ಹುನಗುಂದ-ಇಳಕಲ್ಲ ಅವಳಿ ತಾಲೂಕಿನ ಶಾಲೆಗಳು ಆರಂಭವಾಗಿ 3 ತಿಂಗಳಾದರೂ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇದುವರೆಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡಿಲ್ಲ. ಇದರಿಂದಾಗಿ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿಂದಿನ ವರ್ಷದ ಹರಿದ ಶೂ, ಚಪ್ಪಲಿ ಧರಿಸಿ ಅಥವಾ ಬರಿಗಾಲಿನ ಶಾಲೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹುನಗುಂದ : ಹುನಗುಂದ-ಇಳಕಲ್ಲ ಅವಳಿ ತಾಲೂಕಿನ ಶಾಲೆಗಳು ಆರಂಭವಾಗಿ 3 ತಿಂಗಳಾದರೂ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇದುವರೆಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡಿಲ್ಲ. ಇದರಿಂದಾಗಿ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿಂದಿನ ವರ್ಷದ ಹರಿದ ಶೂ, ಚಪ್ಪಲಿ ಧರಿಸಿ ಅಥವಾ ಬರಿಗಾಲಿನ ಶಾಲೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹುನಗುಂದ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಪಕ್ಕದ ಗುರುಭವನವು ಶೂ ಮತ್ತು ಸಾಕ್ಸ್‌ಗಳ ಉಗ್ರಾಣವಾಗಿ ಪರಿವರ್ತನೆಯಾಗಿದ್ದು, ಶೂ ಮತ್ತು ಸಾಕ್ಸ್‌ಗಳು ವಿಳಂಬವಾಗಿ ಇದುವರೆಗೂ ವಿತರಣೆಯಾಗದಿರುವುದು ಕಂಡುಬಂದಿದೆ. ಜೂ.1ರಿಂದ ಶಾಲೆ ಶುರುವಾದ ಕೆಲವೇ ದಿನಗಳಲ್ಲಿ ಶೂ ಮತ್ತು ಸಾಕ್ಸ್ ಎರಡನ್ನೂ ವಿತರಿಸುತ್ತೇವೆ ಎಂದು ಶಿಕ್ಷಕರು ಪೋಷಕರಿಗೆ ಹೇಳಿಕೊಂಡು ಬಂದಿದ್ದರು. ಆದರೆ, 2-3 ತಿಂಗಳಾದರೂ ಬಾರದ್ದರಿಂದ ಇದೀಗ ಪೋಷಕರಿಗೆ ಉತ್ತರಿಸಲಾಗದ ಸ್ಥಿತಿ ಶಿಕ್ಷಕರದ್ದಾಗಿದೆ.
ಹಿಂದೆ ಪ್ರತಿ ಶಾಲೆಯಲ್ಲಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹೆಗಲಿಗೆ ಶೂ ಮತ್ತು ಸಾಕ್ಸ್ ವಿತರಣೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಅವುಗಳ ಖರೀದಿಗೆ ಸಂಬಂಧಿಸಿದಂತೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ನಡುವಣ ಭಿನ್ನಾಭಿಪ್ರಾಯ, ಭ್ರಷ್ಟಾಚಾರ ಸೇರಿ ವಿವಿಧ ರೀತಿಯ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ, ಇಲಾಖೆಯೇ ಈಗ ಜವಾಬ್ದಾರಿ ವಹಿಸಿಕೊಂಡಿದೆ.
