ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಹೆಜ್ಜೇನು ದಾಳಿಯಿಂದ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗಮಂಗಲ ತಾಲೂಕಿನ ಮಠದಭೂವನಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ. ಗ್ರಾಮದ ರಂಗಪ್ಪ ಮೃತಪಟ್ಟ ದುರ್ದೈವಿ ರೈತ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಹೆಜ್ಜೇನು ದಾಳಿಯಿಂದ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮಠದಭೂವನಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.ಗ್ರಾಮದ ರಂಗಪ್ಪ (75) ಮೃತಪಟ್ಟ ದುರ್ದೈವಿ ರೈತ. ವೃದ್ಧ ರೈತ ರಂಗಪ್ಪ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ನೂರಾರು ಹೆಜ್ಜೇನು ಕಚ್ಚಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಲು ಪ್ರಯತ್ನಿಸಿದರೂ ಕೂಡ ಅಷ್ಟರೊಳಗೆ ಅಪಾರ ಪ್ರಮಾಣದ ಜೇನುಹುಳುಗಳು ರಂಗಪ್ಪ ಅವರ ತಲೆ, ಮುಖ ಹಾಗೂ ಎರಡೂ ಕೈಗಳ ತುಂಬೆಲ್ಲಾ ಕಚ್ಚಿದ್ದರಿಂದ ನೀರಿನ ತೊಟ್ಟಿ ಬಳಿಯೇ ರೈತ ಅಸ್ವಸ್ತಗೊಂಡು ಬಿದಿದ್ದರು.
ಇದೇ ವೇಳೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಯುವಕನ ಮೇಲೂ ಕೆಲವು ಜೇನುಹುಳುಗಳು ದಾಳಿ ನಡೆಸಿದ್ದು ಯುವಕ ತಕ್ಷಣವೇ ಎಚ್ಚೆತ್ತು ಆ ಜಾಗದಿಂದ ಓಡಿ ಹತ್ತಿರದಲ್ಲಿದ್ದ ಮನೆಗೆ ಹೋಗಿ ತನ್ನನ್ನು ರಕ್ಷಿಸಿಕೊಂಡು ಮೃತ ರೈತನ ಮೇಲಿನ ಹೆಜ್ಜೇನು ದಾಳಿ ವಿಷಯ ತಿಳಿಸಿದ್ದಾನೆ.ಸುದ್ದಿ ತಿಳಿದು ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ರೈತ ರಂಗಪ್ಪ ಕೊನೆಯುಸಿರೆಳೆದಿದ್ದರು. ಮೃತ ರೈತನಿಗೆ ಪತ್ನಿ, ಪುತ್ರಿ ಹಾಗೂ ಮೂವರು ಗಂಡುಮಕ್ಕಳಿದ್ದಾರೆ. ಮಂಗಳವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಮೃತ ರೈತನ ಅಂತ್ಯಕ್ರಿಯೆ ನೆರವೇರಿತು.ಅಪ್ರಾಪ್ತನಿಂದ ಅಪಘಾತ: ಬೈಕ್ ಮಾಲೀಕನಿಗೆ 29 ಸಾವಿರ ರು. ದಂಡಮಳವಳ್ಳಿ:ಅಪ್ರಾಪ್ತನಿಗೆ ಚಾಲನೆ ಮಾಡಲು ಬೈಕ್ ನೀಡಿ ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಮಾಲೀಕನಿಗೆ ಮಳವಳ್ಳಿ ಜೆಎಂಎಫ್ಸಿ ನ್ಯಾಯಾಲಯ 29 ಸಾವಿರ ರು. ದಂಡ ಹಾಗೂ ಎರಡು ದಿನಗಳ ಸಜಾ ಶಿಕ್ಷೆ ನೀಡಿ ತೀರ್ಪು ನೀಡಿದೆ.
ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜವಗನಹಳ್ಳಿಯ ಕೆರೆ ಏರಿಯ ಬಳಿ 2021ರ ಜನವರಿಯಲ್ಲಿ ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿದ್ದ ಬೈಕ್ ಮತ್ತು ಸೈಕಲ್ ನಡುವೆ ಡಿಕ್ಕಿಯಾಗಿ ಸೈಕಲ್ ಸವಾರ ಸಾವನ್ನಪ್ಪಿದ್ದ, ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ್ದ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಹೊನಗನಹಳ್ಳಿಯ ಸಿದ್ದರಾಜು ಎಂಬುವವರು ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಮಳವಳ್ಳಿಯ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರು ವಿಚಾರಣೆ ನಡೆಸಿ ಬೈಕ್ ಮಾಲೀಕ ಸಿದ್ದರಾಜು ಅವರಿಗೆ ಒಟ್ಟು 29 ಸಾವಿರ ರು.ದಂಡ ಹಾಗೂ ಎರಡು ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.