‘ಕನ್ನಡ ಚಿತ್ರರಂಗದ ಧೀಮಂತ ನಟ ಡಾ.ರಾಜಕುಮಾರ್‌ ಅವರಂಥವರು ಕಲೆಯ ಜತೆಜತೆಗೆ ಯೋಗ ಕ್ಷೇತ್ರಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು/ಆನೇಕಲ್: ‘ಕನ್ನಡ ಚಿತ್ರರಂಗದ ಧೀಮಂತ ನಟ ಡಾ.ರಾಜಕುಮಾರ್‌ ಅವರಂಥವರು ಕಲೆಯ ಜತೆಜತೆಗೆ ಯೋಗ ಕ್ಷೇತ್ರಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದರು. ಬೆಂಗಳೂರಿನ ಜಿಗಣಿ ಸಮೀಪದ ಪ್ರಶಾಂತಿ ಕುಟೀರದಲ್ಲಿ ಎಸ್.ವ್ಯಾಸ ಯೋಗ ಅನುಸಂಧಾನ ಕೇಂದ್ರದ ವಜ್ರಮಹೋತ್ಸವ ಮತ್ತು ಸರ ಸಂಚಾಲಕರಾಗಿದ್ದ ಹೊ.ವೆ.ಶೇಷಾದ್ರಿ ಅವರ ಜನ್ಮಶತಾಬ್ಧಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ನೆಲ ಶತಮಾನಗಳಿಂದಲೂ ಯೋಗದ ಕೇಂದ್ರವಾಗಿ ಬೆಳೆದುಬಂದಿದೆ. ಇಲ್ಲಿ ಅನೇಕ ಯೋಗ ಶಿಕ್ಷಕರು ಮತ್ತು ವಿದ್ವಾಂಸರು ಜನಿಸಿ, ಯೋಗ ಪರಂಪರೆಯನ್ನು ಬಲಪಡಿಸಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ.ರಾಜ್‌ಕುಮಾರ್ ಅವರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇಂತಹ ವ್ಯಕ್ತಿಗಳು ಯೋಗದ ಜೊತೆಗೆ ಕಲಾ ಕ್ಷೇತ್ರಕ್ಕೂ ಸೇವೆ ಸಲ್ಲಿಸಿದ್ದಾರೆ’ ಎಂದು ಕೊಂಡಾಡಿದರು.

ಇನ್ನು, 25 ವರ್ಷಗಳಲ್ಲಿ ವಿಕಸಿತ ಭಾರತ ಯೋಜನೆಯನ್ನು ಸಾಕಾರಗೊಳಿಸಬೇಕೆಂದು ಯುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು. ದೇಶೀಯವಾಗಿ ಲಭ್ಯವಾಗಿರುವ ಎಲ್ಲ ಸಂಪನ್ಮೂಲಗಳ ಸದುಪಯೋಗಪಡಿಸಿಕೊಂಡು ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಆರ್ಥಿಕವಾಗಿ ಸಬಲತೆ ಕಂಡು ವಿಕಸಿತ ಭಾರತವನ್ನು ಮುನ್ನಡೆಸಬೇಕೆಂದರು.

