ಕನ್ನಡಪ್ರಭ ವಾರ್ತೆ ಬೆಂಗಳೂರು
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೊಬ್ಬಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ವಿಶ್ವನಾಥ್ (25) ಮೃತ ವ್ಯಕ್ತಿ. ಮಂಗಳವಾರ ರಾತ್ರಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಯುುತ್ತಿದೆ.ಕೆಲ ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದ ವಿಶ್ವನಾಥ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಹೋಗಿದ್ದು ಅಲ್ಲಿಂದ ಸ್ನೇಹಿತರಿಗೆ ಕರೆ ಮಾಡಿ ಬಳಿಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ಮೇರೆಗೆ ತಡರಾತ್ರಿಯೇ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮುಂಡ ಪತ್ತೆಯಾಗಿದ್ದು, ರುಂಡ ನಾಪತ್ತೆಯಾಗಿತ್ತು.
ರೈಲ್ವೆ ಹಳಿಯಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದ ವಿಶ್ವನಾಥ್ ಅವರ ರುಂಡವನ್ನು ಬೀದಿ ನಾಯಿಗಳು ಕಚ್ಚಿಕೊಂಡು, ಸುಮಾರು 300 ಮೀ. ದೂರದಲ್ಲಿದ್ದ ಕ್ರಿಕೆಟ್ ಮೈದಾನಕ್ಕೆ ತಂದಿವೆ. ಬೆಳಗ್ಗೆ ಆಟವಾಡಲು ಬಂದ ಸ್ಥಳೀಯರು ರುಂಡ ಕಂಡು ಗಾಬರಿಯಾಗಿ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿ ಆ ಬಳಿಕ ರೈಲ್ವೆ ಪೊಲೀಸರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ರುಂಡವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣವನ್ನು ರೈಲ್ವೆ ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.