ನಕಲಿ ಔಷಧ ಜಾಲ ಪತ್ತೆ ಪ್ರಕರಣ ಸಂಬಂಧ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಔಷಧ ಉತ್ಪಾದನಾ ಸಂಸ್ಥೆ ‘ಫೈಜರ್’ ಔಷಧಗಳ ಸರಬರಾಜು ಮತ್ತು ಮಾರಾಟ ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬೆಂಗಳೂರು : ನಕಲಿ ಔಷಧ ಜಾಲ ಪತ್ತೆ ಪ್ರಕರಣ ಸಂಬಂಧ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಔಷಧ ಉತ್ಪಾದನಾ ಸಂಸ್ಥೆ ‘ಫೈಜರ್’ ಔಷಧಗಳ ಸರಬರಾಜು ಮತ್ತು ಮಾರಾಟ ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ಜಾಲ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ನಕಲಿ ಔಷಧಗಳ ಮೇಲಿನ ದಾಳಿ ವೇಳೆ ಬಹುರಾಷ್ಟ್ರೀಯ ಕಂಪನಿಯಾದ ಫೈಜರ್ ಔಷಧಗಳೂ ಸಿಕ್ಕಿವೆ. ಈ ಕುರಿತು ತನಿಖೆಗೆ ಆ ಕಂಪನಿ ಸಹಕರಿಸುತ್ತಿಲ್ಲ. ಹಾಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ‘ಪೈಜರ್ ಸಿ ಆ್ಯಂಡ್ ಎಫ್ ಉಗ್ರಾಣಕ್ಕೆ ನೀಡಿದ ಔಷಧ ಪರವಾನಗಿಯನ್ನು ಅಮಾನತು ಗೊಳಿಸಲಾಗಿದೆ. ರಾಜ್ಯದಲ್ಲಿ ಈ ಕಂಪನಿಯ ಔಷಧ ಮಾರಾಟ, ಉದ್ಯಮವನ್ನು ಲಾಕ್ ಮಾಡಲಾಗಿದೆ ಹಾಗೂ ದಾಸ್ತಾನು ಪರವಾನಗಿ ರದ್ದುಮಾಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಅಮೆರಿಕನ್ ಕಂಪನಿ ಫೈಜರ್‌ನ ಯಾವುದೇ ಔಷಧಗಳ ಸರಬರಾಜು ಮತ್ತು ಮಾರಾಟ ನಿಷೇಧಿಸಲಾಗಿದೆ. ಇದರಿಂದಾಗುವ ಔಷಧ ಸಮಸ್ಯೆ ತಪ್ಪಿಸಲು ಪರ್ಯಾಯ ಔಷಧಗಳ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಇನ್ನು, ತನಿಖೆ ಸಹಕರಿಸದ ಇನ್ನೂ 2-3 ಪ್ರಸಿದ್ಧ ಕಂಪನಿಗಳ ವಿರುದ್ಧವೂ ಶೀಘ್ರ ಇಂಥದ್ದೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಎಚ್ಚರಿಕೆ ನೀಡಿದ್ದಾರೆ.
