ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನ್ಯಾಯಾಲಯ ಒಂದು ಅಡ್ಡ ಬರದಿದ್ದರೆ ಟನಲ್‌ ರಸ್ತೆ, ಬ್ಯುಸಿನೆಸ್‌ ಕಾರಿಡಾರ್‌, ಡಬಲ್‌ ಡೆಕ್ಕರ್‌ ರಸ್ತೆ ಸೇರಿ ಎಲ್ಲ ಯೋಜನೆಗಳ್ನೂ ನನ್ನ ಅವಧಿಯಲ್ಲೇ ಪ್ರಾರಂಭಿಸುತ್ತೇನೆ. ರಾಜಕೀಯ ಪಕ್ಷಗಳು ಎಷ್ಟೇ ವಿರೋಧಿಸಿದರೂ ನಾನು ಯೋಜನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನ್ಯಾಯಾಲಯ ಒಂದು ಅಡ್ಡ ಬರದಿದ್ದರೆ ಟನಲ್‌ ರಸ್ತೆ, ಬ್ಯುಸಿನೆಸ್‌ ಕಾರಿಡಾರ್‌, ಡಬಲ್‌ ಡೆಕ್ಕರ್‌ ರಸ್ತೆ ಸೇರಿ ಎಲ್ಲ ಯೋಜನೆಗಳ್ನೂ ನನ್ನ ಅವಧಿಯಲ್ಲೇ ಪ್ರಾರಂಭಿಸುತ್ತೇನೆ. ರಾಜಕೀಯ ಪಕ್ಷಗಳು ಎಷ್ಟೇ ವಿರೋಧಿಸಿದರೂ ನಾನು ಯೋಜನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಸಂಪಾದಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಬೆಂಗಳೂರಿನ ಸಂಚಾರದಟ್ಟಣೆಗೆ ಅತಗತ್ಯವಾದ ಯೋಜನೆ ಘೋಸಿಸಿದ್ದೇವೆ. ಬ್ಯುಸಿನೆಸ್‌ ಕಾರಿಡಾರ್‌ ಯೋಜನೆಗೆ ₹26,000 ಕೋಟಿ ಸಾಲ ಪಡೆದು ಮಾಡುತ್ತಿದ್ದೇವೆ. ಟನಲ್‌ ರಸ್ತೆ ಮಾಡುತ್ತಿದ್ದು, ಲಾಲ್‌ಬಾಗ್‌ನಲ್ಲಿ ಎಕ್ಸಿಟ್‌ ನೀಡುತ್ತಿದ್ದೇವೆ ಎಂದು ವಿವಾದ ಸೃಷ್ಟಿಸಿದ್ದಾರೆ. ಜನರಿಗಾಗಿ ಮಾಡುತ್ತಿರುವ ಯೋಜನೆ ಅಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಟನಲ್‌ ರಸ್ತೆ ಯಾಕೆ ಬೇಕು ಎನ್ನುತ್ತಾರೆ. ಕಟ್ಟಡ ಒಡೆಯಬೇಕಾದರೆ ದುಪ್ಪಟ್ಟು ಪರಿಹಾರ ನೀಡಬೇಕು. ಪ್ರತಿ ಅಡಿಗೆ ₹40-50 ಸಾವಿರ ಇರುವ ಕಡೆ ಭೂಸ್ವಾಧೀನ ಮಾಡಲು ಸಾಧ್ಯವೇ? ಸಂಸದ ತೇಜಸ್ವಿ ಸೂರ್ಯ ಸಾರ್ವಜನಿಕ ಸಾರಿಗೆ ಬಗ್ಗೆ ಹೇಳುತ್ತಾರೆ. ಇವರು ಹಾಗೂ ಇವರ ಹೆಂಡತಿ ಬಸ್ಸಿನಲ್ಲಿ ಓಡಾಡುತ್ತಾರಾ? ಎಂದು ಪ್ರಶ್ನಿಸಿದರು.

