ಪೂರ್ವಾಶ್ರಮದಲ್ಲಿ ಸಿದ್ದರಾಮರಾಗಿದ್ದ ಸಿದ್ಧಲಿಂಗ ಶ್ರೀಗಳು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮೂರು ಸಾವಿರ ಮಠದಲ್ಲಿ ವಿದ್ಯಾಭ್ಯಾಸ ಮಾಡಿದರು. ಈ ವೇಳೆ ಸಿ.ಎಂ. ಮಣ್ಣೂರ ಅವರ ಪ್ರಭಾವ ಶ್ರೀಗಳ ಮೇಲೆ ಅಗಾಧವಾಗಿತ್ತು. ಹಿರಿಯ ಶ್ರೀಗಳ ಆಶಯದಂತೆ ಗದಗ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಯಾದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದರು.
ಅಣ್ಣಿಗೇರಿ:
ಗದಗಿನ ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ನಾಡಿನ ಸಾವಿರಾರು ಮಕ್ಕಳಿಗೆ ಶಿಕ್ಷಣ ದಾಸೋಹದ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದವರು ಎಂದು ಶಿಕ್ಷಕಿ ಸುಮಿತ್ರಾ ಹುಣಸಿಮರದ ಹೇಳಿದರು.ಪಟ್ಟಣದ ತೋಂಟದಾರ್ಯ ಪ್ರಸಾದ ನಿಲಯದಲ್ಲಿ ಬಸವ ಕೇಂದ್ರ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಆಶ್ರಯದಲ್ಲಿ ನಡೆದ ಶರಣ ಶ್ರಾವಣ- 2026 ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಪೂರ್ವಾಶ್ರಮದಲ್ಲಿ ಸಿದ್ದರಾಮರಾಗಿದ್ದ ಸಿದ್ಧಲಿಂಗ ಶ್ರೀಗಳು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮೂರು ಸಾವಿರ ಮಠದಲ್ಲಿ ವಿದ್ಯಾಭ್ಯಾಸ ಮಾಡಿದರು. ಈ ವೇಳೆ ಸಿ.ಎಂ. ಮಣ್ಣೂರ ಅವರ ಪ್ರಭಾವ ಶ್ರೀಗಳ ಮೇಲೆ ಅಗಾಧವಾಗಿತ್ತು. ಹಿರಿಯ ಶ್ರೀಗಳ ಆಶಯದಂತೆ ಗದಗ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಯಾದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಗ್ರಂಥಾಲಯಗಳ ಮಹತ್ವದ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅವರು, ಗದಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ದಾಸೋಹಕ್ಕೆ ಮುನ್ನುಡಿ ಬರೆದರು ಎಂದರು.ತೋಂಟದಾರ್ಯ ಮಠದ ವಿವಿಧ ಶಾಖಾ ಮಠಗಳಿರುವ ಊರುಗಳಲ್ಲಿ ವಿದ್ಯಾಲಯ ಆರಂಭಿಸಿ ಬಡ ಮಕ್ಕಳ ಶಿಕ್ಷಣದ ಕನಸಿಗೆ ಜೀವ ತುಂಬಿದರು. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಸುಧಾ ಕೌಜಗೇರಿ ಮಾತನಾಡಿದರು. ಈ ವೇಳೆ ನಿಂಗಮ್ಮ ಹೂಗಾರ ವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ನಡೆ ಕಲಿಸಿದ ಬಸವಣ್ಣ’ ರೂಪಕ ಗಮನ ಸೆಳೆಯಿತು. ನಿಂಗಮ್ಮ ಹೂಗಾರ ವಿದ್ಯಾಲಯಗಳ ನಿರ್ದೇಶಕ ಶಿವಯೋಗಿ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ಎಸ್. ಹರ್ಲಾಪೂರ ಸೇರಿದಂತೆ ಹಲವರಿದ್ದರು. ಶೈಲಶ್ರೀ ಗುಗ್ಗರಿ ನಿರೂಪಿಸಿದರು.