ದಾಬಸ್‍ಪೇಟೆ: 300 ಮೀಟರ್ ಗ್ರಾಮಠಾಣಾ ನಿಗದಿಪಡಿಸಿ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಹಾಗೂ ಜಮೀನಿಂದ ಅರಣ್ಯ ಇಲಾಖೆ ಕೈ ಹಾಕಿರುವ ರೈತರ ಜಮೀನಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆ, ಕೆಐಎಡಿಬಿ ಅಧಿಕಾರಿಗಳ ಜತೆ ರೈತರ ಜಂಟಿ ಸಭೆ ಶೀಘ್ರ ನಡೆಸಲು ಸೂಚಿಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ತ್ಯಾಮಗೊಂಡ್ಲು ಹೋಬಳಿಯ ಬಳ್ಳಗೆರೆ-ಹುಲಿಕುಂಟೆ ಗ್ರಾಮದಲ್ಲಿ ಕ್ವಿನ್ ಸಿಟಿ-2ರ ಯೋಜನೆಗೆ ಕೆಐಎಡಿಬಿಯೂ ಭೂಸ್ವಾಧೀನಪಡಿಸಿಕೊಂಡಿರುವ 969.76 ಎಕರೆ ಜಮೀನಿಗೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅರಣ್ಯ ಇಲಾಖೆಯಿಂದ ತಕರಾರು:
ಸಭೆ ಆರಂಭದಲ್ಲೇ ರೈತ ಸಿದ್ದಣ್ಣ, ಡೇರಿ ಮಾಜಿ ಅಧ್ಯಕ್ಷ ಸಿದ್ದಗಂಗಯ್ಯ, ಸರ್ವೆ ನಂ.107/01ರಲ್ಲಿ 35 ರೈತರ ಜಮೀನು ತಲಾತಲಾಂತರದಿಂದ ಉಳಿಮೆ ಮಾಡಿಕೊಂಡು ದಾಖಲಾತಿ ಇದೆ. ಆದರೆ ಭೂಪರಿಹಾರ ಪಡೆಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಅರಣ್ಯ ಭೂಮಿ ಎಂದು ಹೇಳಿ ಆಕ್ಷೇಪಣೆ ಸಲ್ಲಿಸಿದ್ದರಿಂದ ಹಣ ಬಿಡುಗಡೆಯಾಗಿಲ್ಲ. ಇದು ಸುಳ್ಳು ಮಾಹಿತಿ, ಇದರಿಂದ ರೈತರು ಅತಂತ್ರವಾಗಿದ್ದಾರೆ. ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು. ಇದಕ್ಕೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ ಉತ್ತರಿಸಲೇಬೇಕು ಎಂದು ಸಭೆಯಲ್ಲಿ ಪಟ್ಟು ಹಿಡಿದಾಗ ಅಪರ ಜಿಲ್ಲಾಧಿಕಾರಿ, ಈ ವಿವಾದಿತ ಭೂಮಿ ಸಂಬಂಧ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ, ಕೆಐಎಡಿಬಿ ಅಧಿಕಾರಿಗಳು, ರೈತರ ಜಂಟಿ ಸಭೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಅಧಿಸೂಚನೆ 2006ರ ಹಿನ್ನೆಲೆಯಲ್ಲಿ ಸಭೆ ನಡೆಯುತ್ತಿದ್ದು, ನಮ್ಮ ಜಮೀನು ಬರಡು ಭೂಮಿಯಲ್ಲ, ನಾವು ಭೂಮಿ ಕೊಡುವುದಿಲ್ಲ ಎಂದು ಇಲಾಖೆಗೆ ಪತ್ರ ಬರೆದಿದ್ದರೂ ನಮ್ಮ ಜಮೀನುಗಳನ್ನು ಭೂಸ್ವಾಧೀನ ಮಾಡಿದ್ದೀರಾ, ಗ್ರಾಮಗಳಿಗೆ ಬೇಕಾದ ಗೋಕಟ್ಟೆ, ಮೈದಾನ, ಸ್ಮಶಾನಕ್ಕೆ ಜಾಗ ಮೀಸಲಿಡಬೇಕು, ಸರ್ಕಾರಗಳು ಈ ರೀತಿ ರೈತರ ಭೂಸ್ವಾಧೀನ ಮಾಡುತ್ತಲೇ ಇದ್ದರೆ ರೈತರು ಧಂಗೆ ಏಳುವ ಕಾಲ ದೂರವಾಗಿಲ್ಲ. ಬಟ್ಟೆಗೆ ಬಣ್ಣ ಹಾಕಿದ ಕಾರ್ಖಾನೆಗಳು ಬೆಂಗಳೂರಿನಲ್ಲಿ ಮುಚ್ಚಿದ್ದು, ನಮ್ಮಲ್ಲಿ ಪ್ರಾರಂಭವಾಗಲು ಸಜ್ಜಾಗುತ್ತಿವೆ. ನಮ್ಮ ಪರಿಸರದಲ್ಲಿ ಇಂತಹ ಕಾರ್ಖಾನೆ ಹಾನಿಕಾರಕವಾಗಿದ್ದು ನಿಷೇಧಿಸಬೇಕು ಎಂದರು.
ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಲೀಲಾವತಿ ಮಾತನಾಡಿ, ಈಗಾಗಲೇ ಹೇಮಾವತಿ ನೀರು ಮಾಗಡಿಯಿಂದ ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ಬರುತ್ತಿದೆ. ಈ ನೀರನ್ನೇ ಈ ಕ್ವಿನ್ ಸಿಟಿ ಯೋಜನೆಗೂ ಅಳವಡಿಸುತ್ತೇವೆ, ಪ್ರಾಥಮಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಎಷ್ಟು ಸರಿ ಎಂದಾಗ, ಸಭೆಯಲ್ಲಿ ಗದ್ದಲ ಉಂಟಾಯಿತು. ಕೂಡಲೆ ಅಧಿಕಾರಿಗಳು ನೀರಿನ ವಿತರಣೆಗೆ ಸೂಕ್ತ ಯೋಜನೆ ರೂಪಿಸುತ್ತೇವೆ ಎಂದರು.
ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ, ತಾಲೂಕು ಪರಿಸರ ಅಧಿಕಾರಿ ಪದ್ಮನಾಭ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್.ಎಂ, ಸಹಾಯಕ ಎಂಜಿನಿಯರ್ ಗಳಾದ ಪುನೀತ್, ಮೋನಿಕ, ಅನಿಲ್, ವಿನೋದ್, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಳ್ಳಗೆರೆ ಪ್ರಕಾಶ್, ರೈತ ಸಂಘದ ಮಂಜುನಾಥ್, ಜಗದೀಶ್, ಪಾಪಣ್ಣ, ಕುಮಾರಸ್ವಾಮಿ, ರಾಮಚಂದ್ರಯ್ಯ, ತ್ಯಾಮಗೊಂಡ್ಲು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚನ್ನೇಗೌಡ, ಪಿಎಸ್‌ಐಗಳಾದ ರಾಮಚಂದ್ರ, ದಿವ್ಯ ಇತರರು ಪಾಲ್ಗೊಂಡಿದ್ದರು.
ಕೋಟ್......................ರೈತರಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿರುವ ಕೊಳವೆ ಬಾವಿಗಳಿಗೆ ರಾಸಾಯನಿಕ ಹರಿಯದಂತೆ ಸಂಪೂರ್ಣ ಎಚ್ಚರಿಕೆ ವಹಿಸಬೇಕು. ಈ ಯೋಜನೆಯ ಪ್ರದೇಶದಲ್ಲಿ ಯಾವುದೇ ಕೊಳವೆಬಾವಿ ತೆರೆಯದಂತೆ ಕಠಿಣ ಆದೇಶ ಹೊರಡಿಸಲು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತೇನೆ. ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಅನುಪಯುಕ್ತ ಕೊಳವೆಬಾವಿ ಪರಿಶೀಲಿಸುತ್ತೇವೆ.
- ಸೈಯಿದಾ ಆಯಿಷಾ, ಅಪರ ಜಿಲ್ಲಾಧಿಕಾರಿ, ಬೆಂ.ಗ್ರಾ. ಜಿಲ್ಲೆಪೋಟೋ 4 :
ತ್ಯಾಮಗೊಂಡ್ಲು ಹೋಬಳಿಯ ಬಳ್ಳಗೆರೆ-ಹುಲಿಕುಂಟೆಯಲ್ಲಿ ಕ್ವೀನ್ ಸಿಟಿ-2ರ ಯೋಜನೆಗೆ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಮಾತನಾಡಿದರು.