ಕೃಷಿ ಚಟುವಟಿಕೆ ನಡೆಯುವ ಸ್ಥಳದಂತೆ ತೋರಿಸಿಕೊಂಡು ಅದರೊಳಗೆ ನಡೆಯುತ್ತಿದ್ದ ನಕಲಿ ಔಷಧ ತಯಾರಿಕೆ ಮತ್ತು ಪ್ಯಾಕಿಂಗ್ ಜಾಲವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿ ಭೇದಿಸಲು ಕಾರಣರಾಗಿದ್ದು ಸ್ಥಳೀಯ ಕೃಷಿ ಕೂಲಿ ಕಾರ್ಮಿಕರು.

ಕನ್ನಡಪ್ರಭ ವಾರ್ತೆ ರಾಮನಗರ:

ಕೃಷಿ ಚಟುವಟಿಕೆ ನಡೆಯುವ ಸ್ಥಳದಂತೆ ತೋರಿಸಿಕೊಂಡು ಅದರೊಳಗೆ ನಡೆಯುತ್ತಿದ್ದ ನಕಲಿ ಔಷಧ ತಯಾರಿಕೆ ಮತ್ತು ಪ್ಯಾಕಿಂಗ್ ಜಾಲವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿ ಭೇದಿಸಲು ಕಾರಣರಾಗಿದ್ದು ಸ್ಥಳೀಯ ಕೃಷಿ ಕೂಲಿ ಕಾರ್ಮಿಕರು.ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಸಿ.ಕೆ. ತಾಂಡ್ಯದಲ್ಲಿ ನಕಲಿ ಔಷಧ ತಯಾರಿಕೆ ಮತ್ತು ಪ್ಯಾಕಿಂಗ್ ಬಗ್ಗೆ ಸ್ಥಳೀಯ ಕೃಷಿ ಕಾರ್ಮಿಕರು ನೀಡಿದ ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ನಕಲಿ ಔಷಧಿ ತಯಾರಿಕೆ ದಂಧೆಯನ್ನು ಪತ್ತೆ ಹಚ್ಚಿದರು.

ಗ್ರಾಮದ ಹೊರವಲಯದಲ್ಲಿ ಸುತ್ತಲೂ ಕಾಂಪೌಂಡ್ ನಿರ್ಮಿಸಿರುವ ಸುಮಾರು 8 ಎಕರೆ ಜಮೀನಿನಲ್ಲಿರುವ ತೋಟದ ಮನೆಯನ್ನು ನಕಲಿ ಔಷಧ ತಯಾರಿಕೆ ಘಟಕವನ್ನಾಗಿ ಪರಿವರ್ತಿಸಲಾಗಿತ್ತು. ಈ ತೋಟದ ಮನೆ ಶಡಿಯಪ್ಪ ಎಂಬುವರಿಗೆ ಸೇರಿದ್ದಾಗಿದೆ. ಅಲ್ಲಿ ವಿಚಿತ್ರ ಚಟುವಟಿಕೆಗಳು ನಡೆಯುತ್ತಿರುವುದನ್ನು ಕೃಷಿ ಕಾರ್ಮಿಕರು ಗಮನಿಸುತ್ತಲೇ ಇದ್ದರು.

ತೋಟದ ಮನೆ ಸುತ್ತುಮುತ್ತ ಔಷಧಕ್ಕೆ ಬಳಕೆಯಾಗುವ ಸೀಸೆಗಳು ಹಾಗೂ ಕೆಲವೊಮ್ಮೆ ದುರ್ವಾಸನೆ ಸೂಸುವ ಪುಡಿಯನ್ನು ಗಮನಿಸಿದ್ದರು. ಔಷಧ ತ್ಯಾಜ್ಯ ಎಂದೇ ಅವರೆಲ್ಲರು ಭಾವಿಸಿದ್ದರು. ಕೃಷಿ ಕಾರ್ಮಿಕರ ಪೈಕಿ ಒಬ್ಬ ಕಾರ್ಮಿಕ ಬೀಟ್ ಪೊಲೀಸ್ ಶಿವರಾಜ್ ಬಳಿ ತೋಟದ ಮನೆ ಬಳಿ ಕಂಡಿದ್ದನ್ನು ಹಂಚಿಕೊಂಡಿದ್ದನು.

ಅಲ್ಲದೆ, ತೋಟದ ಮನೆಯಿಂದ ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನವೊಂದು ನಿತ್ಯ ಬಳಕೆಯಾಗುತ್ತಿತ್ತು. ತೋಟದ ಮನೆಗೆ ಕೋರಿಯರ್‌ ಸಂಸ್ಥೆಯ ಸಿಬ್ಬಂದಿಗಳು ಸಹ ಬಂದು ಪಾರ್ಸಲ್‌ಗಳನ್ನು ಪಡೆದು ಹೋಗುತ್ತಿರುವುದನ್ನು ಸಹ ಗಮನಿಸಿದ್ದ ಸ್ಥಳೀಯರು, ಆ ವಿಚಾರವನ್ನು ಪೇದೆಯ ಗಮನಕ್ಕೆ ತಂದಿದ್ದರು ಎಂದು ಗೊತ್ತಾಗಿದೆ.

