ಕನ್ನಡಪ್ರಭ ವಾರ್ತೆ ಬೆಂಗಳೂರು
ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ, ಹಸುಗೂಸಿನ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.ರಾಯಸಂದ್ರ ನಿವಾಸಿ ಸಾನಿಕಾ (21) ಆತ್ಮಹತ್ಯೆ ಮಾಡಿಕೊಂಡವರು. ಕೃತ್ಯ ಸಂಬಂಧ ಸಾನಿಕಾ ಪಾಲಕರು ನೀಡಿದ ದೂರಿನನ್ವಯ ಪತಿ ನಾಗರಾಜ್ ವಿರುದ್ಧ ವರದಕ್ಷಿಣೆ ಹಾಗೂ ದೌರ್ಜನ್ಯದ ಆರೋಪದಡಿ ಪ್ರಕರಣ ದಾಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರು ನಿವಾಸಿ ನಾಗರಾಜ್ ವೃತ್ತಿಯಲ್ಲಿ ಚಾಲಕನಾಗಿದ್ದು, ಎರಡು ವರ್ಷಗಳ ಹಿಂದೆ ನಗರದ ರಾಯಸಂದ್ರ ನಿವಾಸಿ ಸಾನಿಕಾ ಗೌಡ ಅವರನ್ನು ಮದುವೆಯಾಗಿದ್ದ. ದಂಪತಿಗೆ 7 ತಿಂಗಳ ಮಗು ಇದೆ. ಈ ಮಧ್ಯೆ ಪತಿ ನಾಗರಾಜ್ ಬೇರೊಂದು ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ಸಾನಿಕಾ, ಪತಿಯನ್ನು ಪ್ರಶ್ನಿಸಿ ಬಹಳಷ್ಟು ಬಾರಿ ಜಗಳ ಮಾಡಿಕೊಂಡಿದ್ದರು. ಅಲ್ಲದೆ, ಬಾಣಂತನ ಮುಗಿಸಿಕೊಂಡು ಪತಿ ಮನೆಗೆ ಹೋಗಿದ್ದ ಸಾನಿಕಾ, ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮತ್ತೆ ತವರು ಮನೆಗೆ ವಾಪಸ್ ಬಂದಿದ್ದರು. ಬಳಿಕವೂ ಮೊಬೈಲ್‌ನಲ್ಲೇ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಬೇಸತ್ತ ಆಕೆ, ಭಾನುವಾರ ನಸುಕಿನ ಜಾವ 1.30ರ ಸುಮಾರಿಗೆ ತನ್ನ 7 ತಿಂಗಳ ಮಗುವಿನ ಎದುರೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನೋಟಿಸ್ ನೀಡಿದ ಪೊಲೀಸರು:
ಸಾನಿಕಾ ಪಾಲಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಸಾನಿಕಾ ಪತಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿಗೆ ವಿಡಿಯೋ ಕಾಲ್ ಮಾಡಿ ಲೈವ್ ಆತ್ಮಹತ್ಯೆ:
ನಾಗರಾಜ್ ತಾನು ಪ್ರಿಯತಮೆ ಜತೆ ಮಾತನಾಡುತ್ತಿರುವ ವಿಡಿಯೋ ಮತ್ತು ಆಡಿಯೋ ಕ್ಲಿಪ್‌ಗಳನ್ನು ಪತ್ನಿ ಸಾನಿಕಾಳಿಗೆ ಕಳುಹಿಸಿ ವಿಕೃತ ಸಂತೋಷ ಪಟ್ಟಿದ್ದ ಎನ್ನಲಾಗಿದೆ. ಇದನ್ನು ಕಂಡು ತೀವ್ರ ಮನನೊಂದ ಸಾನಿಕಾ, ಪತಿಗೆ ವಿಡಿಯೋ ಕಾಲ್ ಮಾಡಿ ಆತ ನೋಡುತ್ತಿರುವಂತೆಯೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.