ದುಡ್ಡಿನ ಮಳೆ ಸುರಿಸುವುದಾಗಿ ನಂಬಿಸಿ ಮಹಾ ಧೋಖಾ!

| N/A | Published : Nov 05 2025, 04:15 AM IST / Updated: Nov 05 2025, 07:58 AM IST

Money

ಸಾರಾಂಶ

ವಿಶೇಷ ಪೂಜೆ ಸಲ್ಲಿಸಿ ಹಣದ ಮಳೆ ಸುರಿಸುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ನಕಲಿ ಸ್ವಾಮೀಜಿ ಹಾಗೂ ಆತನ ಕೆಲವಾರು  ಶಿಷ್ಯರನ್ನು ಪೊಲೀಸರು ಬಂಧಿಸಿ 18 ಲಕ್ಷ ರು. ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ವಿಶೇಷ ಪೂಜೆ ಸಲ್ಲಿಸಿ ಹಣದ ಮಳೆ ಸುರಿಸುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ನಕಲಿ ಸ್ವಾಮೀಜಿ ಹಾಗೂ ಆತನ ಶಿಷ್ಯರನ್ನು ಪೊಲೀಸರು ಬಂಧಿಸಿ 18 ಲಕ್ಷ ರು. ಜಪ್ತಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಬಸವರಾಜು ಅಲಿಯಾಸ್‌ ಸತ್ಯಾನಂದ ಸ್ವಾಮೀಜಿ, ಆತನ ಸಹಚರರಾದ ದೊಡ್ಡಬಳ್ಳಾಪುರದ ಮುನಿಸ್ವಾಮಪ್ಪ ಅಲಿಯಾಸ್ ಮೋಹನ್‌, ಮಲ್ಲಿಕಾರ್ಜುನ್‌, ಆಂಧ್ರಪ್ರದೇಶದ ರಾಮಕೃಷ್ಣ ಚುಂಡ್ರು, ಪಲ್ಲಿ ಮುರಳಿಧರ್‌, ಕಬ್ಬನ್ ಪೇಟೆಯ ಕೆ. ಮೋಹನ್‌, ಚಂದ್ರಕಲಾ, ಸಂಪಂಗಿರಾಮ ನಗರದ ರಾಜು, ತಮ್ಮಯ್ಯ, ಮುಬಾರಕ್‌ ಹಾಗೂ ರಾಮಚಂದ್ರ ಅಲಿಯಾಸ್ ರಾವ್ ಬಂಧಿತರು.

ಕೆಲ ದಿನಗಳ ಹಿಂದೆ ನಗರದ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಚೇರಿಯಲ್ಲಿ ಚಲಾವಣೆ ನಿರ್ಬಂಧಿತ ಎರಡು ಸಾವಿರ ರು. ಮುಖಬೆಲೆಯ ನೋಟು ಬದಲಾವಣೆಗೆ ನಕಲಿ ಸ್ವಾಮೀಜಿ ತಂಡ ಯತ್ನಿಸಿತ್ತು. ಆಗ ನೋಟು ಕ್ರಮ ಸಂಖ್ಯೆಗಳನ್ನು ತಿದ್ದುಪಡಿ ಮಾಡಿರುವುದು ಪತ್ತೆಹಚ್ಚಿದ ಆರ್‌ಬಿಐ ಅಧಿಕಾರಿಗಳು, ಈ ಕೃತ್ಯ ಸಂಬಂಧ ಹಲಸೂರು ಗೇಟ್ ಠಾಣೆಗೆ ದೂರು ನೀಡಿದರು. ಅದರಂತೆ ಮಾಹಿತಿ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಮೋಸದ ಜಾಲ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕೆರೆ ದಂಡೆಯಲ್ಲಿ ವಿಶೇಷ ಪೂಜೆ