ಮುಂಬೈನಲ್ಲಿ ಏಳು ಟನಲ್‌ ರಸ್ತೆ ಮಾಡಲು ಹೊರಟಿದ್ದಾರೆ. ಆದರೆ, ನಾವು ₹4,000 ಕೋಟಿ ಮಾತ್ರ ಬಂಡವಾಳ ಹೂಡಿ ಟನಲ್‌ ರಸ್ತೆ ಮಾಡಲು ಹೋದರೆ ರಾಜಕೀಯ ಮಾಡುತ್ತಾರೆ. ನಮ್ಮ ಬಳಿ ಸಮಯ ಕಡಿಮೆ ಇದೆ. ರಾಜಕೀಯ ಪಕ್ಷಗಳು ಎಷ್ಟೇ ವಿರೋಧಿಸಿದರೂ ನಾನು ಯೋಜನೆ ಮಾಡುತ್ತೇನೆ. ಆದರೆ, ನ್ಯಾಯಾಂಗವು ಸಣ್ಣ ತಡೆಯಾಜ್ಞೆ ನೀಡಿದರೂ ವ್ಯಾಪಕ ಬದಲಾವಣೆ ಆಗುತ್ತದೆ. ಹೀಗಾಗಿ ನ್ಯಾಯಾಲಯದ ಸಹಕಾರ ಬೇಕು ಎಂದರು. ಉದಾ: ಶಿವರಾಮ ಕಾರಂತ ಬಡಾವಣೆ ಶುರುವಾಗಿ 20 ವರ್ಷ ಆಯಿತು. ನಾವು ಅಧಿಕಾರಕ್ಕೆ ಬಂದ ತಕ್ಷಣ ನಿವೇಶನ ಹಂಚಿಕೆಗೆ ನಿರ್ಧರಿಸಿದೆವು. ಆದರೆ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಬಿಡಿಎ ₹16,000 ಕೋಟಿ ಹೂಡಿಕೆ ಮಾಡಿ 3 ವರ್ಷ ಕಾದರೆ ಅದಕ್ಕೆ ಬಡ್ಡಿ ಏನು? ಹೀಗಾಗಿ ₹3,900 ನಿಗದಿ ಮಾಡಿದ್ದ ನಿವೇಶನ ದರ ₹6,000 ಹೋಯಿತು.

ಕೇಂದ್ರ ಸಹಕರಿಸಿದರೆ 1 ವರ್ಷದಲ್ಲಿ ಮೇಕೆದಾಟು ಗುದ್ದಲಿ ಪೂಜೆ: ಸಿಎಂ

ತಮಿಳುನಾಡು ಹಾಗೂ ನಮ್ಮ ನಡುವಿನ ವಿವಾದ ಬಗೆಹರಿದಿದೆ. ಅದೆಲ್ಲವೂ ಗೊತ್ತಾಗಿಯೇ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಚರ್ಚೆಗೆ ಬಂದರು. ಆಗ ನಮ್ಮ ಯುವಕರು ಗಲಾಟೆ ಮಾಡಿದರು. ಹೀಗಾಗಿ ಇವೆಲ್ಲಾ ಸ್ವಲ್ಪ ತಣ್ಣಗಾಗಲಿ ಆಮೇಲೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ದೂರವಾಣಿ ಕರೆ ಮಾಡಿದ್ದೆ. ತಮಿಳುನಾಡಿಗೆ ಸಂದಿಗ್ದ ಪರಿಸ್ಥಿತಿಯಲ್ಲಿ ನೀರು ಬಿಡುವ ಸಲುವಾಗಿಯೇ ಜಲಾಶಯ ಮಾಡಲಾಗುತ್ತಿದೆ ಎಂದು ಹೇಳಿದ್ದೆವು. ಕೇಂದ್ರ ಒಪ್ಪಿಗೆ ನೀಡಿದರೆ 1 ವರ್ಷದಲ್ಲಿ ಗುದ್ದಲಿ ಪೂಜೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.ಎಲ್ಲಾ ತಾಲೂಕುಗಳಲ್ಲೂ ಮೊಬೈಲಿಟಿ ಗ್ರಿಡ್ತಾಲೂಕು ಮಟ್ಟದ ಪಟ್ಟಣ, ನಗರಗಳ ಯೋಜನಾಬದ್ಧ ಬೆಳವಣಿಗೆಗಾಗಿ ನಗರ ಯೋಜನೆ ರೂಪಿಸುವಾಗಲೇ ಮೊಬೈಲಿಟಿ ಗ್ರಿಡ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಹೊರ ವರ್ತುಲ ರಸ್ತೆ ಸೇರಿದಂತೆ ಅಗತ್ಯ ರಸ್ತೆ, ಮೂಲಸೌಕರ್ಯಕ್ಕೆ ಜಾಗ ಬಿಟ್ಟು ಯಾರೇ ಆಗಲಿ ಅಭಿವೃದ್ಧಿ ಮಾಡಬೇಕು. ಈ ಮೂಲಕ ಮೊಬೈಲಿಟಿಗೆ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಲೆನಾಡು, ಕರಾವಳಿ ಭಾಗದಲ್ಲಿ ಹೊಸ ಪ್ರವಾಸೋದ್ಯಮ ನೀತಿ ತರಲು ತೀರ್ಮಾನಿಸಲಾಗಿದೆ. ಗೋವಾಗೂ ನಮ್ಮ ಕರಾವಳಿಗೂ ಯಾವುದರಲ್ಲೂ ಕಡಿಮೆಯಿಲ್ಲ. ಆದರೆ, ನಮ್ಮಲ್ಲಿ ಸಂಜೆಯಾದರೆ ನಾಟಕ, ಡ್ರಾಮ, ಕೋಲಾಟ ಬಿಟ್ಟರೆ ಬೇರೇನೂ ಇಲ್ಲ. ಹೀಗಾಗಿ ಪ್ರವಾಸೋದ್ಯಮಕ್ಕೆ ಹೂಡಿಕೆ ಮಾಡುವವರಿಗೆ ಮೂಲಸೌಕರ್ಯ ಸ್ಟೇಟಸ್‌ ನೀಡುತ್ತೇವೆ. ಮಧ್ಯಪ್ರದೇಶ, ರಾಜಸ್ಥಾನ ರೀತಿ 20 ವರ್ಷದ ಗುತ್ತಿಗೆ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