ಮುಂದುವರಿದು ನಾನು ನೂರಾರು ದೇಶಗಳ ಪ್ರಮುಖರ ಜೊತೆ ಭೋಜನ ಕೂಟಗಳಲ್ಲಿ ಕಲೆತಾಗ ಎಲ್ಲರೂ ಯೋಗ ಬಗ್ಗೆ ಕೇಳುತ್ತಾರೆ. ವಿಶ್ವದ 76ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ಸಿದ್ಧಿಯನ್ನು ಅಳವಡಿಸಿಕೊಂಡು ಆರೋಗ್ಯವಂತ ಸಮಾಜದ ಕನಸು ಕಂಡಿದ್ದಾರೆ. ಆಯುರ್ವೇದ, ಸಿದ್ಧ, ಯುನಾನಿ, ಹೊಮಿಯೋಪತಿ ಸೇರಿದಂತೆ ಪ್ರಾಚೀನ ಅರೋಗ್ಯ ಪದ್ಧತಿಗಳ ಬಗ್ಗೆ ಇತರೆಡೆ ಕುತೂಹಲ ಇದೆ. ಸಮಗ್ರ ಆರೋಗ್ಯ ಚಿಕಿತ್ಸೆ ಹಾಗೂ ಔಷಧ ಎಲ್ಲೆಡೆ ಲಭ್ಯವಾಗಲು ವ್ಯವಸ್ಥೆ ಮಾಡಿ ವಿವಿಧ ಮಂತ್ರಾಲಯವನ್ನೂ ರಚಿಸಲಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಧ್ಯೇಯವಾಕ್ಯ ಮೆಚ್ಚುಗೆ ಪಡೆದಿದೆ ಎಂದರು.ಬೆಂಗಳೂರು-ಕರ್ನಾಟಕ ಅಭಿವೃದ್ಧಿ ಹೊಂದುತ್ತಿದ್ದು ಮೆಟ್ರೋ ರೈಲು ಸೇರಿದಂತೆ ಮೂಲ ಸೌಕರ್ಯಗಳಿಗೆ ಕೇಂದ್ರ ಹೆಚ್ಚಿನ ಅನುದಾನ ನೀಡುತ್ತಿದೆ. ಎಲ್ಲರೂ ಸೇರಿ ಸಶಕ್ತ ಸ್ವಾಭಿಮಾನಿ ಭಾರತವನ್ನು ಕಟ್ಟೋಣ ಎಂದು ನುಡಿದರು.

ಎಸ್.ವ್ಯಾಸ ಯೋಗ ಕೇಂದ್ರದ ಅಧ್ಯಕ್ಷ ಪದ್ಮಶ್ರೀ ಡಾ.ನಾಗೇಂದ್ರ ಮಾತನಾಡಿ, ಮನುಜನ ಆಯಸ್ಸನ್ನು ಕ್ಷೀಣಿಸುವ ಮಾರಕ ಕಾಯಿಲೆಗಳಿಗೆ ಶಾಶ್ವತ ಉಪಶಮನ ನೀಡುವ ನಿಟ್ಟಿನಲ್ಲಿ ಯೋಗ ಥೆರಪಿ, ಸಾತ್ವಿಕ ಆಹಾರ ಪದ್ಧತಿ ರೂಪಿಸಿದ್ದು ಜನ ಸಾಮಾನ್ಯರಿಗೆ ಉಪಯುಕ್ತವಾಗಿದೆ. ಪ್ರಧಾನಿ ಮೋದಿ ಅವರು ವಿಕಸಿತ ಭಾರತ ಯೋಜನೆಯ ಅಂಗವಾಗಿ ಅನೇಕ ಸಲಹೆಗಳನ್ನು ನೀಡಿದ್ದು ಅವರ ಮುಂದಾಲೋಚನೆ ಶ್ಲಾಘನೀಯವಾಗಿದೆ. ವಸುದೈವ ಕುಟುಂಬಕಂ ನಮ್ಮ ಧ್ಯೇಯ ಘೋಷ ವಾಕ್ಯವಾಗಿದ್ದು ಚಾಚೂ ತಪ್ಪದೇ ಅತಿ ಶೀಘ್ರದಲ್ಲಿ ಅನುಷ್ಠಾನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ವ್ಯಾಸ ಉಪಾಧ್ಯಕ್ಷೆ ಡಾ.ನಾಗರತ್ನ, ರಘುರಾಮ್, ಸರ ಸಂಚಾಲಕ ದತ್ತಾತ್ರೇಯ ಹೊಸಬಾಳೆ, ರಾಜ್ಯಪಾಲೆ ಡಾ.ಸುಧಾ ಯಾದವ್, ಕುಲಪತಿ ಡಾ.ದಯಾನಂದ ಸ್ವಾಮಿ, ಸಂಸದ ಡಾ.ಮಂಜುನಾಥ್, ಕುಲಾಧಿಪತಿ ಡಾ.ಮಂಜುನಾಥ್, ಡಾ.ರಾಮಕೃಷ್ಣ ಉಪಸ್ಥಿತರಿದ್ದರು.ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್‌ ಶೋ:

