ಅರವಳಿಕೆ ಮದ್ದು ನೀಡಿ ಪತ್ನಿಯನ್ನು ಕೊಂದ ಕಿಲ್ಲರ್‌ ಡಾಕ್ಟರ್‌ ಬಂಧನ

| N/A | Published : Oct 16 2025, 02:00 AM IST / Updated: Oct 16 2025, 05:10 AM IST

DOCTOR MURDER
ಅರವಳಿಕೆ ಮದ್ದು ನೀಡಿ ಪತ್ನಿಯನ್ನು ಕೊಂದ ಕಿಲ್ಲರ್‌ ಡಾಕ್ಟರ್‌ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ವೈಯಕ್ತಿಕ ಕಾರಣಕ್ಕೆ ಹೆಚ್ಚಿನ ಪ್ರಮಾಣದ ಅರವಳಿಕೆ ಮದ್ದು ಕೊಟ್ಟು ತನ್ನ ಪತ್ನಿ, ಚರ್ಮ ರೋಗ ತಜ್ಞ ವೈದ್ಯೆಯನ್ನು ಕೊಂದು ಬಳಿಕ ಸಹಜ ಸಾವು ಎನ್ನುವಂತೆ ಬಿಂಬಿಸಿ ಸಂಭಾವಿತನಂತೆ ನಟಿಸಿದ್ದ ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯನೊಬ್ಬನ ಕ್ರೌರ್ಯ ಆರು ತಿಂಗಳ ತರುವಾಯ ಬಯಲಾಗಿ ಈಗ ಪೊಲೀಸರ ಅತಿಥಿ ಆಗಿದ್ದಾನೆ.

 ಬೆಂಗಳೂರು :  ವೈಯಕ್ತಿಕ ಕಾರಣಕ್ಕೆ ಹೆಚ್ಚಿನ ಪ್ರಮಾಣದ ಅರವಳಿಕೆ ಮದ್ದು ಕೊಟ್ಟು ತನ್ನ ಪತ್ನಿ, ಚರ್ಮ ರೋಗ ತಜ್ಞ ವೈದ್ಯೆಯನ್ನು ಕೊಂದು ಬಳಿಕ ಸಹಜ ಸಾವು ಎನ್ನುವಂತೆ ಬಿಂಬಿಸಿ ಸಂಭಾವಿತನಂತೆ ನಟಿಸಿದ್ದ ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯನೊಬ್ಬನ ಕ್ರೌರ್ಯ ಆರು ತಿಂಗಳ ತರುವಾಯ ಬಯಲಾಗಿ ಈಗ ಪೊಲೀಸರ ಅತಿಥಿ ಆಗಿದ್ದಾನೆ.

