- ರಾಜೇಗೌಡ ಅಸಮಾಧಾನ । ಸೂಕ್ತ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ । ತಾಪಂ ತ್ರೈಮಾಸಿಕ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶುದ್ಧವಾದ ಮನೆ, ಮನೆಗೂ ಕುಡಿಯುವ ನೀರಿನ ಯೋಜನೆಯಾದ ಜಲ್ ಜೀವನ್ ಮಿಷನ್‌ ಯೋಜನೆಗಳ ಕಾಮಗಾರಿ ಕಳಪೆಯಾಗಿರುವುದರಿಂದ ಯಾವುದೇ ಮನೆಗೂ ಸಮರ್ಪಕ ನೀರು ಬಂದಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಜೆಜೆಎಂ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ತಾಪಂನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಜೆಜೆಎಂ ಕಾಮಗಾರಿ ಬಹುತೇಕ ಕಡೆ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜೆಜೆಎಂ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಿದೆ. ಮೊದಲು ನೀರಿನ ಮೂಲ ನೋಡಿ ಟ್ಯಾಂಕ್ ಕಟ್ಟಬೇಕು. ನಂತರ ಪೈಪ್ ಲೈನ್ ಮಾಡಬೇಕು. ಆದರೆ, ಬಹುತೇಕ ಕಡೆ ಮೊದಲೇ ಪೈಪ್ ಲೈನ್ ಮಾಡಿದ್ದಾರೆ ಎಂದರು.

ಪ್ರತಿ ಸಭೆಗಳಲ್ಲಿ ಹೇಳಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಪಂಗಳು ಕಳಪೆ ಕಾಮಗಾರಿಯನ್ನು ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಪಿಡಿಓ ಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ ಕಳೆದ ಕೆಡಿಪಿ ಸಭೆ ಯಲ್ಲೂ ಜೆಜೆಎಂ ಕಳಪೆ ಕಾಮಗಾರಿ ಬಗ್ಗೆ ಚರ್ಚೆ ನಡೆದಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜೆಜೆಎಂ ನಲ್ಲಿ 162 ಕಾಮಗಾರಿ ಪ್ರಾರಂಭವಾಗಿ 91 ಕಾಮಗಾರಿ ಮುಕ್ತಾಯವಾಗಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಕಟ್ಟಡ ಸೋರುತ್ತಿದೆ ಎಂಬ ದೂರು ಬರುತ್ತಿದೆ. ನಾನು ಹಲವು ವರ್ಷಗಳಿಂದಲೂ ಸಭೆಗಳಲ್ಲಿ ಹೇಳುತ್ತಾ ಬಂದಿದ್ದೇನೆ.ಮಲೆನಾಡಿನಲ್ಲಿ ಯಾವುದೇ ಕಟ್ಟಡ ಕಟ್ಟಬೇಕಾದರೂ ಮಳೆಯಿಂದ ಸೋರದಂತೆ ಸೂಕ್ತ ಪ್ಲಾನ್ ಮಾಡಬೇಕು. ಆರ್.ಸಿ.ಸಿ.ಕಟ್ಟಡ ಕಟ್ಟಿದರೆ ಮಳೆ ನೀರು ಸೋರುತ್ತದೆ. ಹೊಸ ಕಟ್ಟಡ ಕಟ್ಟಲು ಪಪಂನಿಂದ ₹1 ಕೋಟಿ ಅನುದಾನ ಬರಲಿದೆ. ಸರಿಯಾದ ರೀತಿಯಲ್ಲಿ ಆಸ್ಪತ್ರೆ ಕಟ್ಟಡ ಕಟ್ಟಬೇಕು ಎಂದರು. ಡಾ.ಕೆ.ಪಿ.ಅಂಶುಮಂತ್ ಮಾತನಾಡಿ 2011-12 ನೇ ಸಾಲಿನಲ್ಲಿ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆ ನೂತನ ಕಟ್ಟಡ ಕಟ್ಟಲಾಗಿದೆ. ಕೇವಲ 10-12 ವರ್ಷದಲ್ಲೇ ಕಟ್ಟಡ ಹಾಳಾಗಿದೆ. ಮಳೆಗಾಲದಲ್ಲಿ ಸೋರುತ್ತಿದೆ ಎಂದರು.