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಪ್ರಧಾನಿ ಮೋದಿ ಅವರು ಕಾರಿನಲ್ಲಿ ಸಂಚರಿಸಿದ ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಾವುಟ ಹಿಡಿದು ಘೋಷಣೆ ಕೂಗಿ ಹೂ ಮಳೆ ಸುರಿಸಿ ಸಂಭ್ರಮಿಸಿದರು.ಬೆಳಗ್ಗೆ 9 ಗಂಟೆಯಿಂದಲೇ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಬನ್ನೇರುಘಟ್ಟ ರಸ್ತೆ, ಬಿಳೇಕಹಳ್ಳಿ, ತಾವರೆಕರೆ, ಐಐಎಂಬಿ, ವೆಗಾ ಸಿಟಿ ಮಾಲ್‌ ಜಂಕ್ಷನ್‌ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಜಮಾಯಿಸಿದ್ದರು. ರಸ್ತೆ ಎರಡೂ ಪೊಲೀಸರು ಬ್ಯಾರಿಕೇಟ್‌ ಅಳವಡಿಸಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರಿಂದ ಅಂಗಡಿ ಮುಂಗಟ್ಟುಗಳು, ಎತ್ತರದ ಕಟ್ಟಡಗಳು, ಕಾಂಪೌಂಡ್‌ಗಳನ್ನು ಏರಿ ಪ್ರಧಾನಿ ಮೋದಿ ಆಗಮನಕ್ಕೆ ಕಾದು ಕುಳಿತ್ತಿದ್ದರು. ಪ್ರಧಾನಿ ಮೋದಿ ಅವರು ಪಿಂಕ್‌ ಮೆಟ್ರೋಗೆ ಚಾಲನೆ ನೀಡಲು ಕಾರಿನಲ್ಲಿ ಹೋಗುವಾಗ ಕಾರಿನ ವೇಗ ತಗ್ಗಿಸಿ ಜನರತ್ತ ಕೈ ಬೀಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.ಬನ್ನೇರುಘಟ್ಟ ರಸ್ತೆ, ಕಾಳೇನ ಅಗ್ರಹಾರ, ತಾವರೆಕೆರೆ ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ಸುತ್ತಮುತ್ತಲ ರಸ್ತೆಗಳ ಎರಡೂ ಬದಿ ಬಿಜೆಪಿ ಮತ್ತು ಕಾಂಗ್ರೆಸ್‌ ಬಾವುಟಗಳನ್ನು ಅಳವಡಿಸಲಾಗಿತ್ತು. ಬಿಜೆಪಿಯವರು ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು, ದೊಡ್ಡ ದೊಡ್ಡ ಫಲಕಗಳನ್ನು ಅಳವಡಿಸಿದ್ದರು. ಕಾಂಗ್ರೆಸ್‌ನವರು ಪ್ರಧಾನಿ ಮೋದಿ ಅವರ ಹೆಸರು ಹಾಕದೆ ಗಣ್ಯರಿಗೆ ಸ್ವಾಗತ ಎಂಬಂತಹ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದು ಕಂಡು ಬಂದಿತು.ಸಿಎಂ-ಮೋದಿ ಅನ್ಯೋನ್ಯತೆ ಪ್ರದರ್ಶನ:

ಮೆಟ್ರೋ ಪಿಂಕ್ ಲೈನ್ ಆರಂಭಕ್ಕೆ ಹಸಿರು ನಿಶಾನೆ ತೋರುವ ವೇಳೆ ಖುದ್ದು ಪ್ರಧಾನಿ ಮೋದಿ ಅವರು ಸಮೀಪದಲ್ಲೇ ಇದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ತಮ್ಮ ಕೈಯಲ್ಲಿದ್ದ ಹಸಿರುವ ಬಾವುಟವನ್ನು ಅವರಿಗೆ ನೀಡಿ ಇಬ್ಬರೂ ಜತೆಯಲ್ಲೇ ಚಾಲನೆ ನೀಡುವ ಮೂಲಕ ಅನ್ಯೋನ್ಯತೆ ಪ್ರದರ್ಶಿಸಿದ ಘಟನೆ ನಡೆಯಿತು.ಪ್ರಧಾನಿ ಮೋದಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಪಾಲರಾದ ಸುಧಾ ಯಾದವ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಐದೂ ಮಂದಿ ಮಾತ್ರ ಇದ್ದ ಕಾರ್ಯಕ್ರಮದಲ್ಲಿ ರೈಲಿಗೆ ಹಸಿರು ನಿಶಾನೆ ತೋರಲು ಕೇವಲ ಒಂದು ಬಾವುಟವಷ್ಟೇ ನೀಡಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿಯವರಿಂದ ಕೊಂಚ ದೂರದಲ್ಲಿ ನಿಂತಿದ್ದ ಡಿ.