ದೇವನಹಳ್ಳಿ: ಇತ್ತೀಚೆಗೆ ದಲಿತ ಸಮುದಾಯದ ಐಮಂಗಲ ಮಠದ ಶ್ರೀ ಬಸವಮೂರ್ತಿ ಹರಳಯ್ಯ ಸ್ವಾಮೀಜಿ ಮೇಲಿನ ಹಲ್ಲೆ ಮತ್ತು ಜಾತಿ ನಿಂದನೆ ಖಂಡಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿತು.

ಎಂಆರ್‌ಎಚ್‌ಎಸ್ ಸಂಘಟನೆ ಗೌರವ ರಾಜ್ಯಾಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಒಬ್ಬ ಸ್ವಾಮೀಜಿ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಯಾರು ಪ್ರಶ್ನಿಸದಿರುವುದು ಅನ್ಯಾಯ. ಶಿಕ್ಷಿಸಬೇಕಾದ ಪೊಲೀಸ್ ವ್ಯವಸ್ಥೆ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಹಲ್ಲೆ ನಡೆಸಿದವರ ಹಿಂದೆ ಎಷ್ಟು ಬಲಾಡ್ಯರಿದ್ದರೂ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಗಳ ಒಕ್ಕೂಟ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನ್ಯಾಯ ಮತ್ತು ರಕ್ಷಣೆ ಕೊಡಬೇಕಾದ ಪೊಲೀಸ್ ಠಾಣೆಗಳು ಬಲಾಡ್ಯರೊಂದಿಗೆ ಶಾಮೀಲಾಗಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ. ಸಾಮಾನ್ಯ ದಲಿತರ ಮೇಲಿನ ದೌರ್ಜನ್ಯಗಳು ಇಂದು ಸರ್ವೇಸಾಮಾನ್ಯವಾಗಿದೆ. ಆದ್ದರಿಂದ ಉನ್ನತ ಮಟ್ಟದ ಸಮಿತಿ ರಚಿಸಿ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದರು.

ಈ ವೇಳೆ ವಿಶ್ವ ಆದಿ ಜಾಂಬವ ಮಹಾಸಭಾ ರಾಜ್ಯ ಅಧ್ಯಕ್ಷ ಡಾ.ಭೀಮರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರ ನಾರಾಯಣ, ಉಪಾಧ್ಯಕ್ಷ ಮೂರ್ತಿ, ಮೂಲ ಮಾದಿಗ ಸಂಘದ ರಾಜ್ಯಾಧ್ಯಕ್ಷ ಜೆ.ಸಿ.ಪ್ರಕಾಶ್, ಬಹುಜನ ಸೇವಾ ಸಮಿತಿ ಪೂಜಪ್ಪ, ಲಕ್ಕಸ್ವಾಮಿ, ಜಾಂಬವ ಸಂಘದ ರಾಜ್ಯಾಧ್ಯಕ್ಷ ಕದಿರೇಶ, ನರಸಿಂಹಯ್ಯ ಇತರರಿದ್ದರು.

೧೮ ದೇವನಹಳ್ಳಿ ಚಿತ್ರಸುದ್ದಿ:


ದಲಿತ ಸಮುದಾಯದ ಐಮಂಗಲ ಮಠದ ಶ್ರೀ ಬಸವಮೂರ್ತಿ ಹರಳಯ್ಯ ಮೇಲಿನ ಹಲ್ಲೆಯನ್ನು ಖಂಡಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.