ಮಗಳಿಗೆ ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 1.4 ಕೋಟಿ ರು.ಪಡೆದು ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಗಳಿಗೆ ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 1.4 ಕೋಟಿ ರು.ಪಡೆದು ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಆರೋಪಿಗಳಾದ ಎ.ಶಿಲ್ಪಾ ಮತ್ತವರ ಪತಿ ಪಿ.ಕಿರಣ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿತು.

ಇದು ಕೇವಲ ಹಣ ವಸೂಲಾತಿಗೆ ಸಂಬಂಧಿಸಿದ ವಿವಾದವಲ್ಲ. ಮೇಲ್ನೋಟಕ್ಕೆ ನಂಬಿಕೆ ದ್ರೋಹ ಮತ್ತು ವಂಚನೆಯ ಅಪರಾಧದ ಅಂಶಗಳು ಪ್ರಕರಣದಲ್ಲಿವೆ. ವ್ಯವಹಾರದ ಮೂಲವೇ ವಂಚನೆಯಿಂದ ಕೂಡಿತ್ತು ಎಂಬ ಆರೋಪವಿರುವಾಗ, ಅದನ್ನು ಸಿವಿಲ್‌ ವ್ಯವಹಾರವೆಂಬ ನೆಪದಲ್ಲಿ ಕಾನೂನುಬದ್ಧ ಕ್ರಿಮಿನಲ್‌ ತನಿಖೆಯನ್ನು ಹತ್ತಿಕ್ಕಲು ಅವಕಾಶ ನೀಡಲಾಗದು. ಪ್ರಕರಣ ಇದೀಗ ಆರಂಭಿಕ ಹಂತದಲ್ಲಿರುವ ಕಾರಣ ಎಫ್‌ಐಆರ್‌ ರದ್ದುಗೊಳಿಸಿದರೆ, ತನಿಖೆಯನ್ನು ಮೊಟಕುಗೊಳಿಸಿದಂತಾಗುತ್ತದೆ. ಪೊಲೀಸರು ತನಿಖೆ ಮುಂದುವರಿಸಹುದು ಎಂದು ಆದೇಶಿಸಿದೆ.

ಅರ್ಜಿದಾರ ದಂಪತಿಯು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ತಮಗೆ ಪ್ರಭಾವಿ ಸಂಪರ್ಕಗಳಿದೆ ಎಂದು ಹೇಳಿ, 2023ರಲ್ಲಿನೀಟ್‌ ಪರೀಕ್ಷೆ ಬರೆದಿದ್ದ ನನ್ನ ಮಗಳಿಗೆ ಮಹಿಳೆಯು ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ 2023ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ 1.4 ಕೋಟಿ ಹಣವನ್ನು ನನ್ನಿಂದ ದಂಪತಿ ಪಡೆದಿದ್ದಾರೆ. ಸೀಟು ಕೊಡಿಸದೆ ಮತ್ತು ಹಣ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ಮಿತಾ ಪ್ರಸಾದ್‌ ಎಂಬುವರು ಬೆಂಗಳೂರಿನ ಬಗಲಗುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ದಾಖಲಿಸಿದ ಎಫ್ಐರ್‌ ರದ್ದು ಕೋರಿ ಅರ್ಜಿದಾರ ದಂಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ದಂಪತಿ ಅವರ ಪರ ವಕೀಲರು, ಇದು ಇಬ್ಬರ ನಡುವೆ 3 ವರ್ಷಗಳ ಹಿಂದೆ ನಡೆದಿದ್ದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸಿವಿಲ್‌ ವಿವಾದವಾಗಿದೆ. ಇದರಿಂದ ಎಫ್‌ಐಆರ್‌ ರದ್ದುಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಈ ವಾದ ತಿರಸ್ಕರಿಸಿದ ನ್ಯಾಯಪೀಠ, ಹಣವನ್ನು ವಸೂಲಿ ಮಾಡಲು ಒತ್ತಡ ಹೇರುವ ಉದ್ದೇಶದಿಂದಲೇ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂಬ ವಾದಕ್ಕೆ ‘ಸಿವಿಲ್‌ ವಿವಾದ’ ಎಂಬ ಪದ ಬಳಕೆ ಮಾತ್ರ ರಕ್ಷಾ ಕವಚವಾಗುವುದಿಲ್ಲ. ಹಣ ಒಳಗೊಂಡ ಪ್ರತಿಯೊಂದು ವ್ಯವಹಾರವೂ ಆ ಕಾರಣಕ್ಕಾಗಿಯೇ ತನ್ನ ಕ್ರಿಮಿನಲ್‌ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.