ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕುಂಜಾಲು ಮುಖ್ಯ ರಸ್ತೆಯಲ್ಲಿ ಗೋವಿನ ರುಂಡ ಹಾಗೂ ದೇಹದ ಭಾಗಗಳನ್ನು ರಸ್ತೆಗೆ ಎಸೆದಿದ್ದ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.ಹಿಂದೂಗಳ ಪವಿತ್ರ ಗೋಮಾತೆಯನ್ನು ಹತ್ಯೆ ಮಾಡಿ ಕುಂಜಾಲು ರಾಮ ಮಂದಿರದ ಸಮೀಪದಲ್ಲಿ ಎಸೆದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಪೋಲಿಸ್ ಇಲಾಖೆ ಬಂಧಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹಾರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕೂಡ ಗೋವಿನ ಕಳೇಬರ ಹಾಗೂ ದೇಹದ ಭಾಗಗಳು ಎಸೆದಿರುವ ಬಗ್ಗೆಯೂ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಆರೋಪಿಗಳ ಬಂಧನಕ್ಕೂ ಪೊಲೀಸ್ ಇಲಾಖೆ ಮುಂದಾಗಬೇಕಿದೆ ಎಂದವರು ಹೇಳಿದ್ದಾರೆ.ಅಲ್ಲದೆ, ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ, ಆರೋಪಿಗಳ ಹಿಂದೆ ಇರುವ ಕಾಣದ ಕೈಗಳು ಹಾಗೂ ಬ್ರಹ್ಮಾವರ ಪರಿಸರದಲ್ಲಿ ಅವ್ಯಾಹತವಾಗಿರುವ ಗೋವು ಕಳ್ಳತನ ಹಾಗೂ ಅಕ್ರಮ ಕಸಾಯಿ ಗಳ ಬಗ್ಗೆ ಕಠಿಣ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.