ಆಸಾರ ಓಣಿಯ ಭವಾನಿಶಂಕರ ಹಾಗೂ ನಾರಾಯಣ ದೇವಸ್ಥಾನದ ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಿ ಪುಷ್ಕರಣಿ ಜಾಗದ ಮರುಸರ್ವೇ ನಡೆಸಿ ಉತ್ಖನನಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ:

ಆಸಾರ ಓಣಿಯ ಭವಾನಿಶಂಕರ ಹಾಗೂ ನಾರಾಯಣ ದೇವಸ್ಥಾನದ ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಿ ಪುಷ್ಕರಣಿ ಜಾಗದ ಮರುಸರ್ವೇ ನಡೆಸಿ ಉತ್ಖನನಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರನ್ನು ಕಚೇರಿಯೊಳಗೆ ತೆರಳದಂತೆ ತಡೆದ ಸದಸ್ಯರು, ಕೂಡಲೇ ಸಿಸಿ ರಸ್ತೆ ತೆರವುಗೊಳಿಸಿ ಪುಷ್ಕರಣಿ ಜಾಗವನ್ನು ಉತ್ಖನನ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರುವ ಭರವಸೆ ದೊರೆಯುವ ವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದು, ಆಯುಕ್ತರ ವಿರುದ್ಧ ಘೋಷಣೆ ಕೂಗಿದರು.

ಸದಸ್ಯ ಸಂತೋಷ ಚವ್ಹಾಣ ಮಾತನಾಡಿ, ಸಾರ್ವಜನಿಕರ ಹಣವನ್ನು ಪಾಲಿಕೆ ಪೋಲು ಮಾಡುತ್ತಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ನಿರ್ಮಿಸಲಾಗಿದೆ. ಸಾರ್ವಜನಿಕರ ಹಿತ ಕಾಪಾಡಬೇಕಾದ ಆಯುಕ್ತರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ಆಯುಕ್ತ ಡಾ. ರುದ್ರೇಶ ಘಾಳಿ, ಅವರು ಪುಷ್ಕರಣಿ ಇದೆ ಎನ್ನಲಾದ ಜಾಗೆಯನ್ನು ಮತ್ತೊಮ್ಮೆ ಸರ್ವೇ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ ಹಿನ್ನೆಲೆ ಸದಸ್ಯರು ಪ್ರತಿಭಟನೆ ಕೈಬಿಟ್ಟರು.

ಈ ವೇಳೆ ಸದಸ್ಯರಾದ ಶಿವು ಮೆಣಸಿನಕಾಯಿ, ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ರಾಧಾಭಾಯಿ ಸಫಾರೆ, ಬೀರಪ್ಪ ಖಂಡೇಕರ, ಚಂದ್ರಕಾ ಮೇಸ್ತ್ರಿ, ಶೀಲಾ ಕಾಟಕರ, ಸುನೀತಾ ಮಾಳದಕರ ಸೇರಿದಂತೆ ಹಲವರಿದ್ದರು. ಪುಷ್ಕರಣಿ ಇಲ್ಲವೆಂದು 2023ರಲ್ಲೇ ವರದಿ: ಘಾಳಿ

ಪುಷ್ಕರಣಿ ಜಾಗೆಯನ್ನು ಈ ಹಿಂದೆಯೇ ಸರ್ವೇ ಮಾಡಲಾಗಿದ್ದು, ಅಲ್ಲಿ ಪುಷ್ಕರಣಿ ಇದ್ದ ಬಗ್ಗೆ ಯಾವುದೇ ಕುರುಹುಗಳಿಲ್ಲ ಎಂದು 2023ರಲ್ಲಿ ಪುರಾತತ್ವ ಇಲಾಖೆ ಪಾಲಿಕೆಗೆ ವರದಿ ನೀಡಿತ್ತು. ಸದಸ್ಯರ ಅನುದಾನದಲ್ಲಿ ಪಾಲಿಕೆಯ ಸ್ವಂತ ಆಸ್ತಿಯಲ್ಲೇ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ಸುದ್ದಿಗಾರರೊಂದಿಗೆ ದೇವಸ್ಥಾನದ ಸುತ್ತಮುತ್ತ ವಾಸಿಸುವವರಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಗೆ ಮತ್ತೊಮ್ಮೆ ಸರ್ವೇ ನಡೆಸುವಂತೆ ಪತ್ರ ಬರೆಯಲಾಗುವುದು. ದೇವಸ್ಥಾನದ ಸುತ್ತಲಿನ ಮನೆಗಳ ತೆರವು ಪಾಲಿಕೆಯಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕಾಗಿ ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.