ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೊಮ್ಮೇರಹಳ್ಳಿ ಬಳಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಯುವತಿಯ ಸಾವಿನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿರುವುದಾಗಿ ಯುವತಿಯ ಸ್ನೇಹಿತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಹೊನ್ನೆಮಡು ಗ್ರಾಮದ ನವೀನ (19) ಮೃತ ಯುವತಿ. ಸ್ನೇಹಿತರಾದ ಅಶ್ವಿನಿ, ವಿಷ್ಣು, ಶಿವಕುಮಾರ್ ವಿರುದ್ಧ ದೂರು ನೀಡಿರುವುದಾಗಿ ತಿಳಿದುಬಂದಿದೆ. ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನವೀನ ಮಂಡ್ಯದ ಪಿ.ಜಿ.ಯೊಂದರಲ್ಲಿ ವಾಸವಾಗಿದ್ದಳು.

ಆ.2ರ ಸಂಜೆ ಸ್ನೇಹಿತರಾದ ಅಶ್ವಿನಿ, ವಿಷ್ಣು, ಶಿವಕುಮಾರ್ ಜೊತೆ ತೆರಳಿದ್ದಳು. ಮನೆಗೆ ಹೋಗುವುದಾಗಿ ಪಿ.ಜಿ ಮಾಲೀಕರಿಗೆ ತಿಳಿಸಿ ನವೀನ ಸ್ನೇಹಿತರ ಜೊತೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಹೋಗಿದ್ದಳು. ಇದೇ ವೇಳೆ ಕೊಮ್ಮೇರಹಳ್ಳಿ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿ ನವೀನ ಸಾವನ್ನಪ್ಪಿದ್ದಳು. ಕಾರಿನಲ್ಲಿದ್ದ ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಸಂಜೆ ನಡೆದ ಅಪಘಾತದ ಬಗ್ಗೆ ರಾತ್ರಿ 11ಗಂಟೆಯಲ್ಲಿ ಮಾಹಿತಿ ನೀಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು, ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಯತ್ನ ನಡೆಸಿದ್ದಾರೆ. ಇದಕ್ಕೆ ನವೀನ ಒಪ್ಪದಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಬಳಿಕ ಕಾರಿನ ಮುಂಬದಿ ಸೀಟಿನಲ್ಲಿ ಕೂರಿಸಿಕೊಂಡು ಲೈಟ್ ಕಂಬಕ್ಕೆ ಡಿಕ್ಕಿ‌ ಹೊಡೆದು ಅಪಘಾತವೆಂದು ಬಿಂಬಿಸಲು ಯತ್ನಿಸಿರುವುದಾಗಿ ನವೀನಳ ತಾಯಿ ಬೊಮ್ಮಮ್ಮ ದೂರಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.