ಹಾವೇರಿ ಬಸವರಾಜು ಹಾಗೂ ಆತನ ಸಹಚರರು ಕ್ರಿಮಿನಲ್‌ ಹಿನ್ನೆಲೆ ಇದ್ದು, ಇವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜನರಿಗೆ ಪೂಜೆ ಹೆಸರಿನಲ್ಲಿ ಮಂಕೂಬೂದಿ ಎರಚಿ ಹಣ ಲಪಾಟಿಯಿಸುವುದಕ್ಕೆ ಕುಖ್ಯಾತಿ ಪಡೆದಿದ್ದರು. ವಂಚನೆ ಕೃತ್ಯಕ್ಕೆ ಈ ತಂಡದ ಸದಸ್ಯರು ಪ್ರತ್ಯೇಕವಾಗಿ ಗುಂಪು ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು. ಪೂಜೆಗೆ ಬಸವರಾಜು ಕಾವಿ ಧರಿಸಿ ಸ್ವಾಮೀಜಿಯಂತೆ ನಟಿಸಿದರೆ, ಪೂಜೆಗೆ ಜನರನ್ನು ಆಂಧ್ರಪ್ರದೇಶದ ರಾಮಕೃಷ್ಣ ಚುಂಡ್ರು, ಪಲ್ಲಿ ಮುರಳಿಧರ್ ಕರೆತರುತ್ತಿದ್ದರು. ಎರಡು ಸಾವಿರ ಮುಖಬೆಲೆಯ ನೋಟುಗಳಲ್ಲಿರುವ ಕ್ರಮಸಂಖ್ಯೆಗಳ ತಿದ್ದುಪಡಿಯಲ್ಲಿ ಮುಬಾರಕ್ ಪಾತ್ರವಹಿಸಿದ್ದ, ಇನ್ನುಳಿದವರು ಹಣ ವರ್ಗಾವಣೆಯಲ್ಲಿ ಕೈ ಚಳಕ ತೋರಿಸಿದ್ದರು.

ಸಾರ್ವಜನಿಕರಿಗೆ ತಾವು ಹೇಳಿದಂತೆ ವಿಶೇಷ ಪೂಜೆ ನಡೆಸಿದರೆ ಹಣದ ಮಳೆ ಬರುತ್ತದೆ. ಇದಕ್ಕೆ ಎರಡು ಸಾವಿರ ಮುಖ ಬೆಲೆಯ ಎಂ,ಎನ್‌,ಓ,ಪಿ,ಜಿ ಅಕ್ಷರಗಳುಳ್ಳ ನೋಟುಗಳ ಸರಣಿ ಹೊರತುಪಡಿಸಿ ಬೇರೆ ಸರಣಿಯ ತಂದಲ್ಲಿ ಮಾತ್ರ ಹಣದ ಮಳೆ ಬರುವ ಪೂಜೆ ಮಾಡುತ್ತೇವೆ ಎಂದಿದ್ದರು. ಆಗ ಜನರಿಗೆ ನೋಟು ಸಿಗದೆ ಹೋದಾಗ ತಾವೇ ನೋಟು ಕೊಡುವುದಾಗಿ ನಂಬಿಸಿ ಕಮಿಷನ್ ಪಡೆದು ಎಚ್‌ ಸರಣಿಯ ನೋಟುಗಳನ್ನು ನೀಡುತ್ತಿದ್ದರು. ಬಳಿಕ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದಾಬಸಪೇಟೆ ಹಾಗೂ ಯಲಹಂಕ ಸೇರಿದಂತೆ ಇತೆರೆ ಕೆರೆ ದಂಡೆಗಳಲ್ಲಿ ಈ ವಿಶೇಷ ಪೂಜೆ ನಡೆಸಿದ್ದರು.

