ಕನ್ನಡಪ್ರಭ ವಾರ್ತೆ ಬೇಲೂರು
ಕೆಎಸ್‌ಆರ್‌ಟಿಸಿ ಬಸ್ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ , ಇದರಿಂದ ಶಾಲಾ ಕಾಲೇಜಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಬಸ್ ಗಳನ್ನು ತಡೆದು ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆಯಿತು.ಬಸ್ ಡಿಪೋ ಇದ್ದರೂ ಸಹ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲ.ಇನ್ನು ಪ್ರತಿನಿತ್ಯ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಉನ್ನತ ವ್ಯಾಸಂಗ ಮಾಡಲು ಸುಮಾರು ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಬೆಳಗಿನ ಸಮಯ ೭ರಿಂದ ೮ ಗಂಟೆ ಸಮಯದವರೆಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವಿಭಾಗೀಯ ಅಧಿಕಾರಿಗಳನ್ನು ವಿಚಾರಿಸಲು ಹೋದರೆ ನಮಗೆ ಬಸ್ ಕೊರತೆ ಇದೆ. ನಿಮಗೆ ಬೇಕಾದ ಸಮಯದಲ್ಲಿ ಬಸ್‌ಗಳನ್ನು ನೀಡಲು ಅವಕಾಶ ಇಲ್ಲ ಎಂದು ಉಡಾಫೆಯಿಂದ ವರ್ತಿಸುತ್ತಾರೆ. ಕೆಲ ಬಸ್‌ಗಳಲ್ಲಿ ಬಸ್ ಪಾಸ್ ಇರುವ ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿರುವ ಹಲವಾರು ಉದಾಹರಣೆಗಳಿವೆ. ನಮ್ಮ ತೊಂದರೆಗಳನ್ನು ಕೇಳುವರು ಯಾರು ಇಲ್ಲ. ಇದು ಒಂದು ದಿನದ ಗೋಳಲ್ಲ. ಪ್ರತಿನಿತ್ಯದ ಗೋಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಹಾಸನ ಮತ್ತು ಚಿಕ್ಕಮಗಳೂರು ತೆರಳುವ ವಿದ್ಯಾರ್ಥಿಗಳು ಬಸ್ ಇಲ್ಲದ ಕಾರಣ ಮೂರ್ನಾಲ್ಕು ಬಾರಿ ಡಿಪೊಗೆ ಹೋಗಿ ಅರ್ಜಿ ಸಲ್ಲಿಸಿ ಮನವಿ ಮಾಡಿದರು ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ದಿಢೀರ್ ಪ್ರತಿಭಟನೆ ನಡೆಸಿದರು.ಇಷ್ಟೆಲ್ಲಾ ತೊಂದರೆಯಾದರೂ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಆಗಲಿ ಅಥವ ಟಿಸಿಗಳಾಗಲಿ ವಿದ್ಯಾರ್ಥಿಗಳ ಗೋಳನ್ನು ಆಲಿಸಲು ಬರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹ ಕೈ ಜೋಡಿಸಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿದ್ದ ಶಾಸಕರಿಗೆ ವಿಷಯ ತಿಳಿದು ದೂರವಾಣಿ ಮೂಲಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೂಡಲೆ ಬಸ್‌ಗಳ ವ್ಯವಸ್ಥೆ ಆಗಬೇಕು. ಪ್ರತಿನಿತ್ಯ ಎರಡು ಜಿಲ್ಲೆಗಳಿಗೆ ೭ರಿಂದ ೮ ಗಂಟೆಯವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸಾರಿಗೆ ಸಚಿವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಬಸ್‌ಗಳನ್ನು ಕಲ್ಪಿಸಿದರು.ಇದೇ ವೇಳೆ ವಿದ್ಯಾರ್ಥಿಗಳಾದ ಹೇಮಂತ್ ವೇದಮೂರ್ತಿ ವಿಕಾಸ್ ಆಕಾಶ್ ಸೃಷ್ಟಿ ಯಶವಂತ್ ಶರತ್ ರಾಘು ಆರೀಫ ಡಾ ರಾಜ್ ಸಂಘದ ತೀರ್ಥಂಕರ್ ಸಾಮಾಜಿಕ ಹೋರಾಟಗಾರ ವೆಂಕಟೇಶ್ ಹಾಜರಿದ್ದರು.*ಹೇಳಿಕೆಬಸ್‌ಗಳ ಸಂಖ್ಯೆ ಕಡಿಮೆ ಇದ್ದರೆ ಅವುಗಳ ಸಂಖ್ಯೆ ಹೆಚ್ಚಿಸಲು ಸಚಿವರಲ್ಲಿ ಮನವಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಾನೇ ಖುದ್ದಾಗಿ ಬಸ್ ನಿಲ್ದಾಣಕ್ಕೆ ತೆರಳಿ ಅವರ ಸಮಸ್ಯೆ ಆಲಿಸುತ್ತೇನೆ.- ಎಚ್ ಕೆ ಸುರೇಶ್ ಶಾಸಕ