ಜೀವನ್ ರಾಂ ಸುಳ್ಯಗೆ ‘ಶಾರದಾ ಕೃಷ್ಣ ಪ್ರಶಸ್ತಿ’

KannadaprabhaNewsNetwork | Published : Nov 24, 2024 1:47 AM

ಸಾರಾಂಶ

ಜೀವನ್ ರಾಂ ಸುಳ್ಯ

ಕನ್ನಡಪ್ರಭ ವಾರ್ತೆ ಉಡುಪಿ

ಹೆಬ್ರಿಯ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜನೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಕೊಡಮಾಡುವ ‘ಶಾರದಾ ಕೃಷ್ಣ ಪ್ರಶಸ್ತಿ -2025’ಕ್ಕೆ ಈ ಬಾರಿ ಕನ್ನಡ ರಂಗಭೂಮಿಯ ಪ್ರಸಿದ್ಧ ರಂಗನಿರ್ದೇಶಕ, ನಟ, ರಂಗ ಶಿಕ್ಷಕ, ಸಂಘಟಕ ಡಾ.ಜೀವನ್ ರಾಂ ಸುಳ್ಯ ಆಯ್ಕೆಯಾಗಿದ್ದಾರೆ.25 ಸಾವಿರ ರು. ನಗದಿನೊಂದಿಗೆ ಪ್ರಶಸ್ತಿಯನ್ನು ಜನವರಿಯಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರು ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಶಾರದಾ ಕೃಷ್ಣ ಪ್ರಶಸ್ತಿ ಸಮಿತಿಯ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿಯ ಸದಸ್ಯ ವೈಕುಂಠ ಹೇರಳೆ, ಗೌರವ ಸಲಹೆಗಾರ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.ಬಹುಮುಖ ಪ್ರತಿಭೆ ಜೀವನ್‌ರಾಮ್:

ನಿನಾಸಂ ಪದವೀಧರರಾಗಿರುವ ಡಾ.ಜೀವನ್ ರಾಂ ಸುಳ್ಯ ಅವರು ರಂಗಭೂಮಿ ನಿರ್ದೇಶಕ, ನಟ, ಯಕ್ಷಗಾನ, ಜನಪದ ಕಲಾವಿದ, ಸಂಗೀತಗಾರ, ಚಿತ್ರ ಕಲಾವಿದ, ಜಾದೂಗಾರ, ಸಾಕ್ಷ್ಯಚಿತ್ರ ನಿರ್ದೇಶಕ, ವಸ್ತ್ರವಿನ್ಯಾಸಕ ಹೀಗೆ ಬಹುಮುಖ ಪ್ರತಿಭೆಯಾಗಿದ್ದಾರೆ.

ಮಹಾಮಾಯಿ, ಚಾರುವಸಂತ, ಮೃಚ್ಛಕಟಿಕ, ಸೂರ್ಯಶಿಕಾರಿ, ಪರಶುರಾಮ, ಬರ್ಬರೀಕ, ಭಾಸಭಾರತ ಇತ್ಯಾದಿ 40 ಕ್ಕಿಂತಲೂ ಹೆಚ್ಚು ನಾಟಕಗಳನ್ನು, 3000ಕ್ಕೂ ಅಧಿಕ ಜನಜಾಗೃತಿಯ ಬೀದಿನಾಟಕಗಳನ್ನು ನಿರ್ದೇಶಿಸಿದ್ದಾರೆ.

ಅವರ ಬಾಲಕಾರ್ಮಿಕತೆ ಮತ್ತು ಬಾಲ್ಯ ವಿವಾಹ ವಿರುದ್ಧದ ನಾಟಕವು ಶಾಲೆಯಿಂದ ಹೊರಗುಳಿದು ಹೊಟೇಲ್, ಗ್ಯಾರೇಜ್, ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ 3,446 ಬಾಲಕಾರ್ಮಿಕ ಮಕ್ಕಳು ಮರಳಿ ಶಾಲೆಗೆ ಸೇರುವಂತಾಗಲು ಮತ್ತು 217ಕ್ಕೂ ಬಾಲ್ಯ ವಿವಾಹವನ್ನು ತಡೆಯಲು ಪ್ರಮುಖ ಅಸ್ತ್ರವಾದುದು ಒಂದು ದಾಖಲೆಯಾಗಿದೆ.

ಅವರು ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೇನುಕುರುಬ, ಕೊರಗ ಜನಾಂಗದ ಸುಮಾರು 700ಕ್ಕಿಂತಲೂ ಹೆಚ್ಚು ಮಕ್ಕಳಿಗೆ ರಂಗ ಶಿಬಿರವನ್ನು ನಡೆಸಿದ್ದಾರೆ. ಸುಳ್ಯದಲ್ಲಿ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಕರ್ನಾಟಕದ ಮಾತ್ರವಲ್ಲದೇ ದೇಶದ ಬಹುತೇಕ ರಾಜ್ಯಗಳಲ್ಲಿ ಹಾಗೂ ದುಬೈ, ಬಹ್ರೈನ್‌, ಅಬುಧಾಬಿ, ಮಸ್ಕತ್ ಮುಂತಾದೆಡೆಯೂ ಕಾರ್ಯಕ್ರಮ ನೀಡಿದ್ದಾರೆ. ನೂರಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಯಕ್ಷ ರಂಗಾಯಣ ಕಾರ್ಕಳ ಇದರ ಪ್ರಪ್ರಥಮ ನಿರ್ದೇಶಕರಾಗಿರುವ ಜೀವನ್‌ ರಾಮ್ ಅವರಿಗೆ ಕರ್ನಾಟಕ ಜಾನಪದ ವಿವಿಯು 2022ನೇ ಸಾಲಿನ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

Share this article