ಕೆ.ಶಿವಕುಮಾರ್‌ ಅವರನ್ನು ಹತ್ತಿರಕ್ಕೆ ಎಳೆದು ತಮ್ಮ ಕೈಯಲ್ಲಿದ್ದ ಬಾವುಟವನ್ನು ಅವರ ಕೈಗೆ ನೀಡಿ ಇಬ್ಬರೂ ಸೇರಿ ಹಸಿರು ನಿಶಾನೆ ತೋರಿದರು. ಇದಲ್ಲದೆ, ರಾಜ್ಯಪಾಲರು, ಪ್ರಧಾನಿ ಮೋದಿ, ಸಿಎಂ ಹಾಗೂ ಕೃಷ್ಣ ಬೈರೇಗೌಡ ಅವರೂ ಮೆಟ್ರೋದಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಮೋದಿ ಹಾಗೂ ಸಿಎಂ ಇಬ್ಬರೂ ಪರಸ್ಪರ ಕೈ ಕೈ ಹಿಡಿದು ಅಭಿವೃದ್ಧಿಯ ಕುರಿತು ಚರ್ಚಿಸಿದರು.ಗೌರ್ನರ್‌ ಸುಧಾ ಯಾದವ್‌ ಬಗ್ಗೆ ಮೋದಿ ಮೆಚ್ಚುಗೆ:

ರಾಜ್ಯದ ರಾಜ್ಯಪಾಲರಾದ ಸುಧಾ ಯಾದವ್ ಅವರ ಪತಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದರು, ಅವರ ಸೇವೆ ರಾಜ್ಯಕ್ಕೆ ದೊರೆತಿದೆ. ಅವರ ಬಗ್ಗೆ ರಾಜ್ಯದ ಜನತೆಗೆ ತಿಳಿದಿಲ್ಲದಿರಬಹುದು. ಆದರೆ, ಸುಧಾ ಅವರು ಪತಿ ಹುತಾತ್ಮರಾದ ದಿನದಿಂದ ಇಂದಿಗೂ ದೇಶ ಸೇವೆಯಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಪಾಲರ ಬಗ್ಗೆ ಅಭಿಮಾನ ಮಾತುಗಳನ್ನಾಡಿದರು.ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ರಾಜ್ಯಪಾಲರ ಪತಿ ಸುಖಬೀರ್ ಸಿಂಗ್ ಯಾದವ್, ಬಿಎಸ್ಎಫ್ ನಲ್ಲಿ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದರು. ಇದಾದ ನಂತರ ಅವರ ಪತ್ನಿ ಸುಧಾ ಯಾದವ್ ಬಿಜೆಪಿ ಮೂಲಕ ಪ್ರಜಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪ್ರಸ್ತುತ ರಾಜ್ಯದ ರಾಜ್ಯಪಾಲರಾಗಿದ್ದಾರೆ. ಇದೇ ಪ್ರಥಮಬಾರಿಗೆ ಕಾರ್ಯಕ್ರಮದಲ್ಲಿ ಸುಧಾ ಯಾದವ್ ಅವರೊಂದಿಗೆ ಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿದೆ. ಕರ್ನಾಟಕದ ಜನರು ಅವರನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗದಿರಬಹುದು. ದೇಶಕ್ಕಾಗಿ ಸಮರ್ಪಣೆ ಎಂಬುದನ್ನು ನಾವು ಸುಧಾ ಹಾಗೂ ಅವರ ಕುಟುಂಬದ ಜೀವನದಿಂದ ತಿಳಿದುಕೊಳ್ಳಬಹುದು. ಅವರ ಪತಿ ಯುದ್ಧದಲ್ಲಿ ಹುತಾತ್ಮರಾದರು, ಆ ನಂತರವೂ, ಅವರು ಇಂದಿಗೂ ಅದೇ ಸೇವಾಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.