ಸಾಲಬಾಧೆ ತಾಳಲಾರದೆ ಆಲದ ಮರಕ್ಕೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಮಂಡ್ಯ ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೀಸೆ ಪುಟ್ಟಸ್ವಾಮಿ ಹಾಗೂ ನಾಗಮ್ಮ ಎಂಬುವರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಲಬಾಧೆ ತಾಳಲಾರದೆ ಆಲದ ಮರಕ್ಕೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮೀಸೆ ಪುಟ್ಟಸ್ವಾಮಿ (58) ಹಾಗೂ ನಾಗಮ್ಮ (55) ಎಂಬುವರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ. ಗ್ರಾಮದಲ್ಲಿ ಸುಮಾರು 5 ಎಕರೆ ಜಮೀನು ಹೊಂದಿದ್ದ ಪುಟ್ಟಸ್ವಾಮಿ, ನಾಗಮ್ಮ ದಂಪತಿ ಮಕ್ಕಳೊಂದಿಗೆ ಬದುಕು ನಡೆಸುತ್ತಿದ್ದರು. ಸಾಲ ಮಾಡಿಕೊಂಡಿದ್ದ ಪುಟ್ಟಸ್ವಾಮಿ ಅವರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು ಎನ್ನಲಾಗಿದೆ. ಜೊತೆಗೆ ಮಳೆ ಬಾರದೆ ಬೆಳೆಯೂ ಇಲ್ಲದೆ ಪರಿತಪಿಸುವಂತಾಗಿತ್ತು. ಇದರಿಂದ ಬೇಸತ್ತು ಗ್ರಾಮದ ತಮ್ಮ ಜಮೀನಿನ ಪಕ್ಕದ ದೊಡ್ಡಲಿಂಗಯ್ಯ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ದೊಡ್ಡ ಆಲದ ಮರಕ್ಕೆ ಇಬ್ಬರೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದರು.

ಸ್ಥಳಕ್ಕೆ ಪಿಎಸ್‌ಐ ರಂಗಪ್ಪ ಸಾಲಾಪುರ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೃದ್ಧ ನಾಪತ್ತೆ: ದೂರು ದಾಖಲುಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿಯ ನಿವಾಸಿ ವೃದ್ಧ ಶ್ರೀನಿವಾಸೇಗೌಡ (72) ಅವರು ಜು.22 ರಂದು ಬೆಂಗಳೂರಿಗೆ ಹೋಗಿದ್ದು, ವಾಪಸ್ ಬರದೆ ನಾಪತ್ತೆಯಾಗಿದ್ದಾರೆ. ಶ್ರೀನಿವಾಸೇಗೌಡರು 5.5 ಅಡಿ ಎತ್ತರ. ಇದ್ದು ದುಂಡು ಮುಖ, ಗೋದಿ ಮೈ ಬಣ್ಣ, ತಲೆಯಲ್ಲಿ ಬಿಳಿಕೂದಲಿದ್ದು, ಕನ್ನಡಕ ಧರಿಸಿದ್ದಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಮತ್ತು ಪ್ಯಾಂಟನ್ನು ಧರಿಸಿದ್ದರು. ಈ ಚಹರೆಯುಳ್ಳ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಕ್ಯಾತನಹಳ್ಳಿ ಪೊಲೀಸ್ ಠಾಣೆ ಮೊ-9480804881 ಅಥವಾ ಸಮೀಪದ ಪೊಲೀಸ್ ಠಾಣೆಗಾಗಲಿ ಮಾಹಿತಿ ನೀಡುವಂತೆ ಕ್ಯಾತನಹಳ್ಳಿ ಪೊಲೀಸರು ತಿಳಿಸಿದ್ದಾರೆ.ಅಪರಿಚಿತ ಶವ ಪತ್ತೆಶ್ರೀರಂಗಪಟ್ಟಣ: ತಾಲೂಕಿನ ಮೈಸೂರು ರಸ್ತೆಯ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ ಹತ್ತಿರದ ಕಾವೇರಿ ನದಿ ದಡದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪರಿಚಿ ಮೃತ ವ್ಯಕ್ತಿಯು (25-30) ವಯಸ್ಸಾಗಿದೆ. 5.6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ, ಎದೆಯ ಮೇಲೆ ಪಾರ್ವತಿ ಎಂದು ಹಸಿರು ಹಚ್ಚೆ ಇದೆ. ನೀಲಿ ಬಣ್ಣದ ಟಿ.ಶರ್ಟ್,ನೀಲಿ ಬಣ್ಣದ ಪ್ಯಾಂಟ್ ಅನ್ನು ಧರಿಸಿದ್ದಾರೆ. ವಾರಸುದಾರರ ಮಾಹಿತಿ ದೊರೆತಲ್ಲಿ ಮೊ.9480804800, ದೂ08232224888 ಅನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.