ಸಾರಾಂಶ
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ನಿರಾಸಕ್ತಿ ತೋರಿದ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರು ಸಿಬ್ಬಂದಿಯನ್ನು ಜಿಲ್ಲಾ ಶಿಸ್ತು ಪ್ರಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ದಾವಣಗೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ನಿರಾಸಕ್ತಿ ತೋರಿದ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರು ಸಿಬ್ಬಂದಿಯನ್ನು ಜಿಲ್ಲಾ ಶಿಸ್ತು ಪ್ರಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ದಾವಣಗೆರೆ ಉತ್ತರ ವಲಯದ ಜಮಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಡಿ.ಕೆ.ಮಂಜುನಾಥ, ದಾವಣಗೆರೆ ದಕ್ಷಿಣ ವಲಯದ ನಾಗನೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಚ್.ಬಸವರಾಜಪ್ಪ, ದಾವಣಗೆರೆ ತಾಲೂಕು ಮಾಯಕೊಂಡ ಹಿಂದುಳಿಗ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಕೆ.ಆರ್.ದುರ್ಗಪ್ಪ ಅಮಾನತುಗೊಂಡವರು.
ಸೆ.22ರಿಂದ ಅ.7ರವರೆಗೆ ಸಮೀಕ್ಷಾ ಕಾರ್ಯಕ್ಕೆ ಮೂವರನ್ನೂ ನಿಯೋಜಿಸಲಾಗಿತ್ತು. ಆದರೆ, ಈ ನೌಕರರು ಸಮೀಕ್ಷಾ ಕಾರ್ಯಕ್ಕೆ ಗೈರು ಹಾಜರಾಗಿದ್ದರು. ಕಾರಣ ಕೇಳಿ ಜಾರಿಗೊಳಿಸಿದ್ದ ನೋಟಿಸ್‌ಗೂ ಸಮಜಾಯಿಷಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂವರೂ ನೌಕರರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ಸರ್ಕಾರಿ ಸಿವಿಲ್ ವರ್ಗೀಕರಣ ಮತ್ತು ಅಪೀಲು ನಿಯಮಾವಳಿ 1957ರ ನಿಯಮ 10(1)(ಜ)ರ ಅನ್ವಯ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕೋರ್ಟ್ ನಿರ್ದೇಶನದಂತೆ
ಸಮೀಕ್ಷೆ ಮಾಡ್ತೇವೆ: ಸಿಎಂ
ನ್ಯಾಯಾಲಯದ ನಿರ್ದೇಶನದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಮೀಕ್ಷೆ ಬಹಿಷ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಸಮೀಕ್ಷೆ ತಡೆಯಲು ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ, ನ್ಯಾಯಾಲಯ ತಡೆ ನೀಡಿಲ್ಲ. ಈ ಕುರಿತು ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಸಮೀಕ್ಷೆ ನಡೆಸಲಾಗುವುದು ಎಂದರು.
ಸಂಸದ ತೇಜಸ್ವಿ ಸೂರ್ಯ ಅವರು ಒದಗಿಸುವ ಮಾಹಿತಿ ಸುರಕ್ಷಿತವಾಗಿರುವ ಬಗ್ಗೆ ನಂಬಿಕೆ ಇಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಐಚ್ಛಿಕ. ಕಡ್ಡಾಯವಲ್ಲ ಎಂದು ಹೈಕೋರ್ಟ್ ಕೂಡ ಹೇಳಿದೆ. ಹೀಗಾಗಿ, ನಾನೂ ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ. ಸಾರ್ವಜನಿಕರು ಬಹಿಷ್ಕಾರ ಹಾಕಬಹುದು ಎಂದು ಅವರು ಹೇಳಿಕೆ ನೀಡಿದ್ದರು.
ಜಾತಿ ಸಮೀಕ್ಷೆ ಹೋದ
ಶಿಕ್ಷಕಿಗೆ ನಾಯಿ ಕಡಿತ
ಚಿಕ್ಕಬಳ್ಳಾಪುರದಲ್ಲಿ ನಾಯಿ ದಾಳಿ
ಚಿಕ್ಕಬಳ್ಳಾಪುರ: ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸುವ ವೇಳೆ ಗಣತಿದಾರ ಶಿಕ್ಷಕಿಗೆ ನಾಯಿ ಕಡಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಗಣತಿದಾರ ಶಿಕ್ಷಕಿಯನ್ನು ಕೂತನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಜನಿ ಎಂದು ಗುರ್ತಿಸಲಾಗಿದೆ. ನಗರದ ತಿಮ್ಮಕ್ಕ ಲೇಔಟ್‌ನ ಪಿಡಿಒ ನಾರಾಯಣಸ್ವಾಮಿ ಅವರ ಮನೆಯಲ್ಲಿ ಸಮೀಕ್ಷೆ ಮುಗಿಸಿ ಹೊರಬರುತ್ತಿರುವಾಗ ಮನೆಯಲ್ಲಿದ್ದ ನಾಯಿ ದಾಳಿ ಮಾಡಿ ಶಿಕ್ಷಕಿಯನ್ನು ಕಚ್ಚಿ ಗಾಯಗೊಳಿಸಿದೆ. ತಕ್ಷಣ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ರಂಜನಿ ಅವರಿಗೆ ವೈದ್ಯರು ಪ್ರತಿ ದಿನ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾರೆ. ನಮಗೆ ಪರಿಚಯವಿಲ್ಲದ, ಗೊತ್ತಿಲ್ಲದ ಪ್ರದೇಶಗಳಲ್ಲಿ ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ. ಯಾವ ಮನೆಯಲ್ಲಿ ಅಥವಾ ಬೀದಿಯಲ್ಲಿ ನಾಯಿಗಳು ದಾಳಿ ನಡೆಯುತ್ತವೆಯೋ ಗೊತ್ತಿಲ್ಲ ಎಂದು ಗಣತಿದಾರರು ಅಳಲು ತೋಡಿಕೊಂಡಿದ್ದಾರೆ.