ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ನಗರದಲ್ಲಿನ 105 ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯ ಹಿನ್ನೆಲೆಯಲ್ಲಿ 529 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದರು.
ಬೆಂಗಳೂರು : ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ನಗರದಲ್ಲಿನ 105 ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯ ಹಿನ್ನೆಲೆಯಲ್ಲಿ ಪೊಲೀಸರು, ಲೇಬರ್ ಇನ್‌ಸ್ಪೆಕ್ಟರ್‌ಗಳು ಶನಿವಾರ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಕೆಲಸದಲ್ಲಿ ತೊಡಗಿದ್ದ 529 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದರು. ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯಡಿ ಒಟ್ಟು 105 ಪ್ರಕರಣಗಳನ್ನು ದಾಖಲಿಸಿದ್ದಾರೆ. ನಗರದ 11 ಡಿಸಿಪಿ ವಿಭಾಗದ 6076 ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು. ಕಾರ್ಯಾಚರಣೆಯ ವೇಳೆ ಕೆಲಸದಲ್ಲಿ ತೊಡಗಿದ್ದ 529 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ.
ಮಕ್ಕಳನ್ನು ಕಳುಹಿಸುವಂತೆ ಪೋಷಕರ ಪಟ್ಟು:
ಇನ್ನು ರಕ್ಷಣೆ ಮಾಡಲಾದ ಮಕ್ಕಳನ್ನು ಬೆಂಗಳೂರಿನ ಡೇರಿ ಸರ್ಕಲ್ ಬಳಿಯಿರುವ ಬಾಲ ಮಂದಿರದಲ್ಲಿ ಇರಿಸಲಾಗಿದೆ. ತಮ್ಮ ಮಕ್ಕಳನ್ನು ಕಳುಹಿಸಿ ಎಂದು ಬಾಲ ಮಂದಿರ ಎದುರು ಜಮಾಯಿಸಿದ ಪೋಷಕರು ಪಟ್ಟು ಹಿಡಿದ ಘಟನೆ ನಡೆದಿದೆ. ಮಂಗಳವಾರದವರೆಗೂ ಮಕ್ಕಳನ್ನ ಪೋಷಕರಿಗೆ ಹಸ್ತಾಂತರಿಸಲಾಗಲ್ಲ. ಯಾವುದೇ ಬಾಲಕಾರ್ಮಿಕರನ್ನ ರಕ್ಷಿಸಿದರೆ ನೇರವಾಗಿ ಪೋಷಕರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಚೈಲ್ಡ್ ವೆಲ್ಫೇರ್ ಕಮಿಟಿ ಮುಂದೆ ಹಾಜರುಪಡಿಸಬೇಕು. ಕಮಿಟಿಯು ನಿಜವಾದ ಪೋಷಕರನ್ನು ಪರಿಶೀಲಿಸಲಿದೆ. ಆ ಬಳಿಕ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಪರಾಧ ಎಂದು ಪೋಷಕರಿಗೆ ಮನವರಿಕೆ ಮಾಡಲಾಗುತ್ತೆ. ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ ಆಯಾ ಮಕ್ಕಳನ್ನು ಪೋಷಕರ ಜತೆಗೆ ಕಳುಹಿಸಿ ಕೊಡಲಾಗುತ್ತದೆ. ಅಥವಾ ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ, ಮಾರಾಟ ಮಾಡಿ ಕೆಲಸಕ್ಕೆ ಇಟ್ಟಿರುವುದು ಕಂಡ ಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಅವರು ಶಿಫಾರಸ್ಸು ಮಾಡುತ್ತಾರೆ. ಸದ್ಯ 2 ದಿನ ರಜೆ ಇರುವ ಕಾರಣ, ಮಂಗಳವಾರ ಕಮಿಟಿ ಮುಂದೆ ರಕ್ಷಿಸಲಾದ ಮಕ್ಕಳನ್ನು ಹಾಜರು ಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ವಿಭಾಗ ಸ್ಥಳಗಳ ಸಂಖ್ಯೆ ಬಾಲಕರು ಕೇಸ್
ಕೇಂದ್ರ 492 63 0
ದಕ್ಷಿಣ 515 52 4
ಪಶ್ಚಿಮ 754 103 15
ಉತ್ತರ 327 66 3
ನೈರುತ್ಯ 150 17 5
ವಾಯುವ್ಯ 395 27 9
ಪೂರ್ವ 927 74 18
ಈಶಾನ್ಯ 420 47 17
ಆಗ್ನೇಯ 476 24 0
ಎಲೆಕ್ಟ್ರಾನಿಕ್ ಸಿಟಿ 343 3 0
ವೈಟ್‌ಫೀಲ್ಡ್ 857 8 8
ಸಿಸಿಬಿ 420 45 26
ಒಟ್ಟು 6,076 529 105
Sep 14, 2026, 12:36:08 AM
Bangalore