ಗುಂಜೂರು ನಿವಾಸಿ ಡಾ. ಮಹೇಂದ್ರ ರೆಡ್ಡಿ (29) ಬಂಧಿತನಾಗಿದ್ದು, ಕಳೆದ ಏಪ್ರಿಲ್‌ನಲ್ಲಿ ಮಾವನ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತ್ನಿ ಕೃತಿಕಾ ರೆಡ್ಡಿ (28) ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅರವಳಿಕೆ ಮದ್ದು ಕೊಟ್ಟು ಹತ್ಯೆ ಮಾಡಿದ್ದ. ನಂತರ ಸಹಜ ಸಾವು ಎಂದು ಕುಟುಂಬದವರನ್ನು ನಂಬಿಸಿ ಪತ್ನಿ ಅಂತ್ಯಕ್ರಿಯೆ ಮಾಡಿ ನಿಶ್ಚಿಂತೆ ಇದ್ದ ಆತನಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ವರದಿ ಮರಣ ಶಾಸನವಾಗಿದೆ.ಎಫ್‌ಎಸ್‌ಎಲ್ ವರದಿಯಲ್ಲಿ ಪತ್ನಿಗೆ ಅರವಳಿಕೆ ಕೊಟ್ಟು ಸಾಯಿಸಿದ್ದ ಹಂತಕ ವೈದ್ಯನ ಕಪಟ ನಾಟಕ ಬಯಲಾಗಿದೆ. ಬಳಿಕ ಮೃತ ಕೃತಿಕಾ ತಂದೆ ಕೆ.ಮುನಿರೆಡ್ಡಿ ನೀಡಿದ್ದ ದೂರಿನ ಮೇರೆಗೆ ಆರೋಪಿಯನ್ನು ಉಡುಪಿ ಜಿಲ್ಲೆಯ ಮಣಿಪಾಲ್‌ನಲ್ಲಿ ಮಂಗಳವಾರ ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹಸೆಮಣೆ ತುಳಿದ 11 ತಿಂಗಳಲ್ಲೇ ಹತ್ಯೆ2024ರ ಮೇ 26 ರಂದು ಗುಂಜೂರಿನ ಶ್ರೀನಿವಾಸ್ ರೆಡ್ಡಿ ಮತ್ತು ಪ್ರಮೀಳಾ ದಂಪತಿ ಪುತ್ರ ಡಾ.ಮಹೇಂದ್ರ ರೆಡ್ಡಿ ಹಾಗೂ ಮುನಿಕೊಳಲು ಸಮೀಪ ಅಯ್ಯಪ್ಪ ಲೇಔಟ್‌ನ ಜಮೀನ್ದಾರ ಮುನಿರೆಡ್ಡಿ ದಂಪತಿಯ ಎರಡನೇ ಮಗಳು ಡಾ.ಕೃತಿಕಾ ರೆಡ್ಡಿ ವಿವಾಹವಾಗಿದ್ದರು. ಎರಡು ಕುಟುಂಬಗಳು ನಿಶ್ಚಿಯಿಸಿ ಈ ಮದುವೆ ಮಾಡಿದ್ದರು. ಮದುವೆ ನಂತರ ಪತಿ ಜತೆ ಕೃತಿಕಾ ವಾಸವಾಗಿದ್ದರು. ಇನ್ನು ಚರ್ಮರೋಗ ತಜ್ಞೆ ಆಗಿದ್ದ ಕೃತಿಕಾ ಅವರು, ಮಾರತ್ತಹಳ್ಳಿ ಸಮೀಪ ಕ್ಲಿನಿಕ್ ನಡೆಸುತ್ತಿದ್ದರು. ಹಾಗೆ ಸರ್ಜನ್ ಆಗಿದ್ದ ಮಹೇಂದ್ರ ರೆಡ್ಡಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂದರ್ಶಕ ವೈದ್ಯನಾಗಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಸಹ ಕೆಲಸ ಮಾಡುತ್ತಿದ್ದ. ಮಾರತ್ತಹಳ್ಳಿ ಸಮೀಪ ಸ್ವಂತ ಆಸ್ಪತ್ರೆ ಕಟ್ಟುವ ಕನಸನ್ನು ಕೃತಿಕಾ ಹೊತ್ತಿದ್ದರು.

ಮದುವೆಯಾದ ಆರಂಭದಲ್ಲಿ ಸತಿ-ಪತಿ ಅನ್ಯೋನ್ಯವಾಗಿಯೇ ಇದ್ದರು. ನಂತರ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದ ಪತ್ನಿ ಕುರಿತು ಮಹೇಂದ್ರನಲ್ಲಿ ಅಸಹನೆ ಮೂಡಿತ್ತು. ಇತ್ತ ಕೃತಿಕಾ ಆರೋಗ್ಯದಲ್ಲಿಯೂ ಚೇತರಿಕೆ ಕಾಣಲಿಲ್ಲ. ಇದಾದ ಬಳಿಕ ವೈದ್ಯ ದಂಪತಿ ಬದುಕು ಕವಲು ದಾರಿಯಲ್ಲಿ ಸಾಗಲಾರಂಭಿಸಿತು.ಆದರೆ ತನ್ನಲ್ಲಿರುವ ಅಸಮಾಧಾನವನ್ನು ಪತ್ನಿ ಅಥವಾ ಆಕೆಯ ಪೋಷಕರ ಮುಂದಾಗಲಿ ಮಹೇಂದ್ರ ವ್ಯಕ್ತಪಡಿಸಿರಲಿಲ್ಲ. ಶ್ರೀಮಂತ ಮನೆತನ ಹಿನ್ನೆಲೆ ಕಾರಣಕ್ಕೆ ಅಂಜಿಕೊಂಡು ಪತ್ನಿ ವಿರುದ್ಧ ಮನೆಯಲ್ಲಿ ಆತ ತಕರಾರು ಮಾಡದೆ ಮುಗುಮ್ಮಾಗಿಯೇ ಇದ್ದ. ಕಾಲ ಸರಿದಂತೆ ಆತನ ವರಸೆ ಬದಲಾಯಿತು. ಸಣ್ಣಪುಟ್ಟ ವಿಷಯಗಳಿಗೆ ಪತ್ನಿ ಜತೆ ಮಹೇಂದ್ರ ಗಲಾಟೆ ಮಾಡುತ್ತಿದ್ದ. ಮದುವೆ ನಂತರ ಯೂರೋಪ್ ಪ್ರವಾಸಕ್ಕೆ ಹೋಗಲು ಬಯಸಿದ ಕೃತಿಕಾಳ ಆಸೆಗೆ ಆತ ಅಡ್ಡಿಯಾದ. ಅಲ್ಲದೆ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಹಣ ತರುವಂತೆ ತಮ್ಮ ಮಗಳಿಗೆ ಅಳಿಯ ಮಹೇಂದ್ರ ಕಿರುಕುಳ ನೀಡುತ್ತಿದ್ದ ಎಂದು ಮೃತಳ ತಂದೆ ಮುನಿರೆಡ್ಡಿ ಆರೋಪಿಸಿದ್ದಾರೆ.

