ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕರು ಸೈಕೋ ಎನ್ನುವುದು ಸೈದ್ಧಾಂತಿಕ ವಿಚಾರವೇ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಶಾಸಕರ ಬೆಂಬಲಿಗರನ್ನು ಪ್ರಶ್ನಿಸಿದರು.

ಅಭಿವೃದ್ಧಿ, ಆಡಳಿತದ ಬಗ್ಗೆ ಮಾತನಾಡಬೇಕೆನ್ನುವವರು ಶಾಸಕರೂ ಅದೇ ವಿಚಾರವಾಗಿ ಮಾತನಾಡಬೇಕಿತ್ತು. ಸೈಕೋ ಎಂದು ಹೇಳಿರುವುದು ವೈಯಕ್ತಿಕ ತೇಜೋವಧೆಯಲ್ಲದೆ ಮತ್ತೇನು. ಹಿರಿಯರ ಬಗ್ಗೆ ಮಾತನಾಡುವಾಗ ಗೌರವ ಕೊಟ್ಟು ಮಾತನಾಡುವುದನ್ನು ಶಾಸಕರು ಕಲಿಯಲಿ. ಇದೇ ಮೊದಲಬಾರಿಗೆ ಶಾಸಕರಾಗಿದ್ದಾರೆ. ಸ್ವಲ್ಪ ತಾಳ್ಮೆಯಿಂದ ಹೆಜ್ಜೆ ಇಡಲಿ. ದೊಡ್ಡವರ ಬಗ್ಗೆ ನಾಲಿಗೆಯನ್ನು ಹರಿಯಬಿಡದೆ ಹಿಡಿದಲ್ಲಿಟ್ಟುಕೊಂಡು ಮಾತನಾಡುವಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಗೆ ೧೦ ಸಾವಿರ ಕೋಟಿ ರು. ಹಣ ತಂದಿರುವುದಾಗಿ ಹೇಳುತ್ತಿರುವುದು ಸುಳ್ಳಲ್ಲವೇ. ೧೦ ಸಾವಿರ ಕೋಟಿ ರು. ಕಾಮಗಾರಿ ನಡೆದಿದ್ದರೆ ಜಿಲ್ಲೆ ಅಭಿವೃದ್ಧಿಯಲ್ಲಿ ಎಲ್ಲೋ ಇರುತ್ತಿತ್ತು. ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳನ್ನು ಮುಂದುವರೆಸುವ ಶಕ್ತಿ ಇಲ್ಲದೆ ಜನರಿಗೆ ಅಗತ್ಯವಿಲ್ಲದ ದಾಖಲೆಗಳನ್ನು ನೀಡುವಂತೆ ಹೇಳಿ ಅವರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಯಾರೂ ಸರ್ಕಾರವನ್ನು ಪ್ರಶ್ನಿಸದಂತೆ ಮಾಡುತ್ತಿರುವ ತಂತ್ರವಿದು ಎಂದು ಟೀಕಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮಾಸ್ ಲೀಡರ್. ಅವರಿಗೆ ಇಂಥದ್ದೇ ಕ್ಷೇತ್ರ ಅಭಿವೃದ್ಧಿಯಾಗಬೇಕು ಎನ್ನುವುದಕ್ಕಿಂತ ರಾಜ್ಯದ ಅಭಿವೃದ್ಧಿ, ನಾಡಿನ ನೆಲ-ಜಲ ಸಂರಕ್ಷಣೆ, ರೈತರ ಉದ್ಧಾರವೇ ಅವರ ಪ್ರಮುಖ ಧ್ಯೇಯವಾಗಿದೆ. ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಜನರ ಹಿತ ಕಾಪಾಡಲು ಲಾಟರಿ, ಸಾರಾಯಿ ನಿಷೇಧ, ರೈತರ ಸಾಲ ಮನ್ನಾ ಮಾಡಿದರು. ಗ್ರಾಮ ವಾಸ್ತವ್ಯವನ್ನು ಮೊದಲ ಬಾರಿಗೆ ರಾಜ್ಯಕ್ಕೆ ಪರಿಚಯಿಸಿ ಹಳ್ಳಿ ಜನರ ಕಷ್ಟಗಳನ್ನು ಆಲಿಸಿದರು. ಇವೆಲ್ಲಾ ನಿಮ್ಮಂಥವರ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.


ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣರವರಿಗೆ ಅನ್ಯಾಯ ಮಾಡಿದರು ಎಂದು ಹೇಳುವವರು ಎಸ್.ಎಂ.ಕೃಷ್ಣ ಅವರನ್ನು ರಾಜ್ಯಸಭೆಗೆ ಕಳುಹಿಸುವಾಗ ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ವಹಿಸಿದ ಪಾತ್ರದ ಬಗ್ಗೆ ಮಾತನಾಡುತ್ತಿಲ್ಲವೇಕೆ. ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗುವರೆಂಬ ಕಾರಣಕ್ಕೆ ಮಂಡ್ಯ, ಮದ್ದೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೇ ಹಾಕಿರಲಿಲ್ಲ. ಮುಖ್ಯಮಂತ್ರಿಯಾಗಲು ಪರೋಕ್ಷ ಸಹಕಾರ ನೀಡಿದರು. ಆ ಸಮಯದಲ್ಲಿ ಚಿಕ್ಕ ಹುಡುಗರಾಗಿದ್ದ ಶಾಸಕರಿಗೆ ಅದೆಲ್ಲಾ ಗೊತ್ತಾಗೋಲ್ಲ. ಅರ್ಥವೂ ಆಗೋಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ನಾಯಕರನ್ನು ಮೆಚ್ಚಿಸುವ ಸಲುವಾಗಿ ಏನೇನೋ ಮಾತನಾಡಬೇಡಿ. ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ ಎಚ್ಚರವಿರಲಿ. ಕುಮಾರಸ್ವಾಮಿ ವಿರುದ್ಧ ಆಡಿರುವ ಮಾತುಗಳಿಗೆ ಒಂದು ವಾರದೊಳಗೆ ಕ್ಷಮೆ ಕೇಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಬೂದನೂರು ಸ್ವಾಮಿ, ರಾಮಲಿಂಗಯ್ಯ, ಭಾನುಪ್ರಕಾಶ್, ಕಿರಣ್‌ಕುಮಾರ್, ಪ್ರತಾಪ್ ಇದ್ದರು.