ಬೆಂಗಳೂರು : ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ(86) ಅವರು ಚಿಕಿತ್ಸೆ ಫಲಿಸದೆ ಹೃದಯ ಸ್ತಂಭನದಿಂದ ಶನಿವಾರ ಕೊನೆಯುಸಿರೆಳೆದಿದ್ದಾರೆ.
ನಾಲ್ಕು ದಿನದ ಹಿಂದೆ ಉಸಿರಾಟದ ಸಮಸ್ಯೆ ಕಾಣಸಿಕೊಂಡ ಹಿನ್ನೆಲೆಯಲ್ಲಿ ಚೆನ್ನಮ್ಮ ಅವರನ್ನು ನಗರದ ಎಚ್ಎಎಲ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡದಿಂದ ಚೆನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿತ್ತು. ಆದರೆ, ಶನಿವಾರ ಸಂಜೆ 4.53ಕ್ಕೆ ದಿಢೀರ್ ಹೃದಯ ಸ್ತಂಭನ ಸಂಭವಿಸಿದ ಹಿನ್ನೆಲೆಯಲ್ಲಿ ಚೆನ್ನಮ್ಮ ಮೃತಪಟ್ಟಿದ್ದಾರೆ.
ಚೆನ್ನಮ್ಮ ಅವರು ಪತಿ ಎಚ್.ಡಿ.ದೇವೇಗೌಡ, ಪುತ್ರರಾದ ಎಚ್.ಡಿ.ಬಾಲಕೃಷ್ಣ, ಎಚ್.ಡಿ.ರೇವಣ್ಣ, ಎಚ್.ಡಿ.ರಮೇಶ್, ಎಚ್.ಡಿ.ಕುಮಾರಸ್ವಾಮಿ, ಪುತ್ರಿಯರಾದ ಎಚ್.ಡಿ.ಅನಸೂಯ, ಎಚ್.ಡಿ.ಶೈಲಜಾ ಸೇರಿ ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅರಿಶಿನ-ಕುಂಕಮ ಇರಿಸಿದ ಬಳಿಕ ವಿಧಿವಶ:
ಪತ್ನಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದ ಎಚ್.ಡಿ.ದೇವೇಗೌಡರು, ಸಂಜೆ 4 ಗಂಟೆಗೆ ಆಸ್ಪತ್ರೆಗೆ ಧಾವಿಸಿದರು. ಐಸಿಯುಗೆ ತೆರಳಿ ಪತ್ನಿ ಚೆನ್ನಮ್ಮ ಬಳಿ ಕುಳಿತಿದ್ದರು. ದೇವರಿಗೆ ಪೂಜೆ ಮಾಡಿಸಿ ತಂದಿದ್ದ ಅರಿಶಿನ, ಕಂಕುಮವನ್ನು ಚೆನ್ನಮ್ಮ ಅವರ ಹಣೆಗೆ ಇಟ್ಟರು. ಬಳಿಕ ತಲೆಗೆ ಹೂವು ಮುಡಿಸಿದರು. ನಂತರ ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಅಲ್ಲೇ ಕುಳಿತಿದ್ದರು. ಈ ಸಂದರ್ಭದಲ್ಲೇ ಚೆನ್ನಮ್ಮ ಅವರಿಗೆ ದಿಢೀರ್ ಹೃದಯ ಸ್ತಂಭನವಾಗಿದ್ದು, ಪತಿ ಎದುರೇ ಕೊನೆ ಉಸಿರೆಳೆದರು. ತನ್ನ ಬಾಳಸಂಗಾತಿ ಕಣ್ಣೆದುರೇ ಇಹಲೋಕ ತ್ಯಜಿಸಿದ ದೃಶ್ಯವನ್ನು ಕಂಡು ದೇವೇಗೌಡರು ಕಣ್ಣೀರಿಟ್ಟರು ಎಂದು ಮೂಲಗಳು ತಿಳಿಸಿವೆ.
ಕುಟುಂಬ ಕಣ್ಣೀರು:
ಚೆನ್ನಮ್ಮ ಅವರ ನಿಧನ ಸುದ್ದಿ ತಿಳಿದು ಪುತ್ರರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ, ಪುತ್ರಿಯರಾದ ಅನಸೂಯ, ಶೈಲಜಾ, ಅಳಿಯಂದಿರಾದ ಸಂಸದ ಡಾ.ಸಿ.ಎನ್.ಮಂಜುನಾಥ್, ಚಂದ್ರಶೇಖರ್ ಸೇರಿ ಕುಟುಂಬದ ಸದಸ್ಯರು, ಆಪ್ತರು, ಹಿತೈಷಿಗಳು ಆಸ್ಪತ್ರೆಗೆ ದೌಡಾಯಿಸಿದರು. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದರು. ಚೆನ್ನಮ್ಮ ಅಗಲಿಕೆಯ ದುಃಖ ತಾಳಲಾರದೆ ಕಣ್ಣೀರಿಟ್ಟರು.
ಕುಟುಂಬದ ತೀರ್ಮಾನದಂತೆ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಪದ್ಮನಾಭನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಕಂಬನಿ ಮಿಡಿದರು.
ಗಣ್ಯರ ಕಂಬನಿ:
ಚೆನ್ನಮ್ಮ ಅವರ ನಿಧನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ನಾಯಕರು, ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.
ನಾಳೆ ಅಂತ್ಯಕ್ರಿಯೆ:
ಭಾನುವಾರ ಬೆಳಗ್ಗೆ 11 ಗಂಟೆವರೆಗೆ ಪದ್ಮನಾಭನಗರದ ನಿವಾಸದ ಬಳಿ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಬೆಂಗಳೂರಿನಿಂದ ತವರು ಜಿಲ್ಲೆ ಹಾಸನ ಜಿಲ್ಲೆಯ ಹರದನಹಳ್ಳಿ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗುತ್ತದೆ. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಯಾವ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಬೇಕು ಎಂಬುದರ ಬಗ್ಗೆ ಕುಟುಂಬದ ಸದಸ್ಯರು ಚರ್ಚಿಸಿ ತೀರ್ಮಾನಿಸಲಿದ್ದಾರೆ.
ಚೆನ್ನಮ್ಮ ಅವರ ಹುಟ್ಟೂರು ಮುತ್ತಿಗೆ ಹಿರೇಹಳ್ಳಿ ಅಥವಾ ದೇವೇಗೌಡರ ಸ್ವಗ್ರಾಮ ಹರದನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರ ಅಂತಿಮ ತೀರ್ಮಾನದ ಬಳಿಕ ಸೋಮವಾರ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
