ಅಡುಗೆ ಅನಿಲ ದರ ಏರಿಕೆ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Apr 12, 2025 12:45 AM

ಸಾರಾಂಶ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳನ್ನು ನೀಡಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನತೆಯ ಪರವಾಗಿರುವುದನ್ನು ಸಹಿಸದ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಆಸ್ತಿತ್ವ ಉಳಿಸಿಕೊಳ್ಳಲು ಮತ್ತು ತನ್ನ ತಪ್ಪು ಗಳನ್ನು ಮುಚ್ಚಿ ಹಾಕಲು ಜನಾಕ್ರೋಶ ಹೆಸರಿನಲ್ಲಿ ಹೋರಾಟ ಮಾಡುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರ ಸರ್ಕಾರ ಅಡುಗೆ ಗ್ಯಾಸ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಯೂತ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಬಿ.ಬಿ.ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಯಿಂದ ಅಂಬೇಡ್ಕರ್ ವೃತ್ತದ ವರೆಗೂ ಮೆರವಣಿಗೆಯಲ್ಲಿ ಬಂದ ಯೂತ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗ್ಯಾಸ್ ಸಿಲಿಂಡರ್ ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅಡುಗೆ ಗ್ಯಾಸ್‌ ದರ ಇಳಿಸಿ

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಚಿಕ್ಕಬಳ್ಳಾಪುರ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆಎನ್. ಕೇಶವರೆಡ್ಡಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲೆಂಡರ್‌ಗೆ 50 ರುಪಾಯಿ ಏರಿಸಿದೆ. ಇದು ಬಡವರ ಮೇಲೆ ಆರ್ಥಿಕ ಹೊರೆ ಅಷ್ಟೇ ಕೂಡಲೇ ಬೆಲೆ ಏರಿಕೆ ಯನ್ನು ಇಳಿಸಬೇಕು ಎಂದು ಒತ್ತಾಯಿಸಿದರು.

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ

ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ ಅಚ್ಚು ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲೆ ಎರಡು ರೂಪಾಯಿ ಸುಂಕವನ್ನು ಏರಿಸಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಡುಗೆ ಅನಿಲದ ಬೆಲೆಯನ್ನು ಐವತ್ತು ರೂಪಾಯಿ ಸಿಲಿಂಡರ್ ಗೆ ಏರಿಸಲಾಗಿದೆ. ಇದರಿಂದ ಪ್ರತಿ ದಿನ 7 200 ಕೋಟಿ ರುಪಾಯಿ ಅನಾಯಾಸವಾಗಿ ಕೇಂದ್ರ ಸರ್ಕಾರಕ್ಕೆ ತಲುಪುತ್ತಿದೆ ಎಂದರು.

ಪಂಚ ಗ್ಯಾರಂಟಿಗಳನ್ನು ನೀಡಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನತೆಯ ಪರವಾಗಿರುವುದನ್ನು ಸಹಿಸದ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಆಸ್ತಿತ್ವ ಉಳಿಸಿಕೊಳ್ಳಲು ಮತ್ತು ತನ್ನ ತಪ್ಪು ಗಳನ್ನು ಮುಚ್ಚಿ ಹಾಕಲು ಈ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು .ಈ ಪ್ರತಿಭಟನೆ ಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಯಲುವಳ್ಳಿ ರಮೇಶ್ . ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್,ಕಾರ್ಯದರ್ಶಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ .ಮುಖಂಡರಾದ ರಾಮಕೃಷ್ಣಪ್ಪ,ಭಾಬಾಜಾನ್,ಗೋಪಿ,ನಾರಾಯಣಮ್ಮ, ಮಮತ ಮೂರ್ತಿ, ಮಂಗಳಾಪ್ರಕಾಶ್,ಯೂತ್ ಕಾಂಗ್ರೇಸ್ ನ ಮುಧಾಸಿರ್,ಶಾಹೀದ್, ಅಲ್ಲು ಅನಿಲ್, ವಿನಯ್ ಬಂಗಾರಿ ಮತ್ತಿತರರು ಇದ್ದರು.

Share this article