ಪ್ರಾಮಾಣಿಕತೆಯಿಂದ ಸಹಕಾರಿ ಕ್ಷೇತ್ರದಲ್ಲಿ ಯಶಸ್ಸು

KannadaprabhaNewsNetwork | Published : Mar 15, 2024 1:22 AM

ಸಾರಾಂಶ

ಸಹಕಾರಿ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯಿದೆ. ಷೇರುದಾರರ ಮತ್ತು ಗ್ರಾಹಕರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸಂಸ್ಥೆಯತ್ತ ಆಸ್ಥೆ ವಹಿಸಿ ಹೆಚ್ಚಿನ ಸಾಧನೆಯತ್ತ ಸಾಗುವ ಗುರುತರ ಜವಾಬ್ದಾರಿ ಇದ್ದು, ಸಹಕಾರಿ ಸಂಸ್ಥೆಗಳ ಉಳಿವು ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರ ಪ್ರಾಮಾಣಿಕತೆಯ ಮೇಲೆ ನಿಂತಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಹಕಾರಿ ರಂಗದಲ್ಲಿ ಒಂದು ಸಂಸ್ಥೆ ೨೫ ವರ್ಷಗಳ ಸಾರ್ಥಕ ಸೇವೆ ಪೂರೈಸಬೇಕಾದರೆ ಸಂಸ್ಥೆಯ ಸದಸ್ಯರೆಲ್ಲರೂ ಆಡಳಿತ ಮಂಡಳಿ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದ್ದು, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯುಳ್ಳ ಕಾರ್ಯ ಶೈಲಿಯೇ ಸತತ ಯಶಸ್ಸಿಗೆ ಕಾರಣ ಎಂದು ಶ್ರೀನಿಧಿ ಸಮೂಹ ಸಂಸ್ಥೆ ಹಿರಿಯ ನಿರ್ದೇಶಕ ಮಲ್ಲಿಕಾರ್ಜುನ ಸಾಬೋಜಿ ನುಡಿದರು.

ರಬಕವಿಯ ಬಸವಾ ಎಜ್ಯುಕೇಶನ್ ಸಂಸ್ಥೆ, ಚಿತ್ತರಗಿ ಆಸ್ಪತ್ರೆ ಮತ್ತು ಭಾರತ ಗ್ಯಾಸ್ ಸಂಸ್ಥೆಯವರು ಗುರುವಾರ ನೂತನವಾಗಿ ಆಯ್ಕೆಗೊಂಡಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀನಿಧಿ ಸಹಕಾರಿ ಬ್ಯಾಂಕ್‌ನ ಎಲ್ಲ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಜತ ಮಹೋತ್ಸವ ಆಚರಿಸಿಕೊಂಡ ಶ್ರೀನಿಧಿ ಸಹಕಾರಿ ಬ್ಯಾಂಕ್ ಸತತ ಲಾಭದತ್ತ ಸಾಗುತ್ತಿದೆ. ಕಳೆದ ೨೫ ವರ್ಷಗಳ ಕಾಲ ಅಧ್ಯಕ್ಷರಾಗಿ ಎಲ್ಲರೊಡನೆ ವಿಶ್ವಾಸದಿಂದ ಮತ್ತು ಗ್ರಾಹಕರೊಡನೆ ಸೌಜನ್ಯಯುತವಾಗಿ ನಡೆದುಕೊಂಡ ಮಲ್ಲಿಕಾರ್ಜುನ ನಾಶಿ ಮತ್ತು ಸಂಸ್ಥೆಯ ಸಿಬ್ಬಂದಿ ಪ್ರಾಮಾಣಿಕ ಸೇವೆಯೇ ಯಶಸ್ಸಿಗೆ ಪ್ರಮುಖ ಕಾರಣ ಎಂದು ಹೇಳಿದರು.

ನೀಲಕಂಠ ಮುತ್ತೂರ ಮಾತನಾಡಿ ಸಹಕಾರಿ ಸಂಸ್ಥೆಗಳಿಗೆ ಸಾಮಾಜಿಕ ಹೊಣೆಗಾರಿಕೆಯಿದೆ. ಷೇರುದಾರರ ಮತ್ತು ಗ್ರಾಹಕರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸಂಸ್ಥೆಯತ್ತ ಆಸ್ಥೆ ವಹಿಸಿ ಹೆಚ್ಚಿನ ಸಾಧನೆಯತ್ತ ಸಾಗುವ ಗುರುತರ ಜವಾಬ್ದಾರಿ ಇದ್ದು, ಸಹಕಾರಿ ಸಂಸ್ಥೆಗಳ ಉಳಿವು ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರ ಪ್ರಾಮಾಣಿಕತೆಯ ಮೇಲೆ ನಿಂತಿದೆ ಎಂದರು.

ಬಸವ ಎಜ್ಯುಕೇಶನ್ ಸಂಸ್ಥೆಯ ಗಿರೀಶ ಮುತ್ತೂರ ಸ್ವಾಗತಿಸಿದರು. ಡಾ.ಜಿ.ಎಚ್.ಚಿತ್ತರಗಿ, ಭಾರತ ಗ್ಯಾಸ್ ರಬಕವಿಯ ಸೋಮಶೇಖರ ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ನಾಶಿ, ಅಂದಾನಿ ಮುತ್ತೂರ, ಉದಯ ಜಿಗಜಿನ್ನಿ, ಅಮಿತ್ ನಾಶಿ, ಬಸವರಾಜ ತೆಗ್ಗಿ, ರವಿ ಮುತ್ತೂರ, ಶ್ರೀಶೈಲ ಭೂಯ್ಯಾರ, ವಿಜಯ ನಾಶಿ, ಸಂಗಯ್ಯ ಅಮ್ಮಣಗಿಮಠ, ಶಾಂತಾ ಭಿಲವಡಿ, ಗಂಗಾ ಕಮತಗಿ, ಅನಿಲ ಮಹಾಜನ ಸನ್ಮಾನಗೊಂಡರು. ಸತೀಶ ಗದಗ ವಂದಿಸಿದರು.

Share this article