14 ಸಂಸ್ಥೆ ಲೈಸೆನ್ಸ್ ರದ್ದು, 8ರ ಪರವಾನಗಿ ಅಮಾನತು:
ರಾಜ್ಯದಲ್ಲಿ ಇತ್ತೀಚೆಗಷ್ಟೇ ಬೃಹತ್ ಪ್ರಮಾಣದಲ್ಲಿ ನಕಲಿ ಔಷಧ ಜಾಲ ಪತ್ತೆಹಚ್ಚಲಾಗಿದೆ. ಇದರ ತನಿಖೆ ನಡೆಸಲು ಔಷಧ ನಿಯಂತ್ರಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲಾಗಿದೆ. ದಾಳಿ ವೇಳೆ ಅಂದಾಜಿಸಿದ್ದಕ್ಕಿಂತ ಐದಾರು ಪಟ್ಟು ಹೆಚ್ಚು ನಕಲಿ ಔಷಧಗಳು ಪತ್ತೆ ಆಗಲಿವೆ. ಪ್ರಕರಣ ಸಂಬಂಧ ಈಗಾಗಲೆ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. 14 ಸಗಟು ಔಷಧ ಮಾರಾಟ ಸಂಸ್ಥೆಗಳ ಹಾಗೂ 2 ಚಿಲ್ಲರೆ ಔಷಧ ಮಾರಾಟ ಸಂಸ್ಥೆಗಳ ಪರವಾನಗಿ ರದ್ದುಪಡಿಸಲಾಗಿದೆ. 8 ಸಗಟು ಔಷಧ ಮಾರಾಟ ಸಂಸ್ಥೆಗಳ ಪರವಾನಗಿ ಅಮಾನತು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರದಲ್ಲಿ ಒರಿಜಿನಲ್:
ಸುಮಾರು 50ಕ್ಕೂ ಹೆಚ್ಚು ಬೃಹತ್ ಆಸ್ಪತ್ರೆಗಳಿಗೆ ನಕಲಿ ಔಷಧ ತಯಾರಾಗಿರುವ ಮಾಹಿತಿ ಇದ್ದು, ಯಾವ ಆಸ್ಪತ್ರೆಗಳು ಎಂದು ತಿಳಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್, ಈಗಾಗಲೇ ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ಹೇಳಲಾಗದು. ತನಿಖೆ ನಂತರ ಅದಾಗಿಯೇ ತಿಳಿಯುತ್ತದೆ. ಒಂದು ಕಡೆ ಫೈವ್ ಸ್ಟಾರ್ ಹೋಟೆಲ್‌ಗೆ ಹೋದರೆ ಕಳಪೆ ಆಹಾರ ಸಿಗುತ್ತಿದೆ, ದೊಡ್ಡ ಆಸ್ಪತ್ರೆಗಳಲ್ಲಿ ನಕಲಿ ಔಷಧ ಸಿಗುತ್ತಿದೆ. ತನಿಖಾ ವರದಿಯಲ್ಲಿ ಯಾವುದೇ ಸಂಸ್ಥೆ, ದೊಡ್ಡವರ ಹೆಸರು ಬಂದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯದ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗಿರುವ ಔಷಧಗಳೆಲ್ಲ ಅಸಲಿಯದ್ದೇ ಆಗಿವೆ ಎಂದಷ್ಟೇ ಹೇಳಬಹುದು ಎಂದರು.
ನಕಲಿ ಔಷಧ ಪೂರೈಕೆ ಜಾಲ
ಇತ್ತೀಚೆಗೆ ಬಿಡದಿ ಸೇರಿ ಹಲವು ಕಡೆ ನಡೆಸಿದ್ದ ದಾಳಿಯಲ್ಲಿ ನಕಲಿ ಔಷಧ ಫ್ಯಾಕ್ಟ್ರಿಗಳು ಪತ್ತೆ
ಈ ಹಿನ್ನೆಲೆ 14 ಸಗಟು ಔಷಧ ಮಾರಾಟ ಸಂಸ್ಥೆ ಲೈಸೆನ್ಸ್ ರದ್ದು, 8ರ ಲೈಸೆನ್ಸ್ ಸಸ್ಪೆಂಡ್
ಈ ದಾಳಿಯ ವೇಳೆ ಬಹುರಾಷ್ಟ್ರೀಯ ಫೈಜರ್ ಕಂಪನಿಯ ದುಬಾರಿಗಳ ಔಷಧಗಳೂ ಪತ್ತೆ
ಆದರೆ ತನಿಖೆಗೆ ಫೈಜರ್ ಅಸಹಕಾರ. ಹೀಗಾಗಿ ಕಂಪನಿ ಔಷಧ ಪೂರೈಕೆ, ಸೇಲ್‌ಗೆ ನಿಷೇಧ
ತನಿಖೆಗೆ ಸಹಕರಿಸಿದ ಇನ್ನೂ 2 ಕಂಪನಿಗಳ ವಿರುದ್ಧ ಇದೇ ರೀತಿ ಕ್ರಮ: ಸಚಿವ ಖಾದರ್

