ಶಿಕ್ಷಕ ಸಂಘಟನೆಗಳು ಒಡಕನ್ನು ಬದಿಗಿಡಿ

| Published : Sep 21 2025, 02:00 AM IST

ಸಾರಾಂಶ

ಹಣ, ಜಾತಿ ಬಿಟ್ಟು ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ. ಶಿಕ್ಷಕರ ಸಂಘಟನೆಗಳ ನಡುವಿನ ಒಡಕನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಹಣ, ಜಾತಿ ಬಿಟ್ಟು ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ. ಶಿಕ್ಷಕರ ಸಂಘಟನೆಗಳ ನಡುವಿನ ಒಡಕನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ಹೇಳಿದರು. ನಗರದ ಮಾರುತಿ ಮಹಾರಾಜ್ ಕನ್ವೆಷನ್ ಹಾಲ್ ಸಭಾಂಗಣದಲ್ಲಿ ರಮೇಶಬಾಬು ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಮೀರಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿದೆ. ನಾನು ವಿಧಾನ ಪರಿಷತ್ ಸದಸ್ಯನಾಗಿ ನೇಮಕವಾಗಿದ್ದು, ಅವಕಾಶ ಸಿಕ್ಕಾಗಲೆಲ್ಲಾ ಶಿಕ್ಷಕರ ಪರವಾಗಿ ದ್ವನಿ ಎತ್ತಲಿದ್ದೇನೆ. ನನಗೆ ಅಭಿನಂದಿಸಲು ಶಿಕ್ಷಕರ ಸಂಘಟನೆಯವರು ಬೆಂಗಳೂರಿಗೆ ಬರುವುದು ಬೇಡ. ನಾನೇ ನಿಮ್ಮಲ್ಲಿಗೆ ಬರುತ್ತೇನೆ. ಅನೇಕ ಶಿಕ್ಷಕರು ಈ ಹಿಂದೆಯೂ ನನ್ನ ಜೊತೆ ಕೆಲಸ ಮಾಡಿದ್ದಾರೆ. ಈಗಲೂ ನಮ್ಮ ಜೊತೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.

ಎಂ.ಎಲ್.ಸಿ. ಸ್ಥಾನಕ್ಕಾಗಿ ನಾನು ದೆಹಲಿ ಪ್ರವಾಸ ಮಾಡಿದವನಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ನಮ್ಮ ಕೆಲಸವನ್ನು ಒಪ್ಪಿ ನನ್ನನ್ನು ವಿಧಾನಪರಿಷತ್‌ಗೆ ಶಿಫಾರಸ್ಸು ಮಾಡಿದರು. ಅದನ್ನು ಒಪ್ಪಿ ರಾಹುಲ್‌ಗಾಂಧಿ ನೇಮಕ ಮಾಡಿದರು. ಹಿಂದೆ ಒಂದು ವರ್ಷ ನನಗೆ ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಸಿಕ್ಕಿತ್ತು. ಆಗ ಉಳಿದವರು ಆರು ವರ್ಷದಲ್ಲಿ ಮಾಡುವ ಕೆಲಸವನ್ನು ನಾನು ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾಗಿರುವ ಚಿಕ್ಕನಾಯಕನಹಳ್ಳಿಯ ರಮೇಶ್‌ಬಾಬು ತನಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುವ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಜಿಲ್ಲೆ ಇವರಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದು ತಿಳಿಸಿದರು.ರಮೇಶ್‌ಬಾಬು ರವರು ಈ ಹಿಂದೆ ಜೆಡಿಎಸ್ ಪಕ್ಷದಿಂದ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿಯಾಗಿದ್ದಾಗ, ಶಿಕ್ಷಕರ ಹಲವಾರು ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ವಿಧಾನಸೌಧದ ಪ್ರತಿ ಟೇಬಲ್‌ಗೂ ತಿರುಗಿ, ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರಿಂದ ಮತ್ತಷ್ಟು ಸೇವೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.ಪಕ್ಷದ ಸಿದ್ದಾಂತವನ್ನು ವಿಧಾನಸಭೆಯ ಒಳಗೆ ಮತ್ತು ಹೊರಗೆ ಮತ್ತು ಒಳಗೆ ಅತ್ಯಂತ ಸಮರ್ಥವಾಗಿ ಎತ್ತಿ ಹಿಡಿಯುವ ರಮೇಶಬಾಬು ಅವರಿಗೆ ಎಂ.ಎಲ್.ಸಿ ಸ್ಥಾನ ಸಿಕ್ಕಿರುವುದು ಮೆಚ್ಚುವಂತಹದ್ದು, ಸಹಕಾರ ಸಂಘಗಳ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕೆಲಸ ಮಾಡುತ್ತಲೇ ರಾಜಕೀಯ ರಂಗ ಪ್ರವೇಶಿಸಿ, ಎರಡು ಬಾರಿ ಎಂ.ಎಲ್.ಸಿ ಆಗಿದ್ದಾರೆ. ಉಜಕಾರಿಣಿಯಾಗಿ ಅಷ್ಟೇ ಅಲ್ಲ. ಸಮಾಜ ಸೇವಕರಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಾಡಿದ್ದಾರೆ. ಅವರಿಗೆ ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಪರಶಿವಮೂರ್ತಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಮೇಶಬಾಬು ಅಭಿಮಾನಿ ಬಳಗದ ಅಧ್ಯಕ್ಷ ರಾಮುಸ್ವಾಮಿ ಮಾತನಾಡಿ, ವಿಧಾನಪರಿಷತ್ ಸದಸ್ಯರಾಗಿ ನೇಮಕವಾಗಿರುವ ರಮೇಶ್ ಬಾಬು ಸುಸಂಸ್ಕೃತರು, ಸಜ್ಜರು, ಸರಳ ವ್ಯಕ್ತಿತ್ವ ನೇರ ಮತ್ತು ನಿಷ್ಠೂರು ನಡೆಗೆ ಹೆಸರಾಗಿದ್ದಾರೆ. ಪ್ರತಿಯೊಬ್ಬರಿಗೂ ಸ್ಪಂದಿಸುವ ಒಳ್ಳೆಯ ಗುಣ ಅವರಲ್ಲಿದೆ. ಹಾಗಾಗಿಯೇ ಅವರಿಗೆ ಇಂದು ಅಭಿನಂದನೆಯನ್ನು ಇಟ್ಟುಕೊಂಡಿದ್ದೇವೆ. ಇನ್ನೂ ಹೆಚ್ಚಿನ ರಾಜಕೀಯ ಅಧಿಕಾರ ಸಿಗಲಿ, ಶಿಕ್ಷಕರ ಕ್ಷೇತ್ರದ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆ ಹರಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ಪ್ರೌಢಶಾಲೆ ಶಿಕ್ಷಕರ ಸಂಘದ ಲೋಕೇಶ್, ಉಮೇಶರೆಡ್ಡಿ, ಹನುಮೇಶ್, ಬೀರೇಂದ್ರ, ದೊಡ್ಡಯ್ಯ, ತುಮಕೂರು ವಿವಿ ರಾಮಕೃಷ್ಣಪ್ಪ, ಮಂಜುಳ, ಮಹಾಲಿಂಗಪ್ಪ. ತಾ.ಪಂ.ಮಾಜಿ ಸದಸ್ಯ ರಂಗಸ್ವಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.