ದಸರಾದಲ್ಲಿ ಎಲ್ಲಾ ರಾಜ್ಯಗಳ ಕಲೆ, ಸಂಸ್ಕೃತಿ ಪ್ರದರ್ಶನ:

ಈ ಬಾರಿಯ ನಾಡಹಬ್ಬ ದಸರಾ ವೇಳೆ ಎಲ್ಲಾ ರಾಜ್ಯಗಳಿಗೂ ಆಹ್ವಾನ ನೀಡಿದ್ದೇವೆ. ದಕ್ಷಿಣ ರಾಜ್ಯಗಳಾದ ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಿಗೂ ಆಹ್ವಾನ ನೀಡಿದ್ದು, ಅವರ ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇತಿಹಾಸ ಸೃಷ್ಟಿಯಲ್ಲಿ ನನಗೆ ನಂಬಿಕೆ: ಸಿಎಂ ನಾನು ಇತಿಹಾಸ ಓದುವ, ಬರೆಯುವ ಬದಲು ಸೃಷ್ಟಿಸುವುದರಲ್ಲಿ ನಂಬಿಕೆ ಹೊಂದಿದ್ದೇನೆ. ದೂರದೃಷ್ಟಿಯೊಂದಿಗೆ ಹಲವು ಬೃಹತ್‌ ಯೋಜನೆಗಳಿಗೆ ಕೈ ಹಾಕಿದ್ದೇನೆ. ಮುಂದಿನ ಅವಧಿಯಲ್ಲೂ ನಾವೇ ಅಧಿಕಾರದಲ್ಲಿರುತ್ತೇವೆ. ಹೀಗಾಗಿ ಘೋಷಿಸಿದ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಶಿವಕುಮಾರ್‌ ಸ್ಪಷ್ಟಪಡಿಸಿದರು. ನೀರಾವರಿ ವಿಷಯದಲ್ಲಿ ತೆಲಂಗಾಣ, ಆಂಧ್ರ ಮುಖ್ಯಮಂತ್ರಿ ಹಾಗೂ ನಾನು ಸೇರಿ ನದಿ ಜೋಡಣೆ ಬಗ್ಗೆ ಕೇಂದ್ರ ಸರ್ಕಾರದ ಜತೆ ಮಾತನಾಡಿದ್ದೇವೆ. ನವಿಲುತೀರ್ಥ ಜಲಾಶಯದ ಬಗ್ಗೆ ಚರ್ಚೆ ಮಾಡಿ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಮೇಕೆದಾಟು ಯೋಜನೆ ವಿಚಾರದಲ್ಲೂ ಜೈಲು, ಬೈಲು ಎಲ್ಲವೂ ನೋಡಿ ನೋಡಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಗೊತ್ತಿದೆ. ಹೀಗಾಗಿ ಅಡ್ವೊಕೇಟ್‌ ಜನರಲ್‌ಗೆ ಸಲಹೆ ನೀಡಿ ಸುಪ್ರೀಂ ಕೋರ್ಟ್‌ ನಮ್ಮ ರಾಜ್ಯದ ಪರ ಆದೇಶ ಮಾಡುವಂತೆ ಚಾಣಾಕ್ಷ ನಡೆ ಅನುಸರಿಸಿದ್ದೇವೆ. 172 ಟಿಎಂಸಿ ತಮಿಳುನಾಡಿಗೆ ಬಿಟ್ಟು ಉಳಿದ ನೀರನ್ನು ಬಳಸಿಕೊಳ್ಳಲು ಕೋರ್ಟ್‌ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರದ ಅಂಗಳದಲ್ಲಿ ಬಾಲ್‌ ಇದೆ ಎಂದು ಶಿವಕುಮಾರ್‌ ಹೇಳಿದರು.