ಗದಗ: ಸರ್ಕಾರ ಶಿಕ್ಷಣ ತಜ್ಞರನ್ನು, ಶಿಕ್ಷಕರನ್ನು ವಿಶ್ವಾಸಕ್ಕೆ ಪಡೆಯದೇ ಕೈಗೊಳ್ಳುವ ಅವೈಜ್ಞಾನಿಕ ನಿರ್ಧಾರಗಳಿಂದ ಸರ್ಕಾರಿ ಶಾಲೆಗಳು ದಿನೇ ದಿನೇ ದುರ್ಬಲವಾಗುತ್ತಿವೆ ಎಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.

ನಗರದ ಕನಕ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಗದಗ ಗ್ರಾಮೀಣ ಶಿಕ್ಷಕ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಧನ್ಯತಾ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ನಲಿಕಲಿ ಯೋಜನೆಯನ್ನು ನಾವು ಬಯಸಿರಲಿಲ್ಲ. ಬೇಡ ಎಂದೆವು, ತಂದರು. ಈಗ ತೆಗೆಯುತ್ತಿದ್ದಾರೆ. 10 ವರ್ಷದ ಹಿಂದೆಯೇ ನಮಗೆ ಜ್ಞಾನೋದಯವಾಗಿತ್ತು. ಸರ್ಕಾರಕ್ಕೆ ಈಗ ಆಗಿದೆ. ಈಗ ಮತ್ತೆ ಕ್ಯಾಂಪ್ಸ್ ಮತ್ತು ವಿದ್ಯಾರ್ಥಿಗಳ ನಿರಂತರ ಹಾಜರಾತಿ(ವೆಬ್ ಕಾಸ್ಟ್ ಅಟೆಂಡೆನ್ಸ್) ತಂದಿದ್ದಾರೆ. ಇದರಿಂದ ಗುಣಾತ್ಮಕ ಕಲಿಕೆಗೆ ಏನು ಉಪಯೋಗ? ಇದು ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ಹುನ್ನಾರ ಎಂದರು.

ಶಾಲೆಗಳಲ್ಲಿ ವಿಷಯವಾರು ಶಿಕ್ಷಕರಿಲ್ಲ. ಪ್ರತಿ ವರ್ಗಕ್ಕೊಬ್ಬ ಶಿಕ್ಷಕರಿಲ್ಲ, ಎಲ್ಲ ಶಾಲೆಗೂ ಮುಖ್ಯ ಶಿಕ್ಷಕರಿಲ್ಲ. ಪಿಯು, ಕ್ಲರ್ಕ್ ಇಲ್ಲ. ಆದರೆ ಕೆಲಸಗಳು ಜಾಸ್ತಿ. ಬೆಳಗ್ಗೆ, ಮಧ್ಯಾಹ್ನ ಹಾಜರಿ ಹಾಕುವುದರಲ್ಲೇ ಒಂದೂವರೆ ತಾಸು ಹೋಗುತ್ತದೆ. ಇದರ ನಡುವೆ ಕ್ಯಾಂಪ್ಸ್‌ಗೆ ₹15 ಕೋಟಿ ಖರ್ಚು ಮಾಡುವ ಬದಲು ಆ ಹಣವನ್ನು ಸರ್ಕಾರಿ ಶಾಲೆಗಳಿಗೆ ನೀಡಿ ಒಬ್ಬ ಕಂಪ್ಯೂಟರ್ ಆಪರೇಟರ್ ನೇಮಿಸಿದ್ದರೆ ನಮಗೆ ಅನುಕೂಲವಾಗುತ್ತಿತ್ತು. ನಮ್ಮ ಮೇಲೆ ಸಂಶಯವಿದ್ದರೆ ಮೇಲ್ವಿಚಾರಣೆಗೆ ಡಯಟ್, ಡಿಡಿಪಿಐ, ಸಿಆರ್‌ಪಿ, ಬಿಆರ್‌ಪಿ, ಎಸ್‌ಡಿಎಂಸಿಯವರು ಇದ್ದಾರೆ. ಆದರೂ ಈ ಕ್ಯಾಂಪ್ಸ್ ಯಾಕೆ? ಇದು ಕಲಿಕೆಗೆ ಪೂರಕವಾಗಿದ್ದರೆ ಮಾಡಲಿ, ಇಲ್ಲದಿದ್ದರೆ ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಎನ್‌ಸಿಟಿಇ ಆದೇಶದಂತೆ ಹಾಲಿ ಸೇವಾನಿರತ ಶಿಕ್ಷಕರು ಕಡ್ಡಾಯವಾಗಿ(ಟೀಚರ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ನಿಯಮವನ್ನು ಹಿಂಪಡೆಯಬೇಕು. ದೇಶಾದ್ಯಂತ ಸೇವಾನಿರತ ಶಿಕ್ಷಕರು ಕಡ್ಡಾಯವಾಗಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇಲ್ಲವಾದಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವ ಸಾಧ್ಯತೆಯಿರುವ ಆದೇಶದಿಂದ ಸುಮಾರು 30 ಲಕ್ಷ ಶಿಕ್ಷಕರ ಉದ್ಯೋಗ ಭದ್ರತೆಗೆ ಧಕ್ಕೆಯಾಗುವ ಆತಂಕವಿದೆ ಎಂದರು.


ವಿ.ಎಂ. ಹಿರೇಮಠ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಹಿಳಾ ಘಟಕದ ಸಹ ಕಾರ್ಯದರ್ಶಿ ಪ್ರಮೀಳಾ ಕಾಮನಹಳ್ಳಿ ಮಾತನಾಡಿದರು.

ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಡಿಡಿಪಿಐ ಆರ್.ಎಸ್. ಬುರಡಿ, ಬಿಇಒ ವಿ.ವಿ. ನಡುವಿನಮನಿ, ಡಯಟ್ ಪ್ರಾ. ಕೆ.ಡಿ. ಬಡಿಗೇರ, ಅಕ್ಷರ ದಾಸೋಹ ಅಧಿಕಾರಿ ಶಂಕರ ಹಡಗಲಿ, ಶಿವಯೋಗಿ ಬಂಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕ ಸಂಘದ ಪದಾಧಿಕಾರಿಗಳು ಇದ್ದರು. ಸಮಾರಂಭದಲ್ಲಿ ಶಿಕ್ಷಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸನ್ಮಾನ ಜರುಗಿತು.