ಲೋಕಾಪುರ: ಖ್ಯಾತ ಚಿತ್ರನಟ ಅಭಯವೀರ ಅವರ ಈ ಜನಪರ ಹಾಗೂ ಧಾರ್ಮಿಕ ಸೇವೆಗೆ ಅವರನ್ನು ಜಾತ್ರಾ ಕಮಿಟಿ, ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರರಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಅನ್ನದಾನಕ್ಕಿಂತ ದೊಡ್ಡದಾದ ದಾನ ಬೇರೆ ಯಾವುದೂ ಇಲ್ಲ. ಜ್ಯೋತಿರ್ಲಿಂಗೇಶ್ವರ ಜಾತ್ರೆಯ ನಿಮಿತ್ತ ನನಗೆ ದೊರೆತ ಈ ಸೇವೆಯ ಅವಕಾಶವನ್ನು ನನ್ನ ಜೀವನದುದ್ದಕ್ಕೂ ಸ್ಮರಿಸಿಕೊಳ್ಳುತ್ತೇನೆ ಮತ್ತು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಖ್ಯಾತ ಚಿತ್ರನಟ ಅಭಯವೀರ ತಿಳಿಸಿದ್ದಾರೆ.ಪಟ್ಟಣದ ಜನತಾ ಪ್ಲಾಟ್ನಲ್ಲಿ ಶುಕ್ರವಾರ ಆಯೋಜಿಸಿದ್ದ ೧೦ನೇ ವರ್ಷದ ಜ್ಯೋತಿರ್ಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೇವೆ ಸಲ್ಲಿಸಲು ನನಗೆ ಅವಕಾಶ ಕಲ್ಪಿಸಿಕೊಟ್ಟ ದೇವಸ್ಥಾನ ಸಮಿತಿಯವರಿಗೆ, ಗೆಳೆಯರಿಗೆ ಹಾಗೂ ಪೂಜ್ಯರಿಗೆ ಧನ್ಯವಾದ ತಿಳಿಸಿದರು.
ವಾಯುಪುತ್ರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲೋಕಣ್ಣ ಭೀ. ಕತ್ತಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಸಮಸ್ತ ಸದ್ಭಕ್ತ ಮಂಡಳಿಯವರ ಶ್ರಮ ಮತ್ತು ಭಕ್ತಾದಿಗಳ ತನು-ಮನ-ಧನದ ಸಹಕಾರದಿಂದ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಶಿವಭಜನೆ, ಪಲ್ಲಕ್ಕಿ ಉತ್ಸವ, ಗಂಗಾದರ್ಶನ ಹಾಗೂ ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲೆಯಾದ ಜಿದ್ದಾಜಿದ್ದಿನ ಡೊಳ್ಳಿನ ಪದಗಳ ಗಾಯನ ಕಾರ್ಯಕ್ರಮಗಳು ಭಕ್ತರಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ರಸದೌತಣ ನೀಡುತ್ತಿವೆ ಎಂದು ಹೇಳಿದರು.ಜಾತ್ರೆಯ ಪ್ರಮುಖ ದಿನವಾದ ನ.೧೩ರಂದು ನಡೆದ ಮಹಾ ಅನ್ನ ಸಂತರ್ಪಣೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಭಂಡಾರದ ಪ್ರಸಾದ ಸ್ವೀಕರಿಸಿದರು.
ಸನ್ಮಾನ: ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅಭಯವೀರ ಅವರು ಜಾತ್ರಾ ಮಹೋತ್ಸವದಲ್ಲಿ ತನು, ಮನ, ಧನದಿಂದ ತೊಡಗಿಸಿಕೊಂಡು ಅನ್ನ ದಾಸೋಹಕ್ಕೆ ಕೈಜೋಡಿಸಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಅವರ ಈ ಜನಪರ ಹಾಗೂ ಧಾರ್ಮಿಕ ಸೇವೆಗೆ ಅವರನ್ನು ಜಾತ್ರಾ ಕಮಿಟಿ, ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರರಿಂದ ಸನ್ಮಾನಿಸಲಾಯಿತು.ಈ ಕಾರ್ಯಕ್ಕೆ ನಾಗಣಾಪುರದ ಕೇಶವ ಸಿಮೆಂಟ್ ವರ್ಕ್ಸ್, ಗುರುರಾಜ ಉಡುಪುಡಿ ಅವರು ದಾನಿಗಳಾಗಿ ಸಹಕಾರ ನೀಡಿದರು. ಜಾತ್ರೆಯ ನಿಮಿತ್ತ ಜರುಗಿದ ಪಲ್ಲಕ್ಕಿ ಉತ್ಸವ, ಗಂಗಾದರ್ಶನ ಹಾಗೂ ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಭಕ್ತರ ಗಮನ ಸೆಳೆದವು.
ಈ ವೇಳೆ ಜ್ಞಾನೇಶ್ವರ ಮಠದ ಪೀಠಾಧಿಪತಿಗಳಾದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ವಿರೇಶ ಪಂಚಕಟ್ಟಿಮಠ, ಮಲ್ಲು ಹೊದ್ಲುರಮಠ, ಜಾತ್ರಾ ಕಮಿಟಿ ಅಧ್ಯಕ್ಷ ಉಮೇಶ ಕಾಗಿಯವರ, ಈರಪ್ಪ ಸಾಳಗುಂದಿ, ಅರ್ಚಕರಾದ ಜ್ಯೋತಿಪ್ಪ ಹರಕಂಗಿ, ಅಪ್ಪಣ್ಣ ಹರಕಂಗಿ, ನಾಗಪ್ಪ ಹರಕಂಗಿ, ರಾಮಣ್ಣ ಹರಕಂಗಿ, ಕಾಮಣ್ಣ ಹರಕಂಗಿ, ಬೀಮ್ಮಣ್ಣ ಹರಕಂಗಿ ಮತ್ತು ಜಾತ್ರಾ ಕಮಿಟಿ, ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು ಇದ್ದರು.ಇಂತಹ ಧಾರ್ಮಿಕ ಜಾತ್ರಾ ಮಹೋತ್ಸವಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ನಮ್ಮ ಗ್ರಾಮೀಣ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಮುಖ ಕೊಂಡಿಗಳಾಗಿವೆ.
-ಲೋಕಣ್ಣ ಭೀ.ಕತ್ತಿ ಸಹಕಾರಿ ಧುರೀಣರು ಲೋಕಾಪುರ