ತಾಪಂ ಇ.ಓ.ನವೀನ್ ಕುಮಾರ್, ತಹಸೀಲ್ದಾರ್ ಡಾ.ನೂರಲ್ ಹುದಾ, ಕೆಡಿಪಿ ಸದಸ್ಯರಾದ ಮಾಳೂರು ದಿಣ್ಣೆ ರಮೇಶ್, ಕೆ.ವಿ.ಸಾಜು, ಅಂಜುಮ್, ಪ್ರವೀಣ್, ಪಿಸಿಎಆರ್.ಡಿ ಬ್ಯಾಂಕಿನ ಅಧ್ಯಕ್ಷ ಕೆ.ಎಂ.ಸುಂದರೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ,ತಾ.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ,ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಯಪಾಲ್, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂಗಳ ಪಿಡಿಓಗಳು ಇದ್ದರು.

-- ಬಾಕ್ಸ್--

ಮರ ಬಿದ್ದರೆ ಯಾವ ಇಲಾಖೆ ಹೊಣೆ

ಮುಖ್ಯ ರಸ್ತೆಯಲ್ಲಿ ಮರ ಬಿದ್ದರೆ ಯಾವ ಇಲಾಖೆ ತೆಗೆಯಬೇಕು ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಪ್ರಶ್ನಿಸಿದರು.

ನರಸಿಂಹರಾಜಪುರ ಪಟ್ಟಣದಿಂದ ಶಿವಮೊಗ್ಗಕ್ಕೆ ಹೋಗುವ ರಸ್ತೆಯ ಮೆಣಸೂರು ಸಮೀಪ ಮರ ಉರುಳಿ 10 ದಿನ ಆಗಿದೆ.ಸ್ವಲ್ಫ ಭಾಗ ರಸ್ತೆ ಉಳಿದಿದೆ. ಯಾರೂ ತೆಗೆಯುತ್ತಿಲ್ಲ.ಯಾವ ಇಲಾಖೆ ತೆಗೆಯಬೇಕು. ಯಾರಿಗೂ ಜವಾಬ್ದಾರಿ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ರಸ್ತೆಯಲ್ಲಿ ಮರ ಬಿದ್ದು ಅಪಘಾತವಾದರೆ, ಗುಂಡಿಯಿಂದ ಅಪಘಾತವಾದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಹೊಣೆ ಮಾಡಿ ಪೊಲೀಸರು ಕೇಸು ದಾಖಲಿಸಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕರಿಗೆ ಸೂಚಿಸಿದರು.

-- ಬಾಕ್ಸ್--

ಶೃಂಗೇರಿ ಕ್ಷೇತ್ರದ ರಸ್ತೆಗಳೇ ಅತ್ಯುತ್ತಮ

ರಾಜ್ಯದ ಬೇರೆ ವಿಧಾನ ಸಭೆ ಕ್ಷೇತ್ರದ ರಸ್ತೆಗಳಿಗೆ ಹೋಲಿಕೆ ಮಾಡಿದರೆ ಶೃಂಗೇರಿ ಕ್ಷೇತ್ರದ ರಸ್ತೆಗಳೇ ಅತ್ಯುತ್ತಮವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಹೊಸದಾಗಿ ಅನುದಾನ ಬಂದರೆ ಇನ್ನಷ್ಟು ಗುಣಮಟ್ಟದ ರಸ್ತೆ ಮಾಡಿಸುತ್ತೇನೆ. ಕಳೆದ ವರ್ಷ ಅತಿವೃಷ್ಠಿಯಿಂದ ಹಾಳಾದ ಕಾಮಗಾರಿಗಳಿಗೆ ಈಗಾಗಲೇ ಪರಿಹಾರ ಬಂದಿದೆ. ಕಾಂಕ್ರಿಟ್ ರಸ್ತೆಗಳನ್ನು ಮಾಡಬಹುದು. ಮಳೆಯಲ್ಲಿ ರಸ್ತೆಗಳ ಕ್ವೀರಿಂಗ್ ಚೆನ್ನಾಗಿ ಆಗಿ ರಸ್ತೆಗಳು ಹಲವು ವರ್ಷ ಬಾಳಿಕೆ ಬರುತ್ತವೆ ಎಂದರು.