ನಿಂಬೆ ಹಣ್ಣು ಎಸೆಯಲು ಕಳಿಸಿ ಪರಾರಿ

ಪೂರ್ವನಿಗದಿತ ಕೆರೆ ಬಳಿಗೆ ತಮ್ಮ ವಂಚನೆ ಜಾಲಕ್ಕೆ ಬಿದ್ದವರನ್ನು ಬಸವರಾಜು ಗ್ಯಾಂಗ್ ಕರೆದುಕೊಂಡು ಹೋಗುತ್ತಿತ್ತು. ಈ ಜಾಲಕ್ಕೆ ವ್ಯಾಪಾರಿಗಳು, ಉದ್ಯಮಿಗಳು ಸೇರಿದಂತೆ ಸಿರಿವಂತರೆ ಹೆಚ್ಚು ಬಿದ್ದಿದ್ದರು. ಆ ಕೆರೆ ದಂಡಕ್ಕೆ ಸಂಜೆ ಕರೆದೊಯ್ದು ಕಾ‍ವಿ ಬಟ್ಟೆ ಧರಿಸಿ ಬಸವರಾಜು ಪೂಜೆ ನೆರವೇರಿಸುತ್ತಿದ್ದ. ಆಗ ಪೂಜೆಗೆ ಹಣವನ್ನು ತಟ್ಟೆಯಲ್ಲಿ ತುಂಬಿಡುವಂತೆ ಜನರಿಗೆ ಹೇಳುತ್ತಿದ್ದರು. ಅಂತೆಯೇ ಲಕ್ಷಾಂತರ ರು. ಹಣವನ್ನು ಜನರು ಪೂಜೆಗೆ ಇಡುತ್ತಿದ್ದರು. ಪೂಜೆ ಮುಗಿದ ಬಳಿಕ ನಿಂಬೆ ಹಣ್ಣನ್ನು ಪಕ್ಕದಲ್ಲಿ ಒಡೆದು ತನ್ನಿ ಎಂದು ಹೇಳಿ ಅವರನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಮಾತು ನಂಬಿ ಹೋದ ಜನರು ಮರಳುವ ವೇಳೆಗೆ ನಕಲಿ ಸ್ವಾಮೀಜಿ ತಂಡ ಪೇರಿ ಕೀಳುತ್ತಿತ್ತು. ಹೀಗೆ ನೂರಾರು ಜನರಿಗೆ ವಂಚಿಸಿ ಆರೋಪಿಗಳು ಲಕ್ಷಾಂತರ ದೋಚಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಂಚಕ ತಂಡ ಬಲೆಗೆ ಬಿದ್ದದ್ದು ಹೇಗೆ?

ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಚಲಾವಣೆ ನಿರ್ಬಂಧಿಸಿದೆ. ಈ ನೋಟು ಬದಲಾವಣೆಗೆ ಮುಂದಾದ ಮೋಹನ್ ಅವರು 1 ಲಕ್ಷ ರು. ಹಾಗೂ ಚಂದ್ರಕಲಾ ಅವರು 50 ಸಾವಿರ ರು. ಹಣವನ್ನು ಆರ್‌ಬಿಐ ಕಚೇರಿಗೆ ಸಲ್ಲಿಸಿದ್ದರು. ಆಗ ನೋಟು ಸ್ವೀಕರಿಸಿದ ಬ್ಯಾಂಕ್ ಸಿಬ್ಬಂದಿ, ಆ ಎರಡು ಖಾತೆಗಳಿಗೆ ಬದಲಿ ಹಣ ಜಮೆ ಮಾಡಿದ್ದರು. ಆದರೆ ಈ ಇಬ್ಬರು ಸಲ್ಲಿಸಿದ ನೋಟುಗಳ ಕ್ರಮಸಂಖ್ಯೆಗಳನ್ನು ಪರಿಶೀಲಿಸಿದಾಗ ತಿದ್ದುಪಡಿಯಾಗಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಆರ್‌ಬಿಐ ಅಧಿಕಾರಿಗಳು ದೂರು ನೀಡಿದರು. ಈ ನೋಟು ಅಕ್ರಮ ತಿದ್ದುಪಡಿ ಕೃತ್ಯದ ಬೆನ್ನತ್ತಿದ್ದಾಗ ವಂಚನೆ ಜಾಲ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more Articles on