ಹತ್ಯೆ ನಡೆದದ್ದು ಹೇಗೆ?: 2025ರ ಏಪ್ರಿಲ್ 21 ರಂದು ರಾತ್ರಿ ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಕೃತಿಕಾ ಬಲಗಾಲಿಗೆ ಮಹೇಂದ್ರ ಐವಿ ಕ್ಯಾನುಲ್‌ವನ್ನು ಚುಚ್ಚಿದ್ದರು. ಮರು ದಿನ ವಿಶ್ರಾಂತಿ ಪಡೆಯುವಂತೆ ಕೃತಿಕಾಳನ್ನು ಆಕೆಯ ತವರು ಮನೆಗೆ ಕರೆದೊಯ್ದು ಮಹೇಂದ್ರ ಬಿಟ್ಟು ಕೆಲಸಕ್ಕೆ ಹೋಗಿದ್ದ. ಮತ್ತೆ ರಾತ್ರಿ ಕೃತಿಕಾಳ ತವರು ಮನೆಗೆ ಹೋಗಿ ಮತ್ತೊಮ್ಮೆ ಔಷಧವನ್ನು ಕೊಟ್ಟು ಆತ ಮರಳಿದ್ದ. ಆ ದಿನ ಲವಲವಕೆಯಿಂದ ಇದ್ದ ಕೃತಿಕಾ, ಮರು ದಿನ ಕಾಲಿನಲ್ಲಿ ನೋವು ಎಂದಿದ್ದಳು. ಆಗ ಐವಿ ಕ್ಯಾನುಲ್‌ವನ್ನು ತೆಗೆಯದಂತೆ ಪತ್ನಿಗೆ ಮಹೇಂದ್ರ ತಾಕೀತು ಮಾಡಿದ್ದ. ಏಪ್ರಿಲ್‌ 23 ರಂದು ರಾತ್ರಿ ಮತ್ತೆ ಕೃತಿಕಾಳಿಗೆ ಆರೋಪಿ ಚುಚ್ಚುಮದ್ದು ಕೊಟ್ಟಿದ್ದ. ಏಪ್ರಿಲ್ 24 ರಂದು ಬೆಳಗ್ಗೆ 7.30ರಲ್ಲಿ ಕೃತಿಕಾ ಪ್ರಜ್ಞಾಹೀನಳಾಗಿದ್ದಾಳೆ ಎಂದು ಆಕೆಯ ಪೋಷಕರಿಗೆ ಮಹೇಂದ್ರ ತಿಳಿಸಿದ್ದಾನೆ. ಕೂಡಲೇ ಕಾರಿನಲ್ಲಿ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆಯನ್ನು ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು, ಕೃತಿಕಾ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಬೇಡ ಎಂದಿದ್ದ: ಕೃತಿಕಾ ಮೃತಪಟ್ಟಿರುವ ಸಂಬಂಧ ಮಾರತ್ತಹಳ್ಳಿ ಪೊಲೀಸರಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಆಗ ತಮ್ಮ ಪತ್ನಿಯ ಮರಣೋತ್ತರ ಪರೀಕ್ಷೆ ನಡೆಸದಂತೆ ಮಹೇಂದ್ರ ರೆಡ್ಡಿ ಒತ್ತಾಯಿಸುತ್ತಿದ್ದ. ಅಲ್ಲದೆ ತನ್ನ ಮಾವನ ಮೇಲೂ ಆತ ಒತ್ತಡವೇರಿದ್ದ. ಆದರೆ ತನ್ನ ಸೋದರಿ ಸಾವಿನ ಕುರಿತು ಪೊಲೀಸರಿಗೆ ಮೃತಳ ಅಕ್ಕ ಡಾ.ನಿಖಿತಾ ದೂರು ಕೊಟ್ಟಿದ್ದರು.

