ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಹಿರಿಯ ಜನನಾಯಕ, ಸಮಾಜಮುಖಿ ಚಿಂತಕ ಎಚ್.ಸಿ. ಶ್ರೀಕಂಠಯ್ಯ ಅವರ 100ನೇ ಜನ್ಮದಿನದ ಅಂಗವಾಗಿ ಅವರ ಮೊಮ್ಮಗ ಲಲಿತ್ ರಾಘವ್ ಅವರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಯುವಜನತೆಗೆ ಅವರ ಜನಪರ ಸೇವೆ, ಅಭಿವೃದ್ಧಿ ದೃಷ್ಟಿಕೋನ ಮತ್ತು ತಾಲೂಕಿನ ಅಭಿವೃದ್ಧಿಯಲ್ಲಿ ಅವರು ಸಲ್ಲಿಸಿದ ಸೇವೆಗಳನ್ನು ನೆನಪಿಸುವ ಉದ್ದೇಶದಿಂದ ಚನ್ನರಾಯಪಟ್ಟಣ ನಗರ, ನುಗ್ಗೆಹಳ್ಳಿ, ಬಾಗೂರು,ಹಿರೀಸಾವೆ ಹಾಗೂ ಶ್ರವಣಬೆಳಗೊಳದ ಪೌರ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿಯ ಸಾವಿರಾರು ಕಾರ್ಯಕರ್ತೆಯರಿಗೆ ಸೀರೆಗಳು ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ ಗೌರವಿಸಲಾಯಿತು.

ಶತಮಾನೋತ್ಸವವು ಕೇವಲ ಸ್ಮರಣೆಯಲ್ಲ, ಮುಂದಿನ ಪೀಳಿಗೆಗೆ ಸೇವಾ ಮನೋಭಾವ, ಜನಪರ ಅಭಿವೃದ್ಧಿ ಮತ್ತು ಮಾನವೀಯ ಮೌಲ್ಯಗಳನ್ನು ತಲುಪಿಸುವ ಸಂಕಲ್ಪದ ದಿನವಾಗಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಿದೆ. ಈ ಮೂಲಕ ಎಚ್.ಸಿ. ಶ್ರೀಕಂಠಯ್ಯ ಅವರ ಆದರ್ಶಗಳು ಮತ್ತು ಸೇವಾ ಪರಂಪರೆಯು ಮುಂದಿನ ತಲೆಮಾರಿಗೂ ಪ್ರೇರಣೆಯಾಗಲಿ ಎಂಬ ಆಶಯವನ್ನು ಲಲಿತ್ ರಾಘವ್ ವ್ಯಕ್ತಪಡಿಸಿದ್ದಾರೆ.