ವನ್ಯಜೀವಿ ಕಾರಿಡಾರ್‌ ಸಂರಕ್ಷಣೆಗೆ ಸಂಬಂಧಿಸಿ ರೂಪಿಸಿರುವ ನೀತಿಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಬಿಶ್ವಜಿತ್ ಮಿಶ್ರಾ ಅಭಿಪ್ರಾಯಪಟ್ಟರು.

ಬೆಂಗಳೂರು : ವನ್ಯಜೀವಿ ಕಾರಿಡಾರ್‌ ಸಂರಕ್ಷಣೆಗೆ ಸಂಬಂಧಿಸಿ ರೂಪಿಸಿರುವ ನೀತಿಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಬಿಶ್ವಜಿತ್ ಮಿಶ್ರಾ ಅಭಿಪ್ರಾಯಪಟ್ಟರು.

ಚರ್ಚ್‌ಸ್ಟ್ರೀಟ್‌ನ ಸಮಗತ ಫೌಂಡೇಷನ್‌ನಲ್ಲಿ ಆಯೋಜಿಸಿದ್ದ ವನ್ಯಜೀವಿ ತಜ್ಞರಾದ ಸಂಜಯ್‌ ಗುಬ್ಬಿ, ರಶ್ಮಿ ಹೆದ್ದೂರಿ ಮತ್ತಿತರರು ರಚಿಸಿರುವ ‘ದಿ ಲಾಸ್ಟ್ ಪಾಥ್‌ವೇ: ವೈಲ್ಡ್‌ ಲೈಫ್‌ ಕಾರಿಡಾರ್ಸ್ ಆಫ್ ಕರ್ನಾಟಕ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ವನ್ಯಜೀವಿ ಕಾರಿಡಾರ್ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಮೂರು ವರ್ಷದ ಹಿಂದೆ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ನೀತಿಯೊಂದನ್ನು ರೂಪಿಸಿದ್ದು ಶೀಘ್ರದಲ್ಲೇ ಸರ್ಕಾರ ಇದಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ವನ್ಯಜೀವಿ ಕಾರಿಡಾರ್‌ ಸಂರಕ್ಷಣೆಗೆ ಒತ್ತು ನೀಡಿದಂತಾಗುತ್ತದೆ. ಪ್ರಾಣಿಗಳ ಸಂಚಾರಕ್ಕೆ ಇರುವ ಅಡೆತಡೆಯೂ ನಿವಾರಣೆಯಾಗುತ್ತದೆ ಎಂದು ಆಶಿಸಿದರು.

ಕಾರಿಡಾರ್‌ಗಳ ಸಮಗ್ರ ಚಿತ್ರಣ:

ರಾಜ್ಯದಲ್ಲಿ ವನ್ಯಜೀವಿ ಕಾರಿಡಾರ್‌ ವಿಭಿನ್ನವಾಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ, ಖಾಸಗಿ, ಜಂಟಿ ಮಾಲೀಕತ್ವದ ಭೂಮಿಯಲ್ಲೂ ವನ್ಯಜೀವಿ ಕಾರಿಡಾರ್‌ ಇವೆ. ಆಹಾರ ಅರಸಿ ಹೋಗುವುದು, ಸಂತಾನೋತ್ಪತ್ತಿ, ಸುಗಮ ತಿರುಗಾಟಕ್ಕಾಗಿ ಕಾರಿಡಾರ್‌ಗಳು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಈ ಕೃತಿಯು ಕಾರಿಡಾರ್‌ಗಳ ಬಗ್ಗೆ ಸಮಗ್ರ ಚಿತ್ರಣ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಮಾತನಾಡಿ, ಬಾಂಗ್ಲಾದೇಶ ಸೇರಿ ಹಲವೆಡೆ ಪ್ರಾಣಿಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಅಲ್ಲಿನ ಸರ್ಕಾರಗಳ ಜೊತೆ ಕೆಲಸ ಮಾಡಿದ್ದೇನೆ. ನಾನು ಕನ್ನಡಿಗನಾಗಿದ್ದು, ಕರ್ನಾಟಕದಲ್ಲೇ ನೆಲೆಸಲು ಇಚ್ಛಿಸುತ್ತೇನೆ. ಇಂದು ವನ್ಯಜೀವಿಗಳು ಮಾತ್ರವಲ್ಲ, ಹಲವು ಅಪರೂಪದ ಸಸ್ಯಗಳೂ ಅಪಾಯದಲ್ಲಿವೆ. ಅವುಗಳನ್ನು ಕಾಪಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಕರೆ ನೀಡಿದರು.

46 ವನ್ಯಜೀವಿ ಕಾರಿಡಾರ್‌:

ರಾಜ್ಯದಲ್ಲಿ ಒಟ್ಟು 46 ವನ್ಯಜೀವಿ ಕಾರಿಡಾರ್‌ಗಳಿವೆ. ಇದರಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಶೇ.72 ರಷ್ಟು, ಖಾಸಗಿ ಒಡೆತನದಲ್ಲಿ ಶೇ.11ರಷ್ಟಿವೆ. ಇನ್ನುಳಿದ ಕಾರಿಡಾರ್‌ ಪ್ರದೇಶ ಅರಣ್ಯ, ಕಂದಾಯ ಇಲಾಖೆ ಸೇರಿ ಮಿಶ್ರ ಒಡೆತನದಲ್ಲಿದೆ. ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಖಾಸಗಿ ಭೂಮಿಯಲ್ಲಿ ವನ್ಯಜೀವಿಗಳ ಅದರಲ್ಲೂ ಆನೆಗಳ ಸಂಚಾರ ಹೆಚ್ಚಾಗಿದ್ದು, ಸಂರಕ್ಷಣಾ ಕಾರ್ಯ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್ ಮಾತನಾಡಿ, ಅರಣ್ಯ ಇಲಾಖೆ ಮತ್ತು ಸ್ವಯಂಸೇವಾ ಸಂಸ್ಥೆ(ಎನ್‌ಜಿಓ)ಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಎನ್‌ಜಿಓಗಳು ಅರಣ್ಯದಲ್ಲಿರುವ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಇವುಗಳನ್ನು ಅನುಮಾನದಿಂದ ನೋಡಬಾರದು. ಎನ್‌ಜಿಓಗಳು ಕಾಡಿನಲ್ಲಿರುವ ಜನರಿಗೆ ವನ್ಯಜೀವಿಗಳ ಜೀವನಕ್ರಮಕ್ಕೆ ಅಡ್ಡಿಯಾಗುವ ಉಪಕರಣಗಳನ್ನು ನೀಡುವುದೂ ಸರಿಯಲ್ಲ ಎಂದು ವಿವರಿಸಿದರು.

ಬಿಡಿಎ ಆಯುಕ್ತ ಪಿ.ಮಣಿವಣ್ಣನ್, ನಟಿ ಸಂಯುಕ್ತಾ ಹೊರನಾಡು ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.