1 ಜತೆ ಶೂ, 2 ಜತೆ ಸಾಕ್ಸ್:
ಸರ್ಕಾರ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಜತೆ ಶೂ ಹಾಗೂ 2 ಜತೆ ಸಾಕ್ಸ್‌ಗಳನ್ನು ನೀಡುತ್ತಾ ಬಂದಿದೆ. ಅದರಂತೆ, ಹುನಗುಂದ-ಇಳಕಲ್ಲ ತಾಲೂಕಿನಲ್ಲಿ 24,574 ಸಾವಿರ ವಿದ್ಯಾರ್ಥಿಗಳಿಗೆ ತಲಾ ಒಂದು ಜತೆ ಶೂ 2 ಜತೆ ಸಾಕ್ಸ್ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಎಸ್‌ಡಿಎಂಸಿ ಬದಲಿಗೆ ಇಲಾಖೆಯೇ ಶೂ ಮತ್ತು ಸಾಕ್ಸ್ ವಿತರಿಸುತ್ತದೆ. ಅದಕ್ಕಾಗಿ ಕೇಂದ್ರೀಕೃತ ಟೆಂಡರ್ ಕರೆದಿದೆ. ಹಿಂದೆ ಮುಖ್ಯಶಿಕ್ಷಕರು ಎಸ್‌ಡಿಎಂಸಿಯವರೇ ಟೆಂಡರ್ ಕರೆದು ಮಕ್ಕಳಿಗೆ ವಿತರಿಸುತ್ತಿದ್ದರು. ಈ ಸಲ ಇಲಾಖೆಯೇ ವಹಿಸಿಕೊಂಡಿರುವುದರಿಂದ ಇಲಾಖೆಯೂ ಬ್ಲಾಕ್‌ವಾರು ಮಕ್ಕಳ ಶೂ ಅಳತೆಯ ಮಾಹಿತಿಯನ್ನು ಕಳಿಸಿಕೊಟ್ಟಿದೆ. ಅದರಂತೆ ಅವರು ಶೂ ಮತ್ತು ಸಾಕ್ಸ್‌ಗಳನ್ನು ಕಳಿಸಿ ಕೊಡಲಿದ್ದಾರೆ.
ಬರಿಗಾಲಲ್ಲಿ ಬರುತ್ತಿರುವ ಮಕ್ಕಳು
ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ. ಆದರೆ, ಸೂಕ್ತ ಸಮಯಕ್ಕೆ ಸಿಗುವುದಿಲ್ಲ ಎಂಬುವುದು ಜನಜನಿತ. ಅದೇ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಬದಲು, ಸಾಲ ಮಾಡಿಯಾದರೂ ಡೊನೇಷನ್ ಕಟ್ಟಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಹುನಗುಂದ -ಇಳಕಲ್ಲ ತಾಲೂಕು ಸೇರಿ ಗ್ರಾಮೀಣ ಭಾಗದ ಹಲವು ಸರ್ಕಾರಿ ಶಾಲೆಗಳ ಮಕ್ಕಳು ಗ್ರಾಮೀಣ ಭಾಗದ ಹಲವು ಸರ್ಕಾರಿ ಶಾಲೆಗಳ ಮಕ್ಕಳು ಇಂದಿಗೂ ಶೂ ಇಲ್ಲದೆ ಬರಿಗಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಶಿಕ್ಷಣ ಇಲಾಖೆಯು ಸೌಲಭ್ಯಗಳ ವಿತರಣೆಯಲ್ಲಿ ವಿಳಂಬ ಮಾಡದೆ ಸಕಾಲದಲ್ಲಿ ನೀಡಬೇಕೆಂದು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.
ಹುನಗುಂದ ತಾಲೂಕಿನಲ್ಲಿ ಇರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ಗಳು ಬಂದಿದ್ದು, ವಿತರಣೆ ಮಾಡಲಾಗುತ್ತಿದೆ. ಇನ್ನೂ ತಲುಪದವರಿಗೆ ಎರಡು ದಿನದೊಳಗೆ ಕೈ ಸೇರಲಿದೆ.
- ಮಹಾಂತೇಶ ಮೂಲಿಮನಿ, ಶಿಕ್ಷಣ ಸಂಯೋಜಕ ಹುನಗುಂದ
ಶೂ ಮತ್ತು ಸಾಕ್ಸ ವಿತರಣೆಯ ವಿಳಂಬದ ಕಾರಣ ಕುರಿತು ಬಿಇಒ ಜಾಸ್ಮೀನ ಕಿಲ್ಲೇದಾರ ಅವರಿಗೆ ಪತ್ರಿಕೆಯ ಪತ್ರಿನಿಧಿ ಫೋನ್ ಮೂಲಕ ಕರೆ ಮಾಡಿದರೂ ಫೋನ್ ಕರೆ ಸ್ವೀಕರಿಸದೇ ಅಧಿಕಾರಿಯ ದಿವ್ಯ ನಿರ್ಲಕ್ಷ್ಯ ಕಂಡು ಬಂದಿತು.
