ಸ್ಕೂಟರ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ದಂಪತಿ, ಓರ್ವ ಪುತ್ರಿ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಪುತ್ರಿ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಜರುಗಿದೆ. ಬೆಂಗಳೂರು ಹೆಗ್ಗನಹಳ್ಳಿಯಲ್ಲಿ ವಾಸವಾಗಿರುವ ಮುತ್ತುರಾಜ್, ಆತನ ಪತ್ನಿ ಕಾವ್ಯ, ಪುತ್ರಿ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ಕೂಟರ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ದಂಪತಿ, ಓರ್ವ ಪುತ್ರಿ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಪುತ್ರಿ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಜರುಗಿದೆ.

ಬೆಂಗಳೂರು ಹೆಗ್ಗನಹಳ್ಳಿಯಲ್ಲಿ ವಾಸವಾಗಿರುವ ಮುತ್ತುರಾಜ್ (35), ಆತನ ಪತ್ನಿ ಕಾವ್ಯ (30), ಪುತ್ರಿ ಕೀರ್ತನಾ (8) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಮತ್ತೊಂದು ಮಗು ಭುವನ 12 ಗಂಭೀರವಾಗಿ ಗಾಯಗೊಂಡು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೃತರು ಮೂಲತಃ ರಾಮನಗರ ಜಿಲ್ಲೆಯ ಕನಕಪುರ ಟೌನ್ ನಿವಾಸಿಗಳಾಗಿದ್ದಾರೆ. ಮೃತ ಮುತ್ತುರಾಜು ಬೆಂಗಳೂರಿನ ಡಿಟಿಡಿಸಿ ಪಾರ್ಸಲ್ ಸರ್ವಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದವರೊಂದಿಗೆ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು.

ಮುತ್ತುರಾಜನ ಅತ್ತೆ ಶಾಂತಮ್ಮ ಕೊಪ್ಪ ಗ್ರಾಮದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಕಾವ್ಯ ಮತ್ತು ಮಕ್ಕಳೊಂದಿಗೆ ಅತ್ತೆ ಮನೆಗೆ ಬಂದಿದ್ದ ಮುತ್ತುರಾಜು ಹಬ್ಬ ಮುಗಿದ ನಂತರ ಮಂಗಳವಾರ ಮುಂಜಾನೆ 5 ಗಂಟೆಗೆ ಕುಟುಂಬದವರೊಂದಿಗೆ ತಮ್ಮ ಟಿವಿಎಸ್ ಜುಪಿಟರ್ ಸ್ಕೂಟರ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು.

ಅತ್ತೆ ಮನೆ ಬಿಟ್ಟ ಕೆಲವೇ ಕ್ಷಣಗಳಲ್ಲಿ ಕೊಪ್ಪ ಗ್ರಾಮದ ಇಂಡಿಯನ್ ಪೆಟ್ರೋಲ್ ಬಂಕ್‌ನ ಮದ್ದೂರು- ಕೊಪ್ಪ ರಸ್ತೆಯಲ್ಲಿ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಮುತ್ತುರಾಜು, ಕಾವ್ಯ, ಮಗಳು ಕೀರ್ತನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭುವನ ತೀವ್ರವಾಗಿ ಗಾಯಗೊಂಡಿದ್ದಾಳೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೊಪ್ಪ ಠಾಣೆಯ ಪಿಎಸ್ಐ ಆರ್.ಬಿ.ಉಮೇಶ್ ಹಾಗೂ ಸಿಬ್ಬಂದಿ ಸಾರ್ವಜನಿಕರ ನೆರವಿನಿಂದ ಮೃತರು ಮತ್ತು ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.

ಘಟನೆ ನಂತರ ಹಾಲಿನ ಟ್ಯಾಂಕರ್ ಚಾಲಕ ಧನು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದನು. ನಂತರ ಪೊಲೀಸರು ಪೆಟ್ರೋಲ್ ಬಂಕ್ ಮತ್ತು ಮತ್ತಿತರ ಸ್ಥಳಗಳಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್, ಮದ್ದೂರು ಗ್ರಾಮಾಂತರ ಸಿಪಿಐ ನಾರಾಯಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.

ಶಾಂತಮ್ಮರ ಮನೆಯಲ್ಲಿ ಸೂತಕದ ಛಾಯೆ

ಮದ್ದೂರು:

ತಾಲೂಕಿನ ಕೊಪ್ಪದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 8 ವರ್ಷದ ಮಗು ಸೇರಿ ಮೂವರು ಮೃತಪಟ್ಟ ಕುಟುಂಬದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಶಾಂತಮ್ಮರ ಮನೆ ಇರುವ ಕೆಲವೇ ದೂರದ ಅಂತರದಲ್ಲಿ ಅಳಿಯ ಮುತ್ತುರಾಜು, ಮಗಳು ಕಾವ್ಯ ಹಾಗೂ ಮೊಮ್ಮಗಳು ಕೀರ್ತನ ಅಪಘಾತಕ್ಕೆ ಬಲಿಯಾಗಿರುವುದರಿಂದ ಎರಡು ಕುಟುಂಬಗಳಲ್ಲಿ ದುಃಖ ಮಡುಗಟ್ಟಿದೆ.

ಅಳಿಯ, ಮಗಳು, ಮೊಮ್ಮೊಗಳನ್ನು ಕಳೆದಕೊಂಡ ತಾಯಿ ಶಾಂತಮ್ಮ ಸೇರಿದಂತೆ ಮುತ್ತುರಾಜು ಅವರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟುತ್ತಿತ್ತು. ಸೋಮವಾರ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ಕಾಯಕಕ್ಕೆ ತೆರಳುತ್ತಿದ್ದ ದಂಪತಿಗೆ ಹಾಲಿನ ಟ್ಯಾಂಕರ್ ಜವರಾಯನ ರೂಪದಲ್ಲಿ ಬಂದು ಅಪ್ಪಳಿಸಿ ಅಟ್ಟಹಾಸ್ಯ ಮೆರೆದಿದ್ದಾನೆ. ಬದುಕಿ ಬಾಳಬೇಕಾದ ಮೂವರ ಜೀವವನ್ನು ವಿಧಿ ಕಸಿದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ಮೇರೆಗೆ ನಾಗಮಂಗಲ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಮೃತರ ತಾಯಿ ಶಾಂತಮ್ಮರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.