ಗ್ರಾಮೀಣ ಕ್ರೀಡಾ ಸಂಸ್ಕೃತಿ ಪುನರುಜ್ಜೀವನಕ್ಕಾಗಿ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಒಕ್ಕೂಟ ವತಿಯಿಂದ ವೀರನಾಡು ರಕ್ಷಣಾವೇದಿಕೆಯ ಸಹಯೋಗದಲ್ಲಿ ಸಂಭ್ರಮದ ‘ಗ್ರಾಮೀಣ ಕ್ರೀಡೋತ್ಸವ’ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಗ್ರಾಮೀಣ ಕ್ರೀಡಾ ಸಂಸ್ಕೃತಿ ಪುನರುಜ್ಜೀವನಕ್ಕಾಗಿ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಒಕ್ಕೂಟ ವತಿಯಿಂದ ವೀರನಾಡು ರಕ್ಷಣಾವೇದಿಕೆಯ ಸಹಯೋಗದಲ್ಲಿ ಸಂಭ್ರಮದ ‘ಗ್ರಾಮೀಣ ಕ್ರೀಡೋತ್ಸವ’ ನಡೆಯಿತು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲಿ, ಬುಗುರಿ, ಲಗೋರಿ, ಚಕ್ರಗಾಡಿ ತಳ್ಳುವುದು, ಕ್ಯಾಟರ್ ಬಿಲ್ಲಿನಿಂದ ಕಲ್ಲು ಹೊಡೆಯುವುದು, ಕುಂಟೆ ಬಿಲ್ಲೆ, ಚಿಣ್ಣಿದಾಂಡು, ಮಡಿಕೆ ಒಡೆಯುವುದು, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಕಪ್ಪೆ ಓಟ, ಕಾಳು ಹೆಕ್ಕುವುದು ಮೊದಲಾದ ಗ್ರಾಮೀಣ ಆಟಗಳಲ್ಲಿ ಮಕ್ಕಳು, ವೃದ್ಧರು, ಯುವಕ, ಯುವತಿಯರು ಪಾಲ್ಗೊಂಡು ಸಂಭ್ರಮಿಸಿದರು.
ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ, ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬುವ ನಿಟ್ಟಿನಲ್ಲಿ ಕ್ರೀಡೋತ್ಸವ ಆಯೋಜಿಸಲಾಗಿದೆ ಇಂದಿನ ಯುವ ಸಮೂಹ ಮೊಬೈಲ್ ಪ್ರಭಾವಕ್ಕೆ ಸಿಲುಕಿ ಕ್ರೀಡಾ ಚಟುವಟಿಕೆಗಳಿಂದ ದೂರ ಸರಿದಿರುವುದಲ್ಲದೆ, ಅವರಿಗೆ ಗ್ರಾಮೀಣ ಆಟೋಟಗಳ ಬಗ್ಗೆ ಮಾಹಿತಿಗಳಿಲ್ಲ. ಗ್ರಾಮೀಣ ಕ್ರೀಡೋತ್ಸವದ ಮೂಲಕ ನಮ್ಮ ಹಳೆಯ ಕ್ರೀಡೆಗಳನ್ನು ಅವರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಒಕ್ಕೂಟದ ಗೌರವ ಅಧ್ಯಕ್ಷ ದಾಮೋದರ್, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರದೀಪ್ ಕರ್ಕೆರ, ಡಿವೈಎಸ್‌ಪಿ ಮಹೇಶ್, ಪ್ರಮುಖರಾದ ಪಿ.ಪಿ.ಚಾಮಿ ಹಾಜರಿದ್ದರು. ಒಕ್ಕೂಟದ ಪ್ರಮುಖರಾದ ಕೆ.ಆರ್.ದಿನೇಶ್ ಶೆಟ್ಟಿ, ಪ್ರದೀಪ್ ಕರ್ಕೆರ, ಲಕ್ಷ್ಮಣ್ ಹೊದ್ದೂರು, ಹರಿಣಾಕ್ಷಿ, ಶಭರಿ ಗ್ರಾಮೀಣ ಕ್ರೀಡಾಕೂಟದ ಮೇಲ್ವಿಚಾರಣೆ ವಹಿಸಿದ್ದರು.
ಸಾಂಸ್ಕೃತಿಕ ಸಿರಿ :
ಕ್ರೀಡೋತ್ಸವದ ನಂತರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಸಿರ ಚಪ್ಪರ ಮಾದರಿಯ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು. ಹಿರಿಯ ಪೌರಕಾರ್ಮಿಕರು, ಶ್ರಮಿಕ ಬಂಧುಗಳು, ಸವಿತಾ ಸಮಾಜದವರು, ಕೃಷಿಕರು, ಮಾಜಿ ಸೈನಿಕರು, ಹಿರಿಯ ಆಟೋ, ಟ್ಯಾಕ್ಸಿ ಚಾಲಕರು, ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.