ಆದರೆ, ಪೊಲೀಸ್ ಪೇದೆ ಶಿವರಾಜ್, ಅದು ಕಸ ಸುರಿಯುವ ಸಾಮಾನ್ಯ ದೂರು ಎಂದು ಸುಮ್ಮನಾಗಲಿಲ್ಲ. ಸಾಮಾನ್ಯ ತೊಡುಗೆಯಲ್ಲಿ ಕುತೂಹಲದಿಂದಲೇ ತೋಟದ ಮನೆಗೆ ಭೇಟಿ ನೀಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅಲ್ಲಿ ಔಷಧಗಳು ಮರುಪ್ಯಾಕ್ ಆಗುತ್ತಿರುವುದನ್ನು ನೋಡಿ ಅನುಮಾನಗೊಂಡಿದ್ದಾರೆ.

ಈ ವಿಚಾರವನ್ನು ಶಿವರಾಜ್‌ರವರು ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಾಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ. ರವಿರವರ ನೇತೃತ್ವದಲ್ಲಿ ರಚನೆಯಾದ ತಂಡಕ್ಕೆ ತೋಟದ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಹೊಣೆಗಾರಿಕೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ವಹಿಸಿತು.

ತೋಟದ ಮನೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಪತ್ತೆಹಚ್ಚಲು ಹೋದ ಪೊಲೀಸ್ ತಂಡಕ್ಕೆ ಅಲ್ಲಿ ಗಂಭೀರ ಅಪರಾಧ ನಡೆಯುತ್ತಿರುವುದು ಗೊತ್ತಾಗಿದೆ. ಅದು ಪರವಾನಗಿ ಪಡೆದ ಗೋದಾಮು ಅಲ್ಲ, ಯಾವುದೇ ಔಷಧ ಸಂಬಂಧಿತ ಕೆಲಸಕ್ಕೆ ಅಧಿಕೃತಗೊಂಡ ಸ್ಥಳವೂ ಅಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ.

ಆನಂತರ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಜಂಟಿ ದಾಳಿ ನಡೆಸಿ ಇಡೀ ದೇಶವೇ ಬೆಚ್ಚಿ ಬಿಳುವ ನಕಲಿ ಔಷಧ ತಯಾರಿಕೆ ದಂಧೆ ಪತ್ತೆ ಹಚ್ಚಿತು.

ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಿಂದ ಕಡಿಮೆ ಬೆಲೆಯ, ಕಳಪೆ ಗುಣಮಟ್ಟದ ಔಷಧಿಗಳನ್ನು ತರಿಸಿ, ಅವುಗಳನ್ನು ಪ್ರಮುಖ ಔಷಧ ಕಂಪನಿಗಳು ತಯಾರಿಸಿದ ಉತ್ಪನ್ನಗಳಂತೆ ಮಾರಾಟ ಮಾಡುವ ಜಾಲ ಇದಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಫೈಜರ್‌ನಂತಹ ಪ್ರತಿಷ್ಠಿತ ಕಂಪನಿಗಳ ಔಷಧಗಳನ್ನು ಹೋಲುವಂತೆ ಮರು ಪ್ಯಾಕಿಂಗ್ ಮಾಡಿ, ಅದಕ್ಕೆ ಲೇಬಲ್ ಅಂಟಿಸಿ ಅವುಗಳನ್ನು ದುಬಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಅಂಶ ಬಯಲಿಗೆ ಬಂದಿದೆ.

ಈ ಜಾಲದ ಮುಖ್ಯ ಸೂತ್ರಧಾರಿ ಪಾಪರೆಡ್ಡಿ ಪಾಳ್ಯದ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿರುವ ಪ್ರಶಾಂತ್‌ನನ್ನು ಅಜರ್‌ಬೈಜಾನ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಪ್ರಶಾಂತ್ ಸುಮಾರು 11 ತಿಂಗಳ ಹಿಂದೆ ಈ ತೋಟದ ಮನೆಯನ್ನು ಬಾಡಿಗೆಗೆ ಪಡೆದಿದ್ದನು. ಈತ ಬೆಂಗಳೂರು ಮತ್ತು ತೆಲಂಗಾಣದ ವಿವಿಧ ಸ್ಥಳಗಳಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿದ್ದನು.

---

ಕೋಟ್‌...

ಕೃಷಿ ಕಾರ್ಮಿಕರು ತಾವು ಗಮನಿಸಿದ್ದನ್ನು ಪೊಲೀಸ್ ಪೇದೆಯ ಗಮನಕ್ಕೆ ತಂದಿದ್ದರು. ಆ ಪೇದೆ ಅಲ್ಲೇನು ನಡೆಯುತ್ತಿದೆ ಎಂಬುದನ್ನು ಗಮನಿಸುವ ಕುತೂಹಲ ಮತ್ತು ಕರ್ತವ್ಯ ಪ್ರಜ್ಞೆ ಮೆರೆದಿದ್ದರಿಂದಲೇ ಈ ಜಾಲ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ್ದ ತನಿಖೆಯ ಮಾಹಿತಿ, ದಾಖಲೆಗಳ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ.