ಫೆ.22ರಿಂದ ಉಮಾಮಹೇಶ್ವರ ದೇವಸ್ಥಾನದಲ್ಲಿ ‘ಶಿವಪಾಡಿ ವೈಭವ’

KannadaprabhaNewsNetwork |  
Published : Feb 18, 2025, 12:33 AM IST
17ಶಿವಪಾಡಿ | Kannada Prabha

ಸಾರಾಂಶ

ಸರಳೆಬೆಟ್ಟು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಪರ್ವ ಕಾಲದಲ್ಲಿ ದೇವಳದ ಅಭಿವೃದ್ಧಿ ಟ್ರಸ್ಟ್ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ ಐದು ದಿನಗಳ ಪರ್ಯಂತ ‘ಶಿವಪಾಡಿ ವೈಭವ’ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಸರಳೆಬೆಟ್ಟು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಪರ್ವ ಕಾಲದಲ್ಲಿ ದೇವಳದ ಅಭಿವೃದ್ಧಿ ಟ್ರಸ್ಟ್ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ ಐದು ದಿನಗಳ ಪರ್ಯಂತ ‘ಶಿವಪಾಡಿ ವೈಭವ’ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಬಗ್ಗೆ ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಸೋಮವಾರ ಮಾಹಿತಿ ನೀಡಿದರು.

22ರಂದು ಸಂಜೆ 4 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ.22 ರಿಂದ 26ರವರೆಗೆ ಯಕ್ಷಗಾನ, ಕೃಷಿ, ಆಹಾರ, ಆರೋಗ್ಯ, ಮನೋರಂಜನೆಯ ಮಹಾಮೇಳಗಳಿವೆ. ಫೆ.22 ರ ಕೃಷಿ ಮೇಳದಲ್ಲಿ 50 ಮಂದಿ ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಐದು ದಿನಗಳ ಕೃಷಿ ಮೇಳದಲ್ಲಿ ಪ್ರತಿನಿತ್ಯ ಕೃಷಿ ಗೋಷ್ಠಿ- ವಸ್ತು ಪ್ರದರ್ಶನ ಹಾಗೂ 250ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಇರಲಿವೆ. ಯಕ್ಷಮೇಳ ಶೀರ್ಷಿಕೆ ಅಡಿ ಐದು ದಿನ ರಾತ್ರಿ ವಿವಿಧ ಮೇಳಗಳ ಯಕ್ಷಗಾನ ನಡೆಯಲಿದೆ. ಆಹಾರ ಮೇಳದ ಅಡಿಯಲ್ಲಿ 250ಕ್ಕೂ ಅಧಿಕ ಶುದ್ಧ ದೇಸಿ ಶಾಖಾಹಾರಿ ಖಾದ್ಯ, ತಿಂಡಿ- ತಿನಿಸುಗಳ ಮಳಿಗೆಗಳು ಇರಲಿವೆ. ಕುಟುಂಬ ಪ್ರೇಕ್ಷಕರಿಗಾಗಿ ಮನೋರಂಜನಾ ಮೇಳವೂ ಇರಲಿದ್ದು ಅಮ್ಯೂಸ್‌ಮೆಂಟ್ ಪಾರ್ಕ್ ಗಮನ ಸೆಳೆಯಲಿವೆ ಎಂದು ವಿವರಿಸಿದರು.

ವಿವಿಧ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆ ಅಡಿಯಲ್ಲಿ ಆರೋಗ್ಯ ಮೇಳ - ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ, ಉಚಿತ ಯೋಗ ತರಬೇತಿ ನಡೆಸಲಿವೆ. ಅಲ್ಲದೆ ಪ್ರತಿದಿನ ಸಂಜೆ ಸಾಂಸ್ಕೃತಿಕ - ಸಾಹಿತ್ಯ ಮೇಳಗಳು ನಡೆಯಲಿವೆ ಎಂದರು.

ದೇವಳದ ಆಡಳಿತ ಮೊಕ್ತೇಸರ ಮಹೇಶ್‌ ಠಾಕೂರ್ ಮಾತನಾಡಿ, 26 ರಂದು ಗೃಹಸಚಿವ ಡಾ. ಜಿ.ಪರಮೇಶ್ವರ್ ದೇವಳಕ್ಕೆ ಆಗಮಿಸಿ, ಸಂಜೆ 5 ಕ್ಕೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಳದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಟ್ರಸ್ಟಿಗಳಾದ ಸತೀಶ್ ಪಾಟೀಲ್, ಶುಭಕರ್ ಸಾಮಂತ್, ಪ್ರಕಾಶ್ ಪ್ರಭು, ಅಶೋಕ್ ಸಾಮಂತ್, ಸಾಂಸ್ಕೃತಿಕ ಕಾರ್ಯದರ್ಶಿ ನಾಗರಾಜ್ ಕಾಮತ್, ಆರೋಗ್ಯ ಮೇಳದ ಉಸ್ತುವಾರಿ ಡಾ.ರೇಷ್ಮಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಜುನಾಥ್, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