ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದೀಪಾವಳಿ ಹಿನ್ನೆಲೆಯಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹ ಮಾಡಿದ್ದ ವ್ಯಾಪಾರಿಯೊಬ್ಬನನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.ಉಲ್ಲಾಳದ ಮುನೇಶ್ವರ ನಗರದ ನಿವಾಸಿ ಎಸ್.ಬಿ. ಶ್ರೀನಿವಾಸ್ ಬಂಧಿತನಾಗಿದ್ದು, ಆರೋಪಿಯಿಂದ 10.13 ಲಕ್ಷ ರು. ಮೌಲ್ಯದ ಪಟಾಕಿ ಜಪ್ತಿ ಮಾಡಲಾಗಿದೆ. ಧನನಾಯನಕಹಳ್ಳಿಯ ಸಮೃದ್ಧಿ ಲೇಔಟ್‌ನಲ್ಲಿದ್ದ ತನ್ನ ತೋಟದ ಮನೆಯಲ್ಲಿ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇತ್ತೀಚೆಗೆ ದೀಪಾವಳಿ ಹಬ್ಬದ ವೇಳೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಖರೀದಿಸಿ ತಂದು ತೋಟದ ಮನೆಯಲ್ಲಿ ಶ್ರೀನಿವಾಸ್ ದಾಸ್ತಾನು ಮಾಡಿದ್ದ. ಈ ಪಟಾಕಿ ಮಾರಾಟಕ್ಕೆ ಆತ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಹಣದಾಸೆಯಿಂದ ಆರೋಪಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.5 ಲಕ್ಷ ರು. ಪಟಾಕಿ: ಕಲಾಸಿಪಾಳ್ಯ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ 5 ಲಕ್ಷ ರು. ಮೌಲ್ಯದ ಪಟಾಕಿ ಜಪ್ತಿಯಾಗಿದೆ. ಅಕ್ರಮವಾಗಿ ಪಟಾಕಿ ದಾಸ್ತಾನು ಬಗ್ಗೆ ಖಚಿತ ಮಾಹಿತಿ ಪಡೆದು ಕಲಾಸಿಪಾಳ್ಯ ಪೊಲೀಸರು ದಾಳಿ ನಡೆಸಿದ್ದಾರೆ. ಕಲಾಸಿಪಾಳ್ಯದ ಅಥಿ ಬಂಧಿತನಾಗಿದ್ದು ಈತ ಟ್ರಾವೆಲ್ಸ್ ವೊಂದರ ಮಾಲೀಕರ ಪುತ್ರನಾಗಿದ್ದಾನೆ.
ಪಟಾಕಿ ಮಾರಾಟಕ್ಕೆ ಪರವಾನಗಿ ಕಡ್ಡಾಯನಗರದಲ್ಲಿ ಪರವಾನಿಗೆ ಇಲ್ಲದೆ ಕಾನೂನುಬಾಹಿರವಾಗಿ ಪಟಾಕಿ ಮಾರಾಟಕ್ಕೆ ಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ನಗರ ವ್ಯಾಪ್ತಿಯ ಜಿಬಿಎ ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟದ ಮಳಿಗೆಗಳ ತೆರೆಯಲು ಅವಕಾಶ ಕೊಡಲಾಗಿದೆ. ಪಟಾಕಿ ಮಾರಾಟ ಸಂಬಂಧ ಪೊಲೀಸರು ಸೇರಿ ಸಂಬಂಧಪಟ್ಟ ಇಲಾಖೆಗಳಿಗೆ ಪರವಾನಿಗೆ ಪಡೆಯುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಹೀಗಿದ್ದರೂ ಕೆಲವರು ಅಕ್ರಮವಾಗಿ ಪಟಾಕಿ ಮಾರಾಟಕ್ಕೆ ಯತ್ನಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.