ಸೋಕೋ ಟೀಂ ತಂಡ: ಈ ಘಟನೆ ಬಗ್ಗೆ ತನಿಖೆಗಿಳಿದ ಮಾರತ್ತಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅನಿಲ್‌ ಕುಮಾರ್ ಹಾಗೂ ಸೋಕೋ ತಂಡವು, ಕೂಡಲೇ ಕೃತಿಕಾಳ ತವರು ಮನೆಗೆ ತೆರಳಿ ತಪಾಸಣೆ ನಡೆಸಿದರು. ಆಗ ಕ್ಯಾನುಲ ಸೆಟ್‌ ಹಾಗೂ ಇಂಜೆಕ್ಷನ್‌ ಟ್ಯೂಬ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೆ ಸಾವಿನ ನಿಖರ ಕಾರಣ ತಿಳಿಯುವ ಸಲುವಾಗಿ ಮೃತದೇಹದಿಂದ ವಿಸೆರಾ ಮಾದರಿ ಸಂಗ್ರಹಿಸಿ ಎಫ್ಎಸ್‌ಎಲ್‌ಗೆ ತನಿಖಾಧಿಕಾರಿ ಕಳುಹಿಸಿದರು. ಈ ವಿಸೆರಾ ಮಾದರಿಯನ್ನು ಪರೀಕ್ಷಿಸಿದಾಗ ಮೃತಳ ದೇಹದ ಅಂಗಾಂಗಳಲ್ಲಿ ಅರಿವಳಿಕೆಗಳ ಪದಾರ್ಥ ಪತ್ತೆಯಾಗಿವೆ ಎಂದು ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಿದರು. ಈ ವರದಿ ಆಧರಿಸಿ ಕೂಡಲೇ ತನಿಖೆಗಿಳಿದಾಗ ಕೃತಿಕಾಳ ಕೊಲೆ ರಹಸ್ಯ ಬಹಿರಂಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಹೆಚ್ಚಿನ ಪ್ರಮಾಣದ ಅರ‍ವಳಿಕೆ ಕೊಟ್ಟು ಮಹೇಂದ್ರ ಕೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿಗೆ ಪರಾರಿಯಾಗಿದ್ದ ವೈದ್ಯ!

ತನ್ನ ಪತ್ನಿ ಸಾವಿನ ರಹಸ್ಯ ಬಯಲಾದ ವಿಷಯ ತಿಳಿದ ಕೂಡಲೇ ಬಂಧನ ಭೀತಿಯಿಂದ ನಗರ ತೊರೆದು ಉಡುಪಿ ಜಿಲ್ಲೆ ಮಣಿಪಾಲ್‌ನಲ್ಲಿ ಮಹೇಂದ್ರ ರೆಡ್ಡಿ ತಲೆಮರೆಸಿಕೊಂಡಿದ್ದ. ಈತನ ಇರುವಿಕೆಯ ಜಾಗ ಪತ್ತೆಹಚ್ಚಿ ಪೊಲೀಸರು ಸೆರೆ ಹಿಡಿದಿದ್ದಾರೆ. ತಾನು ವೈದ್ಯಕೀಯ ಸಂಬಂಧ ಸಮ್ಮೇಳನಕ್ಕೆ ಬಂದಿದ್ದಾಗಿ ವಿಚಾರಣೆ ವೇಳೆ ಆತ ಹೇಳಿದ್ದ. ಆದರೆ ಈ ಬಗ್ಗೆ ವಿಚಾರಿಸಿದಾಗ ಮಣಿಪಾಲ್‌ನಲ್ಲಿ ಯಾವುದೇ ವೈದ್ಯಕೀಯ ಸಮ್ಮೇಳನ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಕಾರಣವೇನು?

