ಮಂಡ್ಯ:

ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಪ್ರಕರಣ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರು. ಚಿನ್ನಾಭರಣ, ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಫೆ.22 ರಂದು ನಗರದ ಕಲ್ಲಹಳ್ಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ನ್ಯೂ ಜ್ಯೋತಿ ವೈನ್ಸ್ ಸ್ಟೋರ್ ನ ಪುಟ್ ಪಾತ್ ನಲ್ಲಿ ಮಹಿಳೆ ಕಾರನ್ನು ಒರಗಿ ನಿಂತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಮಹಿಳೆ ಕತ್ತಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗುವಾಗ 22 ಗ್ರಾಂ ತೂಕದ ಅರ್ಧ ಸರ ಕಟ್ಟಾಗಿ ಕೆಳಗಡೆ ಬಿದ್ದು ಉಳಿದ 28 ಗ್ರಾಂ ತೂಕದ ಚಿನ್ನ ಸರ ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ಹಳೇ ಕಲ್ಲಹಳ್ಳಿಯ ನಿಂಗಯ್ಯ ಪುತ್ರ ಸತೀಶ್ ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾ.3ರಂದು ಆರೋಪಿಗಳಾದ ಕಲ್ಲಹಳ್ಳಿಯ ಆರ್.ವರುಣ್ ಕುಮಾರ್ ಪುತ್ರ ವಿ.ವರುಣ್ (20), ತಾಲೂಕಿನ ಕೋಡಿಶೆಟ್ಟಿ ಪುರ ಗ್ರಾಮದ ಪುಟ್ಟಸ್ವಾಮಿ ಪುತ್ರ ಎಂ.ಪಿ.ಪ್ರೀತ್ ಅಲಿಯಾಸ್ ಶೀನಾ(18), ತಾಲೂಕಿನ ತೂಬಿನಕೆರೆ ಗ್ರಾಮದ ಗುರು ಪುತ್ರ ಸೃಜನ್ (18), ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯ ಮಹದೇವರಾವ್ ಪುತ್ರ ಎಂ.ಎಸ್.ಮಂಜುನಾಥ್ (28), ದ್ವಾರಕನಗರ 1ನೇ ಕ್ರಾಸ್ ನ ನಾಗರಾಜು ಪುತ್ರ ಎನ್.ನಿಶಾಂತ್ (20) ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತರಿಂದ ಒಂದು ಡಿಯೋ ಸ್ಕೂಟರ್ , ಒಂದು ಕೆಟಿಎಂ ಬೈಕ್ ಹಾಗೂ ಅಂದಾಜು 3.30 ಲಕ್ಷ ರು. ಬೆಲೆ ಬಾಳುವ ಚಿನ್ನದಸರ ಕರಗಿಸಿದ್ದ ಒಂದು 28 ಗ್ರಾಪಂ ತೂಕದ ಚಿನ್ನದ ಗಟ್ಟಿ ತುಂಡನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡವನ್ನು ಜಿಲ್ಲಾ ಎಸ್ಪಿ ಶೋಭರಾಣಿ, ಎಎಸ್ಪಿ ಸೇರಿದಂತೆ ಹಿರಿಯ ಪೊಲೀಸರು ಅಭಿನಂದಿಸಿದ್ದಾರೆ.