ರಾಜ್ಯದಲ್ಲಿ ಮಳೆಗಾಲದಲ್ಲಿಯೇ ವಿದ್ಯುತ್ ಉತ್ಪಾದನೆ ತಗ್ಗಿರುವುದರ ಜತೆಗೆ ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳವಾಗಿರುವುದರಿಂದ ವಿದ್ಯುತ್ ಅಭಾವ ಉಂಟಾಗಿದೆ. ಹೀಗಾಗಿ, ರಾಜ್ಯದ ರೈತರ ಪಂಪ್‌ಸೆಟ್‌ಗಳಿಗೆ ಇದುವರೆಗೂ ದಿನಕ್ಕೆ ನೀಡುತ್ತಿದ್ದ ಏಳು ಗಂಟೆ ಬದಲು 6 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ.

 ಸೋಮರಡ್ಡಿ ಅಳವಂಡಿ

ಕೊಪ್ಪಳ: ರಾಜ್ಯದಲ್ಲಿ ಮಳೆಗಾಲದಲ್ಲಿಯೇ ವಿದ್ಯುತ್ ಉತ್ಪಾದನೆ ತಗ್ಗಿರುವುದರ ಜತೆಗೆ ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳವಾಗಿರುವುದರಿಂದ ವಿದ್ಯುತ್ ಅಭಾವ ಉಂಟಾಗಿದೆ. ಹೀಗಾಗಿ, ರಾಜ್ಯದ ರೈತರ ಪಂಪ್‌ಸೆಟ್‌ಗಳಿಗೆ ಇದುವರೆಗೂ ದಿನಕ್ಕೆ ನೀಡುತ್ತಿದ್ದ ಏಳು ಗಂಟೆ ಬದಲು 6 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದಾಗಿ, ಭೀಕರ ಬರದಿಂದ ತತ್ತರಿಸಿರುವ ರೈತ ಸಮುದಾಯ ಪಂಪ್‌ಸೆಟ್‌ ನೀರಾವರಿ ಆಧಾರಿತ ಬೆಳೆಯನ್ನು ಕಾಪಾಡಿಕೊಳ್ಳಲು ಹೆಣಗಾಡಬೇಕಾಗಿದೆ.

ಕಳೆದೆರಡು ದಿನಗಳಿಂದ ಏಕಾಏಕಿ ರೈತರ ಪಂಪ್‌ಸೆಟ್‌ಗಳಿಗೆ ಒಂದು ಗಂಟೆ ವಿದ್ಯುತ್ ಕಡಿತ ಮಾಡಿ, ಕೇವಲ ಆರು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ, 6 ಗಂಟೆ ಕಾಲ ನಿರಂತರ ವಿದ್ಯುತ್‌ ನೀಡುವುದಿಲ್ಲ. ರಾತ್ರಿ ವೇಳೆ ಎರಡು ಗಂಟೆ, ಹಗಲು ವೇಳೆ ನಾಲ್ಕು ಗಂಟೆ ಅಥವಾ ಹಗಲು ವೇಳೆ ಎರಡು ಗಂಟೆ, ರಾತ್ರಿ ವೇಳೆ ನಾಲ್ಕು ಗಂಟೆ ಕಾಲ, ಎರಡು ಹಂತದಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ, ರೈತರು ಮಧ್ಯರಾತ್ರಿ ಕೊಡುವ ಕೇವಲ ಎರಡು ಗಂಟೆಯ ವಿದ್ಯುತ್‌ಗಾಗಿ ರಾತ್ರಿ ಪೂರ್ತಿ ಜಾಗರಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ, ಮಳೆಗಾಲದಲ್ಲಿಯೇ ಬೆಳೆ ಕಾಪಾಡಿಕೊಳ್ಳಲು ಆಗುವುದಿಲ್ಲ ಎನ್ನುತ್ತಾರೆ ರೈತರು.

ಬೇಸಿಗೆ ಕಾಲದ ಬೇಡಿಕೆ:

ಮಳೆಯ ಕೊರತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಮಳೆಗಾಲದಲ್ಲಿ ಬೇಸಿಗೆಯ ತಾಪಮಾನ ಶುರುವಾಗಿರುವುದು ವಿದ್ಯುತ್ ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ. ಹೆಚ್ಚಿದ ತಾಪಮಾನದಿಂದ ಮತ್ತು ಮಳೆಗಾಲದಲ್ಲಿಯೂ ಮಳೆ ಇಲ್ಲದೆ ಇರುವುದರಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ವಿಪರೀತ ಹೆಚ್ಚಳವಾಗಿದೆ. ಹೀಗಾಗಿ, ವಿದ್ಯುತ್ ಸಮಸ್ಯೆ ದಿಢೀರ್ ಎಂದು ತಲೆ ಎತ್ತಿದೆ.