ತನ್ನ ಪತ್ನಿಯ ಅನಾರೋಗ್ಯ ಸಮಸ್ಯೆಯಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಮಹೇಂದ್ರ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಇತ್ತ ಬೇರೊಂದು ಯುವತಿ ಜತೆ ಮಹೇಂದ್ರ ರೆಡ್ಡಿಗೆ ಅಕ್ರಮ ಸಂಬಂಧವಿತ್ತು. ಇದರಿಂದ ತನ್ನ ಮಗಳನ್ನು ಸರಿಯಾಗಿ ನೋಡಿಕೊಳ್ಳದೆ ಕಿರುಕುಳ ಕೊಡುತ್ತಿದ್ದ ಎಂದು ಮೃತಳ ತಂದೆ ಮುನಿರೆಡ್ಡಿ ಆರೋಪಿಸಿದ್ದಾರೆ.

ಅರವಳಿಕೆ ಸಿಕ್ಕಿದ್ದು ಎಲ್ಲಿ?

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿ ಮಹೇಂದ್ರ ಕೆಲಸ ಮಾಡುತ್ತಿದ್ದ. ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ವೇಳೆ ಅರವಳಿಕೆ ಚುಚ್ಚು ಮದ್ದು ಬಳಸಲಾಗುತ್ತದೆ. ಹೀಗಾಗಿ ಆರೋಪಿ ಎಲ್ಲಿಂದ ಅರವಳಿಕೆ ಮದ್ದು ತಂದಿದ್ದ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ಆರೋಪಿ ಅರವಳಿಕೆ ಮದ್ದು ತಂದಿದ್ದಾನೆ ಎಂದು ಮೃತರ ಪೋಷಕರು ಆಪಾದಿಸಿದ್ದಾರೆ.

ವೈದ್ಯನ ಕ್ರಿಮಿನಲ್‌ ಹಿನ್ನೆಲೆ

ಆರೋಪಿ ಮಹೇಂದ್ರ ಹಾಗೂ ಆತನ ಸೋದರನಿಗೆ ಕ್ರಿಮಿನಲ್ ಹಿನ್ನೆಲೆ ಸಹ ಇದ್ದು, ಈ ವೈದ್ಯ ಸೋದರ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ವೈದ್ಯೆ ಡಾ.ಕೃತಿಕಾ ಕೊಲೆ ರಹಸ್ಯ ಭೇದಿಸುವಲ್ಲಿ ಸೋಕೋ ತಂಡ ಹಾಗೂ ಪೊಲೀಸರು ಸಾಂದರ್ಭಿಕವಾಗಿ ಸಂಗ್ರಹಿಸಿದ್ದ ಪುರಾವೆಗಳ ಕಾರಣವಾಗಿವೆ. ವೈದ್ಯರ ಸಾವಿನ ಕುರಿತು ಖಾಸಗಿ ಆಸ್ಪತ್ರೆಯ ಎಂಎಲ್‌ಸಿ ವರದಿಯನ್ನು ನಿರ್ಲಕ್ಷ್ಯ ತೋರದೆ ಕಾನೂನು ಕ್ರಮ ಜರುಗಿಸಿದ್ದು ಪೊಲೀಸರ ಕಾರ್ಯವೈಖರಿ ಮೆಚ್ಚುವಂತಹದ್ದು. ತನಿಖಾ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತದೆ.

-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು---------

ತನ್ನ ಗಂಡನ ಮೇಲೆ ನನ್ನ ಮಗಳು ಕೃತಿಕಾ ತುಂಬಾ ಪ್ರೀತಿ ಇಟ್ಟುಕೊಂಡಿದ್ದಳು. ಆದರೆ ಆಕೆಯ ಪ್ರೀತಿಗೆ ಮಹೇಂದ್ರ ದ್ರೋಹ ಬಗೆದ. ತನ್ನ ಗಂಡನ ಕೊಡುತ್ತಿದ್ದ ಔಷಧಗಳ ಬಗ್ಗೆ ಆಕೆ ಕಾಳಜಿ ವಹಿಸಿದ್ದರೆ ಜೀವ ಉಳಿಯುತ್ತಿತ್ತು. ಆರೋಪಿಗೆ ಅತ್ಯುಗ್ರ ಶಿಕ್ಷೆಯಾಗಬೇಕು.-ಕೆ.ಮುನಿರೆಡ್ಡಿ, ಮೃತ ಡಾ.ಕೃತಿಕಾ ತಂದೆ

Read more Articles on