‘ಡಿಜಿಟಲ್ ಅರೆಸ್ಟ್ ಕಂಪನಿ’ ಪ್ರಕರಣದ ತನಿಖೆ ಮುಂದುವರಿಸಿರುವ ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸರು, ಆ ಕಂಪನಿಯ ಮತ್ತೆರಡು ಕೇಂದ್ರಗಳನ್ನು ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಡಿಜಿಟಲ್ ಅರೆಸ್ಟ್ ಕಂಪನಿ’ ಪ್ರಕರಣದ ತನಿಖೆ ಮುಂದುವರಿಸಿರುವ ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸರು, ಆ ಕಂಪನಿಯ ಮತ್ತೆರಡು ಕೇಂದ್ರಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರ ಪೈಕಿ ಪ್ರಮುಖ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಂಚನೆ ಜಾಲ ನಡೆಸುತ್ತಿದ್ದ ಮತ್ತೆರಡು ಕೇಂದ್ರಗಳು ಬೆಳಕಿಗೆ ಬಂದಿವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಸೂತ್ರಧಾರರ ಪತ್ತೆಗೆ ತನಿಖೆ ಚುರುಕಿನಿಂದ ನಡೆದಿದೆ. ಹಣ ವರ್ಗಾವಣೆ ಸೇರಿದಂತೆ ಇತರೆ ಆಯಾಮದಲ್ಲಿ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.

ಅಮೆರಿಕಾ ಪ್ರಜೆಗಳಿಗೆ ಡ್ರಗ್ಸ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹೆಸರಿನಲ್ಲಿ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಸೈಬರ್ ವಂಚಕರ ಜಾಲವನ್ನು ಆಗ್ನೇಯ ವಿಭಾಗದ ಸಿಇನ್‌ ಹಾಗೂ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದರು. ಈ ವಂಚಕರ ಜಾಲದ ಬಿಪಿಓ ಕಂಪನಿ ಮೇಲೆ ಪೊಲೀಸರು ದಾಳಿ ನಡೆಸಿ 16 ಮಂದಿಯನ್ನು ಬಂಧಿಸಿದ್ದರು. ಈಗ ಮತ್ತೆರಡು ಕಾಲ್ ಸೆಂಟರ್ ಕೇಂದ್ರಗಳು ಬಯಲಾಗಿದ್ದು, ಈ ಜಾಲದ ಮತ್ತಷ್ಟು ವಿಸ್ತರಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.