ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಂತರ ಉಪವಿಭಾಗಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ದರು.

ಕನ್ನಡಪ್ರಭವಾರ್ತೆ ತಿಪಟೂರು

ಹಲವು ದಶಕಗಳಿಂದ ಸರ್ಕಾರಿ ಹಾಗೂ ಅರಣ್ಯದಂಚಿನ ಭೂಮಿಯನ್ನು ಹಸನು ಮಾಡಿ ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಿಕೊಂಡಿರುವ ರೈತರು ತಮ್ಮ ಭೂ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಭೂಮಿಗೆ ಬೆಲೆಯಿಲ್ಲದ ಸ್ಥಿತಿಯಲ್ಲಿದ್ದಾಗ ಯಾರು ಸಹ ಕೇಳಲಿಲ್ಲ. ಆದರೆ ಈಗ ಭೂಮಿಯ ಬೆಲೆ ದುಪ್ಪಟ್ಟವಾಗಿರುವುದರಿಂದ ರೈತರ ಮೇಲೆ ದೌರ್ಜನ್ಯ ಎಸುಗುತ್ತಿರುವ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೆ.ಟಿ.ಗಂಗಾಧರ್ ತಿಳಿಸಿದರು.

ಬಗರ್‌ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತಸಂಘ, ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ಹೋರಾಟ ಸಮಿತಿ, ಬಗರ್‌ಹುಕುಂ ಹೋರಾಟ ಸಮಿತಿ, ಬೆಲೆ ಕಾವಲು ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಂತರ ಉಪವಿಭಾಗಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು.

ಕಿಬ್ಬನಹಳ್ಳಿ ಹೋಬಳಿಯ ಕಾಗೇಹಳ್ಳ ಕಾವಲು, ಹಾಲ್ಕುರಿಕೆಯ ಅಮೃತಮಹಲ್ ಕಾವಲು, ರುದ್ರಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸರ್ಕಾರವೇ ೧೯೬೦-೭೦ರ ಅವಧಿಯಲ್ಲಿ ಮಾಜಿ ಸೈನಿಕರಿಗೆ ಭೂಮಿಯನ್ನು ಮಂಜೂರು ಮಾಡಿದೆ. ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅನಗತ್ಯ ನೋಟಿಸ್‌ಗಳನ್ನು ಜಾರಿ ಮಾಡುತ್ತಿರುವುದು ದೌರ್ಜನ್ಯವಾಗಿದ್ದ ಶೀಘ್ರದಲ್ಲಿಯೇ ರೈತರ ಜಮೀನಿಗಳ ದುರಸ್ಥಿಕಾರ್ಯ ನಡೆಯಬೇಕು ತಪ್ಪಿದಲ್ಲಿ ಮುಂದಿನ ದಿನದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ ಈರಲಗೆರೆ, ಆದಿನಾಯಕನಹಳ್ಳಿ, ಅಣ್ಣೇಮಾರನಹಳ್ಳಿ, ಹಾಲ್ಕುರಿಕೆ, ಹಾಲೇನಹಳ್ಳಿ, ಕೊಡಿಗೆಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಖಾತೆ, ಪಹಣಿ, ಸಾಗುವಳಿ ಚೀಟಿ, ಮಂಜೂರಾತಿ ಹಾಗೂ ಖರೀದಿ ಪತ್ರಗಳನ್ನು ಹೊಂದಿದ್ದರೂ, ಇಲಾಖೆಯೂ ಅವುಗಳನ್ನು ಪರಿಗಣಿಸುತ್ತಿಲ್ಲ. ಅರಣ್ಯ ಇಲಾಖೆಯು ರೈತರ ವಿರುದ್ಧ ವ್ಯಾಜ್ಯಗಳನ್ನು ದಾಖಲಿಸಿ, ಕೋರ್ಟ್ ಹಾಗೂ ಕಚೇರಿಗಳ ಸುತ್ತ ಅಲೆದಾಡುವಂತೆ ಮಾಡುತ್ತಿದೆ. ರೈತರ ಪರ ದಾಖಲೆಗಳಿದ್ದರೂ, ರಾಜರ ಕಾಲದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಅರಣ್ಯ ಇಲಾಖೆಯು ತನ್ನ ಹಕ್ಕು ಪ್ರತಿಪಾದಿಸುತ್ತಿದೆ ಎಂದರು. ಹೋರಾಟಗಾರ ಪ್ರೊ. ಜಯಾನಂದಯ್ಯ ಮಾತನಾಡಿ ಹೊನ್ನವಳ್ಳಿ ಹೋಬಳಿಯ ರುದ್ರಾಪುರ ಸರ್ವೆ ನಂ.೧೧೪ರಲ್ಲಿ ೧೧ ರೈತ ಕುಟುಂಬಗಳ ಪಹಣಿ ದಾಖಲೆಗಳನ್ನು ಅಳಿಸಿ ಹಾಕಲಾಗಿರುವುದರಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಸರ್ಕಾರ ಸರಿಯಾದ ಕ್ರಮವಲ್ಲವಾದ್ದರಿಂದ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಸುಬ್ರಹ್ಮಣ್ಯ, ರೈತ ಸಂಘದ ಮುಖಂಡ ತೀಮ್ಲಾಲಾಪುರ ದೇವರಾಜು, ಸಿದ್ದಯ್ಯ ಬಳವನೇರಲು, ಅಲ್ಲಾಬಕಾಷ್, ಶ್ರೀಕಾಂತ್ ಕೆಳಹಟ್ಟಿ, ನಾಗೇಶ್ ಬಿಳಿಗೆರೆಪಾಳ್ಯ, ಈರಲಗೆರೆ, ಅಣ್ಣಾಮಾರನಹಳ್ಳಿ, ರುದ್ರಾಪುರ, ಬಳವನೇರಲು, ಶಿಡ್ಲೇಹಳ್ಳಿ, ಜಕ್ಕನಹಳ್ಳಿ, ಚೌಡ್ಲಾಪುರ, ಹಾಲ್ಕುರಿಕೆ, ತೀಮ್ಲಾಪುರ, ಗೋಪಾಲನಹಳ್ಳಿ, ಹೊನ್ನವಳ್ಳಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.ಈರಲೆಗೆರೆ ಗ್ರಾಮದಿಂದಉಪವಿಭಾಗಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ

ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಈರಲೆಗೆರೆ ಗ್ರಾಮದಿಂದ ಆರಂಭವಾದ ಜಾಥಾ ಹದಿನೈದಕ್ಕೂ ಹೆಚ್ಚು ಗ್ರಾಮದ ನೂರಾರು ರೈತರು, ಮುಂಖಡರು ೧೩ಕಿಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ತಾಲೂಕು ಆಡಳಿತ ಸೌಧದವರೆಗೆ ಸಾಗಿ, ಬೃಹತ್ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆಯ ಕ್ರಮಗಳನ್ನು ಖಂಡಿಸಿ, ರೈತರ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. ರೈತ ಸಂಘಟನೆಗಳು ಅರಣ್ಯ ಇಲಾಖೆ ರೈತರಿಗೆ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು. ಸಾಗುವಳಿ ಮಾಡುತ್ತಿರುವ ರೈತರ ಭೂ ಹಕ್ಕುಗಳನ್ನು ಕಾನೂನುಬದ್ಧವಾಗಿ ಮಾನ್ಯಗೊಳಿಸಬೇಕು. ರುದ್ರಾಪುರ ಸರ್ವೆ ನಂ.೧೧೪ಕ್ಕೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳ ಆದೇಶವನ್ನು ವಾಪಸ್ ಪಡೆಯಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಶಾಶ್ವತ ಹಕ್ಕುಪತ್ರ ನೀಡಬೇಕು. ಪ್ರಕೃತಿ ವಿಕೋಪದಿಂದ ಬೆಳೆಹಾನಿಗೊಳಗಾದ ರೈತರಿಗೆ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ಒದಗಿಸಬೇಕೆಂದು ಹಕ್ಕೋತ್ತಾಯ ಮಾಡಲಾಯಿತು.