ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿ ಪ್ರಸನ್ನ ನಂಜುಂಡೇಶ್ವರ ದೇವಾಲಯ ಮುಜುರಾಯಿ ಇಲಾಖೆಗೆ ಸೇರಿದೆ. 33 ಗುಂಟೆ ಜಮೀನು ದೇವಾಲಯದ ಹೆಸರಿಗೆ ಇದ್ದು, ಪಹಣಿ ಮಾಡಿ ಕೊಡಬೇಕು. ಜೊತೆಗೆ ವೆಲ್ಲೆಸ್ಲಿ ಸೇತುವೆಯಿಂದ ಕೆಂಗಾರ್ ಕೊಪ್ಪಲು ಗ್ರಾಮದ ಕಡೆ ಹೋಗುವ ರಸ್ತೆ ನಕಾಶೆಯಂತೆ ತಾಳೆ ನೋಡಿ ಅಭಿವೃದ್ಧಿ ಪಡಿಸುವಂತೆ ಗ್ರಾಮದ ರೈತ ಮುಖಂಡ ಬಿ.ಎಸ್ ರಮೇಶ್ ದೂರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕಿರಂಗೂರು ಗ್ರಾಪಂ ಆವರಣದಲ್ಲಿ ಕೆ.ಶೆಟ್ಟಹಳ್ಳಿ 2ನೇ ವೃತ್ತದ ಗ್ರಾಮಗಳ ವ್ಯಾಪ್ತಿ ಜನರಿಗೆ ಅನುಕೂಲವಾಗಲು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಪ್ರಜಾಸೇವೆ ಆಂದೋಲನ ನಡೆಯಿತು.

ತಾಲೂಕು ಆಡಳಿತ ಹಾಗೂ ತಾಪಂನಿಂದ ನಡೆದ ಸಭೆಯಲ್ಲಿ ಹಲವು ಗ್ರಾಮಗಳ ಜನರು, ರೈತರು ಸಮಸ್ಯೆಗಳ ಕುರಿತು ಶಾಸಕರ ಸಮ್ಮುಖದಲ್ಲಿ ದೂರು ನೀಡಿದರು. ಎಲ್ಲಾ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸೂಕ್ತ ಕ್ರಮ ವಹಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಕಿರಂಗೂರು ಬಳಿ ಪ್ರಸನ್ನ ನಂಜುಂಡೇಶ್ವರ ದೇವಾಲಯ ಮುಜುರಾಯಿ ಇಲಾಖೆಗೆ ಸೇರಿದೆ. 33 ಗುಂಟೆ ಜಮೀನು ದೇವಾಲಯದ ಹೆಸರಿಗೆ ಇದ್ದು, ಪಹಣಿ ಮಾಡಿ ಕೊಡಬೇಕು. ಜೊತೆಗೆ ವೆಲ್ಲೆಸ್ಲಿ ಸೇತುವೆಯಿಂದ ಕೆಂಗಾರ್ ಕೊಪ್ಪಲು ಗ್ರಾಮದ ಕಡೆ ಹೋಗುವ ರಸ್ತೆ ನಕಾಶೆಯಂತೆ ತಾಳೆ ನೋಡಿ ಅಭಿವೃದ್ಧಿ ಪಡಿಸುವಂತೆ ಗ್ರಾಮದ ರೈತ ಮುಖಂಡ ಬಿ.ಎಸ್ ರಮೇಶ್ ದೂರು ನೀಡಿದರು.

ಸ್ಥಳದಲ್ಲೇ ಶಾಸಕರು, ಎಡಿಎಲ್‌ಆರ್ ಅವರಿಗೆ ರವಾನಿಸಿ ನಕಾಶೆ ಯಂತೆ ಅಳತೆಮಾಡಿ, ರಸ್ತೆ ಅಭಿವೃದ್ಧಿ ಪಡಿಸುವಂತೆ ಉಪ ತಹಸೀಲ್ದಾರ್‌ಗೆ ಸೂಚಿಸಿದರು.

ರಾಂಪುರ ಗ್ರಾಮದ ಹೊಸ ಬಡಾವಣೆಯಾಗಿ 15 ವರ್ಷಗಳು ಕಳೆದರೂ ವಾಸವಿರುವ ಮನೆಗಳಿಗೆ ಖಾಯಂ ವಿದ್ಯುತ್ ಮೀಟರ್ ಅಳವಡಿಸಿಲ್ಲ. ಜೊತೆಗೆ ಮನೆ ಹಕ್ಕುಪತ್ರಗಳ ನೀಡಿಲ್ಲ ಎಂದು ಬಡಾವಣೆ ಗ್ರಾಮಸ್ಥರು ದೂರಿದರು. ತಕ್ಷಣ ಗ್ರಾಪಂ ಪಿಡಿಒ ಕೃಷ್ಣೇಗೌಡರನ್ನು ಕರೆದು ತಾಪಂನಲ್ಲಿರುವ ರಿಜಿಸ್ಟರ್ ಮೂಲಕ ಇಒ ಜೊತೆಗೆ ಚರ್ಚೆ ನಡೆಸಿ ಮನೆಗಳಿಗೆ ಹಕ್ಕು ಪತ್ರ ನೀಡಲು ಸೂಚಿಸಿದರು.

ಕಪರನಕೊಪ್ಪಲು ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಭವನಕ್ಕೆ ಅಡುಗೆ ಪಾತ್ರೆ ಹಾಗೂ ಇತರ ಪರಿಕರ ನೀಡುವಂತೆ ಒತ್ತಾಯಿದರು. ತಕ್ಷಣ ಶಾಸಕರು ಕಿರಂಗೂರು ಗ್ರಾಪಂ ಪಿಡಿಒ ಅವರಿಗೆ ಎಸ್ಸಿ ಅನುದಾನದಲ್ಲಿ ಪಾತ್ರೆಗಳ ನೀಡಲು ಸೂಚಿಸಿದರು. ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೆಲ ಶಿಕ್ಷಕರಿಗೆ ಗೌರವ ಧನ ವಿತರಿಸಿಲ್ಲ ಎಂದು ದೂರಿದಾಗ ಬಿಇಒಗೆ ತಕ್ಷಣ ಸಂದಾಯ ಮಾಡುವಂತೆ ಸೂಚಿಸಿದರು.

ಸಾಮಾಜಿಕ ಭದ್ರತೆಯ ಅಂಗವಿಲಕ, ವೃದ್ದಾಪ್ಯ ಸೇರಿದಂತೆ ಹಲವು ವೇತನಗಳು ಸರಿಯಾಗಿ ಬರುತ್ತಿಲ್ಲ ಎಂಬ ಬಗ್ಗೆ ದೂರುಗಳು ಸೇರಿದಂತೆ ಇತರ ಜಮೀನು, ಕೃಷಿ, ತೋಟಗಾರಿಕೆ, ಮನೆ ರಸ್ತೆ ಚರಂಡಿ ಹಲವು ಸಮಸ್ಯೆಗಳ ಬಗ್ಗೆ ಜನರು ದೂರಿನ ಸುರಿಮಳೆಗೈದರು.

ಸಭೆಯಲ್ಲಿ ತಹಸೀಲ್ದಾರ್ ಚೇತನಯಾದವ್, ತಾಪಂ ಇಒ ಚಂದ್ರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.