ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗುರುವಾರ ತಡರಾತ್ರಿ ಪ್ರಕಟಿಸಿರುವ ನೀಟ್ ಮರು ಪರೀಕ್ಷಾ ಫಲಿತಾಂಶ ಬಗ್ಗೆ ಹಲವು ವಿದ್ಯಾರ್ಥಿಗಳು ಅತೃಪ್ತರಾಗಿದ್ದಾರೆ. ಕಾರಣ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದುಗೊಂಡ ಮೊದಲ ಪರೀಕ್ಷೆಯ ಕೀ ಉತ್ತರಗಳಲ್ಲೇ ತಮಗೆ ಹೆಚ್ಚು ಅಂಕಗಳು ಖಾತರಿಯಾಗಿತ್ತು ಎಂದು ಹೇಳಿದ್ದಾರೆ.
ವೈಷ್ಣವಿ ದಾಸ್ ಮರು ಪರೀಕ್ಷೆಯಲ್ಲಿ 720ಕ್ಕೆ 700 ಅಂಕ
ಬೆಂಗಳೂರಿನ ಜೆಪಿ ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆ ವಿದ್ಯಾರ್ಥಿನಿ ವೈಷ್ಣವಿ ದಾಸ್ ಮರು ಪರೀಕ್ಷೆಯಲ್ಲಿ 720ಕ್ಕೆ 700 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 20ನೇ ರ್‍ಯಾಂಕ್ ಗಳಿಸಿದ್ದಾರೆ. ಆದರೆ, ಈ ಫಲಿತಾಂಶದಲ್ಲಿ ಮೂಲ ನೀಟ್ ಪರೀಕ್ಷೆಯ ಕೀ ಉತ್ತರಗಳಿಗಿಂತ 10 ಅಂಕಗಳು ಕಡಿಮೆಯಾಗಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನೀಟ್ ಮೂಲ ಪರೀಕ್ಷೆ ಬಳಿಕ ಬಿಡುಗಡೆಯಾಗಿದ್ದ ಕೀ ಉತ್ತರಗಳ ಪ್ರಕಾರ ವೈಷ್ಣವಿ 710 ಅಂಕಗಳನ್ನು ನಿರೀಕ್ಷಿಸಿದ್ದರು.
ದಾವಣಗೆರೆಯ ಶ್ರೀ ಚೈತನ್ಯ ಟೆಕ್ನೋ ಶಾಲೆ ಮತ್ತೊಬ್ಬ ವಿದ್ಯಾರ್ಥಿನಿ ಸುಚಿತಾ ಎಂ 695 ಅಂಕಗಳನ್ನು ಗಳಿಸಿ ಅಖಿಲ ಭಾರತಮಟ್ಟದಲ್ಲಿ 48ನೇ ರ್‍ಯಾಂಕ್ ಪಡೆದು ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಸುಚಿತಾ ಮೂಲ ನೀಟ್ ಪರೀಕ್ಷೆಯ ಕೀ ಉತ್ತರಗಳಲ್ಲಿ 720 ರಲ್ಲಿ 720 ಅಂಕಗಳನ್ನು ಪಡೆದಿದ್ದರು. ಆದರೆ ಮರು ಪರೀಕ್ಷೆಯಲ್ಲಿ ಅವರ ಅಂಕಗಳು 25ರಷ್ಟು ಕಡಿಮೆಯಾಗಿದೆ.
ಅಸಮಾಧಾನ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು
ಅಸಮಾಧಾನ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಮೂಲ ನೀಟ್ ಪರೀಕ್ಷೆಗೆ ಹೋಲಿಸಿದರೆ ಮರು ಪರೀಕ್ಷೆ ಕಠಿಣವಾಗಿದ್ದರಿಂದ ಅಂಕಗಳು ಕಡಿಮೆಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಮರು ಪರೀಕ್ಷೆಯಲ್ಲಿ 25 ಅಂಕಗಳ ನಷ್ಟದಿಂದ ನನಗೆ ತೀವ್ರ ಬೇಸರವಾಗಿದೆ. ನಾನು ರಾಜ್ಯಕ್ಕೆ ಎರಡನೇ ಟಾಪರ್ ಆಗಿರುವ ಸಂತೋಷದ ನಡುವೆಯೂ, ಮರು ಪರೀಕ್ಷೆಯಿಂದ 25 ಅಂಕಗಳನ್ನು ಕಳೆದುಕೊಂಡಿರುವುದು ನನಗೆ ಮತ್ತು ನನ್ನ ಪೋಷಕರಿಗೆ ಆಶ್ಚರ್ಯವನ್ನುಂಟುಮಾಡಿದೆ ಎಂದು ಸುಚಿತಾ ಹೇಳಿದರು.
ರಾಜ್ಯಕ್ಕೆ ಟಾಪರ್‌ಗಳಾಗಿರುವ ಇತರ ಕೆಲ ವಿದ್ಯಾರ್ಥಿಗಳಾದ ರವಿಕಿರಣ್ ಕಿಣಿ ಅವರದ್ದು ಅಖಿಲ ಭಾರತ ರ್‍ಯಾಂಕ್ 62, ಜೋಹಾನ್ ಜಾಬ್ 69, ದಿಗಂತ್ ಬಿ.ಎಸ್ ಅಖಿಲ ಭಾರತ ಮಟ್ಟದ 64ನೇ ರ್‍ಯಾಂಕ್, ಶ್ರೇಯಾಂಕ್ ಜೆ 94ನೇ ರ್‍ಯಾಂಕ್ ಗಳಿಸಿದ್ದಾರೆ.
