ಭಾರತ್ ಜೋಡೊ ಯುವ ಸಂಘ ರಚಿಸುವುದರಿಂದ ಯುವಕರಲ್ಲಿ ದೇಶಪ್ರೇಮ ಹಾಗೂ ಸಂಘಟನೆ ಸಾಮಾಜಿಕ ಕಳಕಳಿ ಆರಂಭವಾಗುವುದು. ಪ್ರತಿ ಪಂಚಾಯಿತಿಯಲ್ಲಿ ಸಂಘಗಳ ನೋಂದಣಿ ಮೂಲಕ ಯುವಕರಿಗೆ ಸಮಾಜ ಸೇವೆ ಮಾಡಲು ಪ್ರೋತ್ಸಾಹ ಸಿಗುತ್ತದೆ.

ನವಲಗುಂದ:

ವಿಧಾನಸಭಾ ಕ್ಷೇತ್ರದ 37 ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ನವಲಗುಂದ ಪುರಸಭೆ 4, ಅಣ್ಣಿಗೇರಿ ಪುರಸಭೆ 5 ಸೇರಿ ಒಟ್ಟು 46 ಭಾರತ ಜೋಡೋ ಯುವಕ ಸಂಘ ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದು ಪ್ರತಿ ವರ್ಷ ಈ ಸಂಘಕ್ಕೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.

ಭಾನುವಾರ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಭಾರತ ಜೋಡೋ ಯುವ ಸಂಘ ನೋಂದಣಿ ಸದಸ್ಯತ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮುದಾಯ ಅಭಿವೃದ್ಧಿ, ಕ್ರೀಡೆ, ಫಿಟ್‌ನೆಸ್ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ಯುವಕರನ್ನು ಸಂಘಟಿಸಿ ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ, ರಾಷ್ಟ್ರಪ್ರೇಮ ಹಾಗೂ ಅಭಿವೃದ್ಧಿಯ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಸದೃಢ ಕರ್ನಾಟಕ ನಿರ್ಮಾಣಕ್ಕಾಗಿ ಭಾರತ ಜೋಡೋ ಯುವಕ ಸಂಘಗಳನ್ನು ರಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರತಿ ಸಂಘಕ್ಕೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಲು ಆದೇಶ ಹೊರಡಿಸಿದ್ದಾರೆ ಎಂದರು.

ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಭಾರತ್ ಜೋಡೊ ಯುವ ಸಂಘ ರಚಿಸುವುದರಿಂದ ಯುವಕರಲ್ಲಿ ದೇಶಪ್ರೇಮ ಹಾಗೂ ಸಂಘಟನೆ ಸಾಮಾಜಿಕ ಕಳಕಳಿ ಆರಂಭವಾಗುವುದು. ಪ್ರತಿ ಪಂಚಾಯಿತಿಯಲ್ಲಿ ಸಂಘಗಳ ನೋಂದಣಿ ಮೂಲಕ ಯುವಕರಿಗೆ ಸಮಾಜ ಸೇವೆ ಮಾಡಲು ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೇವಾಡಿ, ಆರ್.ಎಚ್. ಕೋನರಡ್ಡಿ, ಭೂಮಣ್ಣವರ, ವಿಜಯಪ್ಪಗೌಡ ಪಾಟೀಲ, ಸದುಗೌಡ ಪಾಟೀಲ, ಸೋಮಣ್ಣ ಬಳಿಗೇರ, ಮೋದಿನ ಶಿರೂರ, ಜೀವನ ಪವಾರ, ಶಿವಾನಂದ ಗುಡಿಸಲಮನಿ, ಹನಮಂತ ತಳವಾರ, ಹುಸೇನಬಿ ಧಾರವಾಡ, ಮುದಕಣ್ಣ ಕೊರವದ ಸೇರಿ ಹಲವರಿದ್ದರು.