ವಿಚಾರಣೆ ನೆಪದಲ್ಲಿ ಮಹಿಳೆಗೆ ಹಲ್ಲೆ : ಮೂವರು ಕ್ರೈಂ ಸಿಬ್ಬಂದಿ ಸಸ್ಪೆಂಡ್‌

| N/A | Published : Nov 05 2025, 04:15 AM IST / Updated: Nov 05 2025, 10:40 AM IST

Police
ವಿಚಾರಣೆ ನೆಪದಲ್ಲಿ ಮಹಿಳೆಗೆ ಹಲ್ಲೆ : ಮೂವರು ಕ್ರೈಂ ಸಿಬ್ಬಂದಿ ಸಸ್ಪೆಂಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳವು ಆರೋಪದಡಿ ವಿಚಾರಣೆ ನೆಪದಲ್ಲಿ ಮನೆಗೆಲಸದ ಮಹಿಳೆಯನ್ನು ಪೊಲೀಸ್‌ ಠಾಣೆಗೆ ಕರೆತಂದು ಗಂಭೀರವಾಗಿ ಹಲ್ಲೆ ಮಾಡಿದ ಆರೋಪದಡಿ ವರ್ತೂರು ಪೊಲೀಸ್ ಠಾಣೆಯ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಪರಶುರಾಮ್‌ ಆದೇಶಿಸಿದ್ದಾರೆ.

  ಬೆಂಗಳೂರು :  ಕಳವು ಆರೋಪದಡಿ ವಿಚಾರಣೆ ನೆಪದಲ್ಲಿ ಮನೆಗೆಲಸದ ಮಹಿಳೆಯನ್ನು ಪೊಲೀಸ್‌ ಠಾಣೆಗೆ ಕರೆತಂದು ಗಂಭೀರವಾಗಿ ಹಲ್ಲೆ ಮಾಡಿದ ಆರೋಪದಡಿ ವರ್ತೂರು ಪೊಲೀಸ್ ಠಾಣೆಯ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಪರಶುರಾಮ್‌ ಆದೇಶಿಸಿದ್ದಾರೆ.

ವರ್ತೂರು ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿಯಾದ ಸಂಜಯ್‌ ರಾಥೋಡ್‌, ಸಂತೋಷ್‌ ಕುದರಿ ಹಾಗೂ ಅರ್ಚನಾ ಅಮಾನತುಗೊಂಡವರು. ಮಾರತ್ತಹಳ್ಳಿ ಉಪವಿಭಾಗದ ಎಸಿಪಿ ನೀಡಿದ ವರದಿ ಆಧರಿಸಿ ಈ ಮೂವರು ಕ್ರೈಂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮೇಲ್ವಿಚಾರಣೆ ನಡೆಸುವಲ್ಲಿ ವಿಫಲರಾದ ಪಿಎಸ್ಐ ಮೌನೇಶ್‌ ದೊಡ್ಡಮನಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಈ ಹಲ್ಲೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ವೈಟ್‌ಫೀಲ್ಡ್‌ ಡಿಸಿಪಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಎಸಿಪಿಯಿಂದ ವರದಿ ಪಡೆದು ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಏನಿದು ಪ್ರಕರಣ?:

ವರ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ ನಿವಾಸಿ ಪ್ರಿಯಾಂಕಾ ಜನ್‌ವಾಲ್‌ ಅವರು ಅ.30ರಂದು ತಮ್ಮ ಮನೆಯಲ್ಲಿ ಡೈಮೆಂಡ್‌ ರಿಂಗ್‌ ಕಳ್ಳತನವಾಗಿರುವ ಬಗ್ಗೆ ವರ್ತೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮನೆಯಲ್ಲಿ ಕೆಲಸ ಮಾಡುವ ಪಶ್ಚಿಮ ಬಂಗಾಳ ಮೂಲದ ಸುಂದರಿ ಬೀಬಿ(34) ಎಂಬಾಕೆಯೇ ಡೈಮಂಡ್ ರಿಂಗ್‌ ಕಳವು ಮಾಡಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರಿನ ಮೇರೆಗೆ ಪಿಎಸ್ಐ ಮೌನೇಶ್ ದೊಡ್ಡಮನಿ ಎನ್‌ಸಿಆರ್‌ ದಾಖಲಿಸಿ ಠಾಣೆಯಿಂದ ಹೊರಗೆ ಹೋಗಿದ್ದರು.

ಗಂಭೀರವಾಗಿ ಹಲ್ಲೆ

ಮಾರನೇ ದಿನ ಠಾಣೆ ಕ್ರೈಂ ಸಿಬ್ಬಂದಿ ಸಂಜಯ್ ರಾಥೋಡ್‌, ಸಂತೋಷ್‌ ಕುದರಿ ಮತ್ತು ಅರ್ಚನಾ ಆರೋಪಿತೆ ಸುಂದರಿ ಬೀಬಿ ಅವರನ್ನು ಠಾಣೆಗೆ ಕರೆಸಿ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಮಹಿಳೆಯ ಕೈ-ಕಾಲು, ಬೆನ್ನು ಸೇರಿ ಖಾಸಗಿ ಅಂಗಾಂಗಗಳಿಗೂ ಹಾನಿಯಾಗಿತ್ತು. ಬಳಿಕ ಆ ಮಹಿಳೆ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ವೈದ್ಯಕೀಯ ವರದಿಯಲ್ಲಿ ಮಹಿಳೆಯ ಮೇಲೆ ನಡೆದಿರುವ ಹಲ್ಲೆಯ ಭೀಕರತೆ ಬಗ್ಗೆ ಉಲ್ಲೇಖಿಸಲಾಗಿತ್ತು.

Read more Articles on