ಬೇಡಿಕೆ ಪೂರೈಕೆಯಲ್ಲಿ ವ್ಯತ್ಯಾಸ:

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ 1 ಗಂಟೆ ವಿದ್ಯುತ್ ಕಡಿತ ಮಾಡಿದ ಮೇಲೆ ಹಾಗೂ ಇತರ ಸೆಕ್ಟರಿಗೂ ಮಿತ ಪೂರೈಕೆಯನ್ನು ಅಳವಡಿಸಿದ ಮೇಲೆ ರಾಜ್ಯದಲ್ಲಿ ಸೆಪ್ಟೆಂಬರ್ 20ರಂದು ಸಂಜೆ 6.33ಕ್ಕೆ ಫ್ರೀಕ್ವೆನ್ಸಿ 50.06 ಲೆಕ್ಕಾಚಾರದಲ್ಲಿ 11511 ಮೆಗಾವ್ಯಾಟ್‌ ವಿದ್ಯುತ್ ಬೇಡಿಕೆ ಇದೆ. ಆದರೆ, ಪೂರೈಕೆ ಆದ ವಿದ್ಯುತ್ 11304 ಮೆಗಾವ್ಯಾಟ್‌. ಪೂರೈಕೆಯಲ್ಲಿ ಕಡಿತ ಮಾಡಿದ ಬಳಿಕ ಕೊರತೆ ನೀಗಿಸಲು ಸಾಧ್ಯವಾಗುತ್ತಿಲ್ಲ.

ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ:

ರಾಜ್ಯದ ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಹಾಗೆಯೇ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಮತ್ತು ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರ (ಬಿಟಿಪಿಎಸ್‌)

ಉತ್ಪಾದನಾ ಘಟಕಗಳಲ್ಲಿ ಕೆಲವೊಂದು ಸಮಸ್ಯೆ ಕಂಡು ಬಂದಿದ್ದು, ದುರಸ್ತಿ ಕಾರ್ಯದಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ. ಈ ಕಾರಣಕ್ಕಾಗಿ ರಾಜ್ಯದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಒಂದು ಗಂಟೆ ಕಡಿತ ಮಾಡಲಾಗಿದೆ.

ವಿದ್ಯುತ್ ಬೇಡಿಕೆ ದಿಢೀರ್‌ ಹೆಚ್ಚಳವಾಗಿರುವುದು ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿರುವುದರಿಂದ ಅದನ್ನು ಸರಿದೂಗಿಸುವುದು ಸಮಸ್ಯೆಯಾಗಿದೆ. ಹೀಗಾಗಿ, ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ಬದಲಾಗಿ 6 ಗಂಟೆ ಕಾಲ ಎರಡು ಹಂತದಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ.

- ಮೊಟ್ಲಾ ನಾಯಕ, ಇಇ ಜೆಸ್ಕಾಂ ಕೊಪ್ಪಳ.

ಮೊದಲೇ ಮಳೆ ಇಲ್ಲ, ಈ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಡಿತ ಮಾಡಿದರೆ ರೈತರು ಬೆಳೆ ಬೆಳೆಯುವುದಾದರೂ ಹೇಗೆ?. ಹೀಗಾಗಿ, ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ.

- ವೀರೇಶ ಸಜ್ಜನ, ರೈತ ಮುಖಂಡ.

ಈ ಬಾರಿ ಬೇಸಿಗೆಯಲ್ಲೇ ಉಷ್ಣಾಂಶ ಹೆಚ್ಚಿದ ಕಾರಣ ಕೃಷಿ ಕೆಲಸಕ್ಕೆ ಹೆಚ್ಚಿದ ವಿದ್ಯುತ್‌ ಬೇಡಿಕೆ

ಆದರೆ ಕೊರತೆ ಕಾರಣ ದಿನಕ್ಕೆ 7 ಗಂಟೆ ಬದಲು ಕೇವಲ 6 ಗಂಟೆ ಮಾತ್ರ ವಿದ್ಯುತ್‌ ಪೂರೈಕೆ

ಜೊತೆಗೆ ಹಗಲು ಹೊತ್ತು 2 ಗಂಟೆ ಮತ್ತು ರಾತ್ರಿ 2 ಪಾಳಿಯಲ್ಲಿ ತಲಾ 2 ಗಂಟೆ ಕರೆಂಟ್‌ ವಿತರಣೆ

ಹೀಗಾಗಿ ರಾತ್ರಿ ಎಷ್ಟು ಹೊತ್ತಿಗೆ ವಿದ್ಯುತ್ ಬರುತ್ತದೆ ಎಂದು ರೈತರು ಕಾಯಬೇಕಾದ ಪರಿಸ್ಥಿತಿ

ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿ ರೈತರಿಗೀಗ ಇಡೀ ರಾತ್ರಿ ಕಾಯವ ಅನಿವಾರ್ಯತೆ