತ್ತಿನಲ್ಲಿ ಜಮೀನಿನಲ್ಲಿ ಕೊರೆಸುವ ಕೊಳವೆ ಬಾವಿಯಲ್ಲಿ ನೀರು ಸಿಗುವಂತೆ ಇಷ್ಟ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಕೆಲವರು ಮನೆದೇವರು, ಕುಲದೇವರು, ಗ್ರಾಮ ದೇವತೆಗಳಿಗೆಲ್ಲಾ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ನೀರು ಸಿಗುವ ವಿಶ್ವಾಸದೊಂದಿಗೆ ದೇವರ ಬಳಿ ಹೂ ಕೇಳುವುದು ಜನರು ರೂಢಿಸಿಕೊಂಡು ಬಂದಿರುವ ನಂಬಿಕೆಯಾಗಿದೆ. ದೇವರು ಬಲಗಡೆಯಿಂದ ಹೂ ಕೊಟ್ಟ ಕೆಲವೇ ದಿನಗಳಲ್ಲಿ ಹೊಸ ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ದೇವರ ಕೃಪೆಯಿಂದ ಕೆಲವರಿಗೆ ಅಲ್ಪಸ್ವಲ್ಪ ಪ್ರಮಾಣದ ನೀರು ಸಿಗುತ್ತಿದ್ದರೆ, ಮತ್ತೆ ಹಲವರಿಗೆ ನೀರೇ ಸಿಗದಂತಾಗಿದೆ. ಸಂಕಷ್ಟ ಕಾಲದಲ್ಲಿ ದೇವರೂ ಕೈ ಹಿಡಿಯುತ್ತಿಲ್ಲವೆಂಬ ನಿರಾಸೆ ರೈತರನ್ನು ಕಾಡಲಾರಂಭಿಸಿದೆ.
ಬೋರ್ ವೆಲ್‌ಗಳನ್ನು ನಿರ್ಮಿಸುವುದು ಬರಗಾಲದಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ರೈತರಿಂದ ಹೆಚ್ಚು ಹಣ ವಸೂಲಿ ಮಾಡುವುದರೊಂದಿಗೆ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಸ್ಥಳೀಯವಾಗಿ ಕೊಳವೆಬಾವಿ ನಿರ್ಮಿಸುವವರ ಜೊತೆಗೆ ತಮಿಳುನಾಡಿನಿಂದಲೂ ಕೊಳವೆ ಬಾವಿ ನಿರ್ಮಿಸುವ ಸಾಕಷ್ಟು ಲಾರಿಗಳು ಬಂದಿವೆ. ಕೊಳವೆಬಾವಿಗಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಹಗಲು-ರಾತ್ರಿ ಎನ್ನದೆ ಬೋರ್‌ವೆಲ್‌ಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.
ಏಕರೂಪ ದರ ನಿಗದಿ ಇಲ್ಲ:
ಮಂಡ್ಯ ಜಿಲ್ಲೆಯೊಳಗೆ ಕೊಳವೆ ಬಾವಿಗಳ ನಿರ್ಮಾಣಕ್ಕೆ ಪರವಾನಗಿ ತೆಗೆದುಕೊಂಡಿರುವವರು ಕೇವಲ ಬೆರಳೆಣಿಕೆಯಷ್ಟಿದ್ದಾರೆ. ಉಳಿದವರೆಲ್ಲರೂ ಅಕ್ರಮವಾಗಿ ಲಾರಿಗಳನ್ನು ಇಟ್ಟುಕೊಂಡು ಕೊಳವೆಬಾವಿ ನಿರ್ಮಿಸುತ್ತಿದ್ದಾರೆ. ಒಂದು ತಾಲೂಕಿನಲ್ಲಿ ಕನಿಷ್ಠ ೫ ರಿಂದ ೮ ಲಾರಿಗಳಿವೆ. ಉಳಿದ ಲಾರಿಗಳು ತಮಿಳುನಾಡು, ಉತ್ತರ ಕರ್ನಾಟಕ ಭಾಗದಿಂದ ಇಲ್ಲಿಗೆ ಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕುವವರೇ ಇಲ್ಲವಾಗಿದೆ.
ಬರಗಾಲದ ಸಮಯದಲ್ಲಿ ಕೊಳವೆಬಾವಿ ನಿರ್ಮಾಣದ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಬೇಕಾದ ಅಂತರ್ಜಲ ಇಲಾಖೆ ನಿದ್ರಾವಸ್ಥೆಯಲ್ಲಿದೆ. ಮಳೆಯ ಕೊರತೆ, ನೀರಿನ ಅಭಾವ, ಬಿರುಬೇಸಿಗೆಯ ಸಮಯದಲ್ಲಿ ಅಂತರ್ಜಲ ಮಟ್ಟ ಈಗ ಎಷ್ಟು ಆಳಕ್ಕೆ ಕುಸಿದಿದೆ. ಈ ಸಮಯದಲ್ಲಿ ಕೊಳವೆಬಾವಿ ಕೊರೆಸುವುದು ಉತ್ತಮವೇ, ಇಲ್ಲವೇ, ಎಂಬ ಬಗ್ಗೆ ತಿಳಿವಳಿಕೆ ನೀಡದೆ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕುಳಿತಿದೆ.
ಕೊಳವೆಬಾವಿಗಳ ನಿರ್ಮಾಣಕ್ಕೆ ಏಕರೂಪ ದರ ನಿಗದಿಪಡಿಸಲು ಅವಕಾಶವಿದೆಯೇ, ಇಲ್ಲವೇ ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಅಂತರ್ಜಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಭೆ ನಡೆಸಿ ಮಾಹಿತಿ ಸಂಗ್ರಹಿಸುತ್ತೇನೆ. ಅಧಿಕೃತ ಪರವಾನಗಿ ಇರುವವರು ಮಾತ್ರ ಕೊಳವೆಬಾವಿ ನಿರ್ಮಿಸಬೇಕು. ಅಕ್ರಮವಾಗಿ ನಿರ್ಮಿಸುವವರಿಗೆ ಕಡಿವಾಣ ಹಾಕಲಾಗುವುದು.
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